ನವದೆಹಲಿ,ಜ.8- 2002ರ ಗೋದ್ರಾ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್‍ಬಾನು ಅತ್ಯಾಚಾರ ಪ್ರಕರಣದಲ್ಲಿ 11 ಆರೋಪಿಗಳನ್ನು ಅವಧಿಪೂರ್ವ ಮುನ್ನ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗ ಗುಜರಾತ್ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದ್ದು, ಅವಧಿಗೂ ಪೂರ್ವ ಬಿಡುಗಡೆಯಾಗಿದ್ದ 11 ಆರೋಪಿಗಳು ಈಗ ಪುನಃ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿಲ್ಕಿಸ್ ಬಾನು ಹೊರತಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಮಹುವಾ ಮೊಯಿತ್ರಾ, ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲೌಲ್ ಹಾಗೂ ಲಕ್ನೋ ವಿವಿಯ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಸಹಿತ ಹಲವರು ಗುಜರಾತ್ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‍ನ ಕದ ತಟ್ಟಿದ್ದರು.
ಕಳೆದ ವರ್ಷ ಅಕ್ಟೋಬರ್‍ನಲ್ಲಿ 11 ದಿನಗಳ ಕಾಲ ಅರ್ಜಿಗಳ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಎರಡು ಕಡೆಯ ವಾದ ಆಲಿಸಿದ್ದ ನ್ಯಾಯಾಲಯ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿತ್ತು. ತೀರ್ಪನ್ನು ಪ್ರಕಟಿಸಿದ ಸುಪ್ರಿಂಕೋರ್ಟ್‍ನ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಉಜ್ವಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಗುಜರಾತ್ ಸರ್ಕಾರ ತೆಗೆದುಕೊಂಡ ತೀರ್ಮಾನ ಸಮರ್ಥವಾಗಿಲ್ಲ. ಇದೊಂದು ವಂಚನೆ ಕಾಯ್ದೆ ಎಂದು ತನ್ನ ಆದೇಶದಲ್ಲಿ ಖಾರವಾಗಿಯೇ ಹೇಳಿದೆ.
ಯಶ್ ಕಟೌಟ್ ಕಟ್ಟುವಾಗ ವಿದ್ಯುತ್ ತಗುಲಿ ಮೂವರು ಅಭಿಮಾನಿಗಳ ಸಾವು
ಅಲ್ಲದೆ ಅರ್ಜಿದಾರರಲ್ಲಿ ಒಬ್ಬರಾಗಿದ್ದ ಬಿಲ್ಕಿಸ್‍ಬಾನು ಸಲ್ಲಿಸಿರುವ ಅರ್ಜಿಯು ಮಾನ್ಯವಾಗಿದ್ದು, ವಿಚಾರಣೆ ಮುಂದುವರೆಯುತ್ತದೆ ಎಂದು ಹೇಳಿದ ನ್ಯಾಯಾಲಯ, ಅಪರಾಧಿಗಳ ಶೀಘ್ರ ಬಿಡುಗಡೆ ಕುರಿತು ಆದೇಶವನ್ನು ಹೊರಡಿಸಲು ಗುಜರಾತ್ ಸರ್ಕಾರಕ್ಕೆ ಅಧಿಕಾರವಿಲ್ಲ. ಏಕೆಂದರೆ ಈ ಪ್ರಕರಣದ ವಿಚಾರಣೆ ನಡೆದಿದ್ದು ಮಹಾರಾಷ್ಟ್ರದಲ್ಲಿ. ಹಾಗಾಗಿ ಇಲ್ಲಿನ ಸರ್ಕಾರಕ್ಕೆ ಮಾತ್ರ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇದೆ. ಈ ಬಿಡುಗಡೆ ಆದೇಶದಲ್ಲಿ ಸಾಮಥ್ರ್ಯದ ಕೊರತೆ ಇದೆ. ಆ ಕಾರಣದಿಂದ ಈ ಬಿಡುಗಡೆ ಆದೇಶವನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿತು.
1992ರ ಶಿಕ್ಷೆ ಕಡಿತ (ರೆಮಿಷನ್) ನೀತಿಯಾನುಸಾರ ಗುಜರಾತ್ ಸರ್ಕಾರ ಅಪರಾಧಿಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಈ ಕಾನೂನಿನ ಸ್ಥಾನದಲ್ಲಿ 2014ರಲ್ಲಿ ಜಾರಿಗೊಳಿಸಲಾದ ಕಾನೂನಿನ ಪ್ರಕಾರ ದೊಡ್ಡ ಶಿಕ್ಷೆ ಎದುರಿಸುವ ಪ್ರಕರಣಗಳಲ್ಲಿ ಶಿಕ್ಷೆ ಕಡಿತಗೊಳಿಸುವುದನ್ನು ನಿಷೇಧಿಸಲಾಗಿದೆ. ಈ 11 ಮಂದಿಗೆ 2008ರಲ್ಲಿ ಶಿಕ್ಷೆ ವಿಧಿಸಲಾಗಿದ್ದರಿಂದ 1992 ರ ನೀತಿ ಅವರಿಗೆ ಅನ್ವಯಿಸುತ್ತದೆ ಎಂದು ಗುಜರಾತ್ ಸರ್ಕಾರದ ಪರ ವಾದಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಹೇಳಿದ್ದರು.
ಪ್ರಕರಣದ ಹಿನ್ನಲೆ:
2022ರ ಸ್ವಾತಂತ್ರ್ಯ ದಿನದಂದು ಗುಜರಾತ್ ಸರ್ಕಾರವು 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಈ ಆದೇಶವು ವಿರೋಧ ಪಕ್ಷ ಹಾಗೂ ಸಾರ್ವಜನಿಕರ ಖಂಡನೆ ಹಾಗೂ ಆಕ್ರೋಶಕ್ಕೆ ಗುರಿಯಾಗಿತ್ತು.
ಅಪರಾಧಿಗಳ ಬಿಡುಗಡೆ ವೇಳೆ ಅವರಿಗೆ ಅದ್ಧೂರಿ ಸ್ವಾಗತವನ್ನು ನೀಡಲಾಗಿತ್ತು. ಅಪರಾಧಿಗಳ ಜತೆಗೆ ಬಿಜೆಪಿ ಸಂಸದರು, ಶಾಸಕರು, ವೇದಿಕೆಯನ್ನು ಹಂಚಿಕೊಂಡಿದ್ದರು.
ಈ ಸುದ್ದಿಯು ಭಾರೀ ಸದ್ದು ಮಾಡಿತ್ತು. ಇನ್ನು ಈ ಅಪರಾಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಶಾ ಅವರು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದರು, ಇದನ್ನು ಸುಪ್ರೀಂಕೋರ್ಟ್‍ನ ಗಮನಕ್ಕೆ ತರಲಾಗಿತ್ತು. 2022ರ ಆಗಸ್ಟ್‍ನಲ್ಲಿ ದೋಷಿಗಳ ಬಿಡುಗಡೆಗೆ ನಿರ್ಧಾರ ಕೈಗೊಂಡ ಪ್ರಕ್ರಿಯೆಗಳನ್ನು ಒಳಗೊಂಡ ಮೂಲ ಕಡತಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.
ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮನೆ ಸೇರಿ 10 ಕಡೆ ಇಡಿ ದಾಳಿ
ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂಬ ಕುರಿತು ತಮಗೂ ಮಾಹಿತಿ ನೀಡಲಾಗಿರಲಿಲ್ಲ ಎಂದು ಸಂತ್ರಸ್ತೆ ಬಿಲ್ಕಿಸ್ ಬಾನು ಹೇಳಿದ್ದರು. ಗುಜರಾತ್‍ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಗಳ ವೇಳೆ ತಪ್ಪಿಸಿಕೊಳ್ಳುವ ಸಂದರ್ಭ ಆಗ 21 ವರ್ಷದವರಾಗಿದ್ದ ಹಾಗೂ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಕೆಯ ಮೂರು ವರ್ಷದ ಪುತ್ರಿ ಸಹಿತ ಏಳು ಕುಟುಂಬ ಸದಸ್ಯರನ್ನೂ ಹತ್ಯೆಗೈಯ್ಯಲಾಗಿತ್ತು.
ಆರೋಪಿಗಳು:
ರಾಧೇಶ್ಯಾಮ್ ಷಾ, ಜಸ್ವಂತ್ ಚತುರ್ಭಾಯಿ ನಾಯ್, ಕೇಶುಭಾಯಿ ವದನಿಯಾ, ಬಕಾಭಾಯಿ ವಡಾನಿಯಾ, ರಾಜೀಭಾಯಿ ಸೋನಿ, ರಮೇಶಭಾಯಿ ಚೌಹಾಣ್, ಶೈಲೇಶಭಾಯ್ ಭಟ್, ಬಿಪಿನ್ ಚಂದ್ರ ಜೋಶಿ, ಗೋವಿಂದಭಾಯ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋಯಾ ಅವರಿಗೆ ಜೀವಾವ ಶಿಕ್ಷೆ ವಿಧಿಸಲಾಗಿದೆ.