Friday, November 22, 2024
Homeರಾಜ್ಯಬೂದಿ ಮುಚ್ಚಿದ ಕೆಂಡವಾದ ಶಿವಮೊಗ್ಗ

ಬೂದಿ ಮುಚ್ಚಿದ ಕೆಂಡವಾದ ಶಿವಮೊಗ್ಗ

ಶಿವಮೊಗ್ಗ, ಅ.2- ನಗರದ ಹೊರವಲಯದ ರಾಗಿಗುಡ್ಡದಲ್ಲಿ ಈದ್‍ಮಿಲಾದ್ ಮೆರವಣಿಗೆಯ ವೇಳೆ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ನಿನ್ನೆ ಈದ್‍ಮಿಲಾದ್ ಪ್ರಯುಕ್ತವಾಗಿ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಅಳವಡಿಸಲಾಗಿದ್ದ ಕಟೌಟ್ ಕುರಿತಂತೆ ಅಸಮಾಧಾನಗೊಂಡಿದ್ದ ಕೆಲವರು ಆಯೋಜಕರ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ.

ಕೆಲವು ಕಿಡಿಗೇಡಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ. ನಂತರ ಉಭಯ ಗುಂಪುಗಳ ನಡುವೆ ಕಲ್ಲು ತೂರಾಟ ಹೆಚ್ಚಾಗಿದ್ದು, 7 ಕ್ಕೂ ಹೆಚ್ಚು ಕಾರುಗಳು, ಹಲವು ಮನೆಗಳ ಕಿಟಕಿ ಗಾಜುಗಳು ಜಖಂಗೊಂಡಿವೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ. ದುಷ್ಕರ್ಮಿಗಳು ಕೆಲವರ ಮನೆಗಳಿಗೆ ನುಗ್ಗಿ ದಾಳಿ ಮಾಡುವ ಪ್ರಯತ್ನ ನಡೆಸಿದ್ದಾರೆ.

ಪೊಲೀಸರು ಮಧ್ಯಪ್ರವೇಶ ಮಾಡಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿನ್ನೆ ಮೆರವಣಿಗೆಯ ಸಂದರ್ಭದಲ್ಲಿ ಜಿಲ್ಲಾ ಎಸ್ಪಿ ಮಿಥುನ್‍ಕುಮಾರ್‍ರವರು ಇದ್ದರು. ರಾಗಿಗುಡ್ಡದಲ್ಲಿ ಗಲಭೆ ನಡೆಯುತ್ತಿದ್ದ ಮಾಹಿತಿ ತಿಳಿದು ಸ್ಥಳಕ್ಕೆ ನಾಲ್ಕು ಮಂದಿ ಸಿಬ್ಬಂದಿಗಳೊಂದಿಗೆ ಖುದ್ದು ಭೇಟಿ ನೀಡಿದ ಎಸ್‍ಪಿ ಅವರ ಮೇಲೂ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಈ ವೇಳೆ ನಡೆದ ಗುಂಪು ಸಂಘರ್ಷದಲ್ಲಿ ಎಸ್‍ಪಿಯವರ ಗನ್‍ಮ್ಯಾನ್ ಸಿಲುಕಿಕೊಂಡಿದ್ದರು.

ಪೊಲೀಸ್ ಸಿಬ್ಬಂದಿಗಳಿಂದಲೇ ಯುವತಿಗೆ ಲೈಂಗಿಕ ಕಿರುಕುಳ

ಪೊಲೀಸರ ಮೇಲೂ ಭಾರೀ ಗಾತ್ರದ ಕಲ್ಲುತೂರಾಟ ನಡೆಸಲಾಗಿದೆ. ಮನೆಗಳ ಮೇಲೂ ಬೃಹತ್ ಗಾತ್ರದ ಕಲ್ಲುಗಳು ಬಿದ್ದಿವೆ. ಸ್ಥಳದಿಂದ ತಪ್ಪಿಸಿಕೊಂಡ ಇಬ್ಬರು ಹುಡುಗರು 200 ಮೀಟರ್ ದೂರದಲ್ಲಿ ಮನೆಯೊಂದರ ಮುಂದೆ ಕುಳಿತಿದ್ದರು. ಅವರನ್ನು ಬೆನ್ನಟ್ಟಿ ಬಂದ ಗುಂಪೊಂದು ಎಳೆದುಕೊಂಡು ಹೋಗುವಾಗ ತಳ್ಳಾಟ, ನೂಕಾಟ ನಡೆದಿದೆ. ಸಂಘರ್ಷದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಅದರಲ್ಲಿ 5 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ 50 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದೆ. ಹೆಚ್ಚಿನ ಪೊಲೀಸ್ ಬಂದೊಬಸ್ತ್ ಆಯೋಜಿಸಲಾಗಿದೆ.

ಆರ್‍ಎಎಫ್, ಕೆಎಸ್‍ಆರ್‍ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಲಾಗಿದೆ. ಅದರಲ್ಲೂ ರಾಗಿಗುಡ್ಡ ಪ್ರದೇಶವನ್ನೊಳಗೊಂಡ ಶಾಂತಿನಗರಕ್ಕೆ ಸಂಚರಿಸುವ ಪ್ರತಿ ವಾಹನವನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಮತ್ತು ಹೊರಗಿನವರು ಎಂದು ಭಾವಿಸಲಾದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿರುವುದರಿಂದ ಪ್ರದೇಶದಲ್ಲಿ ಅಘೋಷಿತ ಬಂದ್‍ನ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಗಲಾಟೆಯ ಬಳಿಕ ಸ್ಥಳೀಯ ಮಹಿಳೆಯರು ಆತಂಕ ವ್ಯಕ್ತಪಡಿಸಿ ತೋಡಿಕೊಂಡ ಅಳಲಿನ ಧ್ವನಿಗಳು ವ್ಯಾಪಕ ವೈರಲ್ ಆಗಿವೆ. ಆಕ್ಷೇಪಾರ್ಹ ಕಟೌಟ್‍ನ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಕೋಲಾರದಲ್ಲಿ ಇದೇ ರೀತಿಯ ಕಟೌಟ್ ಕಂಡುಬಂದಿತ್ತು.

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ಆಚರಣೆಯಾಗಬೇಕಾಗಿದ್ದ ಈದ್‍ಮಿಲಾದ್ ಹಬ್ಬದ ವೇಳೆ ಅಹಿತಕರ ಘಟನೆಗಳು ನಡೆಯುವ ಮೂಲಕ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಎಸ್ಪಿ ಮಿಥುನ್‍ಕುಮಾರ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮೆರವಣಿಗೆ ವೇಳೆ ದಾಂಧಲೆ ಮಾಡಲು ಕೆಲವರು ತಯಾರಿ ಮಾಡಿಕೊಂಡಿದ್ದರು. ಅದನ್ನು ನಿಯಂತ್ರಿಸಲು ನಾವು ಬಲಪ್ರಯೋಗ ಮಾಡಬೇಕಾಯಿತು. ತಕ್ಷಣವೇ ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರು ಮತ್ತು ಆಸ್ತಿ ನಷ್ಟಕ್ಕೊಳಗಾದವರು ದೂರು ನೀಡಲು ಸೂಚಿಸಿದ್ದೇವೆ.

ಜಾಗತಿಕ ಅಧಿಕಾರ ಹಂಚಿಕೆ ರಚನೆಯಲ್ಲಿ ಹಿಂದೂಗಳು ಪ್ರಮುಖ ಪಾತ್ರ ನಿರ್ವಹಿಸಲು ಕರೆ

ಘಟನೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಡ್ರೋನ್ ಮೂಲಕವೂ ಚಿತ್ರೀಕರಿಸಿರುವುದರಿಂದ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗುತ್ತಿದೆ. ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬ ಬಗ್ಗೆ ನಂತರ ವಿವರಣೆ ನೀಡಲಾಗುವುದಾಗಿ ಎಸ್ಪಿಯವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಥಳೀಯ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂತಹ ಘಟನೆಗಳಲ್ಲಿ ಶಾಂತಿ ಬಯಸುವವರು ಮುಕ್ತ ಮನಸ್ಸಿನಿಂದ ಯೋಚಿಸಬೇಕು. ಯಾವುದೇ ವಿಕೃತಗಳಿಗೆ ಅವಕಾಶ ನೀಡಬಾರದು. ಹೊರಗಿನಿಂದ ಬಂದವರು ಈ ರೀತಿಯ ಕೃತ್ಯಗಳನ್ನು ಮಾಡುತ್ತಾರೆಂದು ಹೇಳಲಾಗುತ್ತಿದೆ.

ಅವರಿಗೆ ಸ್ಥಳೀಯರು ಸಹಕಾರ ನೀಡುತ್ತಿರುವುದು ರಹಸ್ಯವೇನಲ್ಲ, ಹೊರಗಿನಿಂದ ಬಂದವರು ಎಂಥವರು, ಯಾವ ಉದ್ದೇಶಕ್ಕೆ ಬರುತ್ತಿದ್ದಾರೆಂದು ಅರಿತುಕೊಂಡು ಎಚ್ಚೆತ್ತುಕೊಳ್ಳದಿದ್ದರೆ ಶಾಂತಿಪಾಲನೆ ಕಷ್ಟಸಾಧ್ಯವಾಗುತ್ತದೆ. ಈ ಬಗ್ಗೆ ಸಮುದಾಯ ಸ್ವಯಂ ಕಾಳಜಿ ವಹಿಸಬೇಕೆಂದು ಕರೆ ನೀಡಿದ್ದಾರೆ.

RELATED ARTICLES

Latest News