ನವದೆಹಲಿ, ಜ.9- ಕ್ರೀಡಾ ಲೋಕದ ದಿಗ್ಗಜ ಧ್ಯಾನ್‍ಚಂದ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ದಿನಾಚರಣೆಯಾಗಿ ಆಚರಿಸುತ್ತಿದ್ದು, ಈ ದಿನದ ಸವಿನೆನಪಿಗಾಗಿ ವರ್ಷದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.
ದೇಶದ ಅತ್ಯುನ್ನತ ಎರಡನೇ ಕ್ರೀಡಾ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿಗೆ 2023ರಲ್ಲಿ ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಪಾತ್ರರಾಗಿದ್ದಾರೆ, ಆ ಮೂಲಕ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್‍ಕೊಹ್ಲಿ ಅವರು ಇರುವ ಎಲೈಟ್ ಗುಂಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆ ಕ್ರಿಕೆಟ್‍ನಲ್ಲಿ ಅಪ್ರತಿಮ ಸಾಧನೆ ಮಾಡಿರುವ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರು ರಾಷ್ಟ್ರಪತಿಗಳಿಂದ ಈ ಅಪ್ರತಿಮ ಪ್ರಶಸ್ತಿಯನ್ನು ಪಡೆದಿದ್ದಾರೆ. 1970ರಲ್ಲಿ ಮೊಟ್ಟ ಮೊದಲ ಬಾರಿಗೆ ಟೀಮ್‍ಇಂಡಿಯಾದ ಮಾಜಿ ಕ್ರಿಕೆಟಿಗ ದಿಲೀಪ್ ಸರ್‍ದೇಸಾಯಿ ಅವರು ಮೊದಲ ಬಾರಿಗೆ ಈ ಅತ್ಯುತ್ತಮ ಪ್ರಶಸ್ತಿ ಪಡೆದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಟೀಮ್ ಇಂಡಿಯಾಗೆ ವಿಶ್ವಕಪ್ ಟ್ರೋಫಿ ಗೆದ್ದುಕೊಟ್ಟಿದ್ದ ಕಪಿಲ್‍ದೇವ್ (1979), ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (1994), ಸೌರವ್ ಗಂಗೂಲಿ (1997), ನಯನ್ ಮೊಂಗಿಯಾ (1998), ವಿರಾಟ್ ಕೊಹ್ಲಿ (2013), ರೋಹಿತ್ ಶರ್ಮಾ (2015) ಸೇರಿದಂತೆ ಹಲವು ಖ್ಯಾತ ಕ್ರಿಕೆಟಿಗರಿಗೆ ಈ ಪ್ರಶಸ್ತಿ ಲಭಿಸಿದೆ.
ಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್
ಈ ಪ್ರತಿಷ್ಠಿತ ಪ್ರಶಸ್ತಿ ಪಡೆದವರ ಸಾಲಿನಲ್ಲಿ ಕನ್ನಡಿಗರು ಕೂಡ ಹಿಂದೆ ಬಿದ್ದಿಲ್ಲ, ಟೀಮ್ ಇಂಡಿಯಾದ ಖ್ಯಾತ ಸ್ಪಿನ್ನರ್ ಬಿ.ಎಸ್.ಚಂದ್ರಶೇಖರ್ ಅವರು ಈ ಪ್ರಶಸ್ತಿಗೆ ಪಾತ್ರರಾದ ಮೊದಲ ಕನ್ನಡಿಗ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಗುಂಡಪ್ಪ ವಿಶ್ವನಾಥ್ (1977), ಸಯ್ಯದ್ ಕೀರ್ಮಾನಿ (1980), ಅನಿಲ್ ಕುಂಬ್ಳೆ (1995), ಜವಾಗಲ್ ಶ್ರೀನಾಥ್ (1996), ರಾಹುಲ್ ದ್ರಾವಿಡ್ (1998), ವೆಂಕಟೇಶ್ ಪ್ರಸಾದ್ (2000) ಅವರು ಕೂಡ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.