ತುಮಕೂರು,ಜ.10- ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಶಿವಮೊಗ್ಗಕ್ಕೆ ಮಾತ್ರ ಗೀತಾ ಶಿವರಾಜ್ಕುಮಾರ್ ಅವರನ್ನು ಕಣಕ್ಕಿಳಿಸುವುದಾಗಿ ಕೆಪಿಸಿಸಿ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಬಗ್ಗೆ ಚರ್ಚೆಗಳು ಮುಂದುವರೆದಿವೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಶಿವಮೊಗ್ಗದಿಂದ ನಟ ಶಿವರಾಜ್ಕುಮಾರ್ರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಗೀತಾ ಅವರನ್ನು ಕಣಕ್ಕಿಳಿಸಲಾಗುವುದು. ಆ ಕುಟುಂಬಕ್ಕೆ ಅವಕಾಶ ನೀಡುವುದಾಗಿ ತಿಳಿಸಿದರು.
ಅದೊಂದು ಕ್ಷೇತ್ರ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿರಬಹುದು ಎಂದು ಹೇಳಿದರು. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಬಗ್ಗೆ ಇತ್ತೀಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಜೊತೆ ಚರ್ಚಿಸಲಾಯಿತು. ನಾವು 7 ಮಂದಿ ಸಚಿವರು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಬಗ್ಗೆ ಹೈಕಮಾಂಡ್ ಗಮನ ಸೆಳೆದಿದ್ದೇವೆ ಎಂದರು.
ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಬಳಿಕ ಸರ್ಕಾರ ರಚಿಸಿದ ಬಿಜೆಪಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದೆ. ಅದೇ ರೀತಿ ರಾಜ್ಯದಲ್ಲಿ ಸಮುದಾಯಗಳಿಗೆ ಆದ್ಯತೆ ಕೊಟ್ಟರೆ ಲೋಕಸಭೆ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂದು ನಾವು ಸಲಹೆ ನೀಡಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸದ್ಯಕ್ಕೆ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಯನ್ನು ಸೃಷ್ಟಿಸುವುದಿಲ್ಲ ಎಂದು ಹೇಳಿದ್ದಾದರೆ ಅದೇ ಅಂತಿಮ ನಿರ್ಧಾರವಾಗಿರುತ್ತದೆ. ಪಕ್ಷದ ಹಿತದೃಷ್ಟಿಯಿಂದ ನಾವು ಸಲಹೆ ನೀಡಿದ್ದೆವು. ಪಕ್ಷದ ಅಧ್ಯಕ್ಷರು ಬೇಡ ಎನ್ನುವುದಾದರೆ ನಮ್ಮ ಅಭ್ಯಂತರ ಇಲ್ಲ ಎಂದರು.
ತಮ್ಮ ಸ್ಪರ್ಧೆಯಿಲ್ಲ :
ಈ ಮೊದಲು ಲೋಕಸಭೆ ಚುನಾವಣೆಯಲ್ಲಿ ಸ್ರ್ಪಸುವುದಾಗಿ ನಾನು ತಿಳಿಸಿದ್ದೆ. ಇದು ನನ್ನ ಕೊನೆ ಚುನಾವಣೆ. ಇನ್ನು ಮುಂದೆ ಚುನಾವಣಾ ರಾಜಕೀಯದಲ್ಲಿ ಮುಂದುವರೆಯುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡಿದ್ದೇನೆ. ಹಲವಾರು ಸಭೆಗಳಲ್ಲೂ ತಿಳಿಸಿದ್ದೇನೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ತಾವು ಸ್ರ್ಪಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪುಟದಲ್ಲಿ ಸಚಿವರಾಗಿರುವವರನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ನಿರ್ಧಾರಗಳಾಗಿಲ್ಲ. ಆದರೆ ಅನಿವಾರ್ಯ ಸಂದರ್ಭ ಬಂದರೆ ಸಚಿವರೂ ಕೂಡ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ಹೈಕಮಾಂಡ್ ತಿಳಿಸಿದೆ. ಆ ಪಟ್ಟಿಯಲ್ಲಿ ತಮ್ಮ ಹೆಸರು ಬಂದರೆ ತಾವು ಸ್ಪರ್ಧೆ ಮಾಡಲು ಸಿದ್ಧ ಎಂದು ಹೇಳಿದರು.
ಕರ್ನಾಟಕ ಪೊಲೀಸ್ ಇಲಾಖೆಗೆ ಸರ್ಜರಿ ಅಗತ್ಯವಿದೆ : ಶಿವರಾಜ್‍ಕುಮಾರ್
ನಾಳೆ ಸಂಪುಟದ ಎಲ್ಲಾ ಸಚಿವರೂ ದೆಹಲಿಗೆ ಭೇಟಿ ನೀಡುತ್ತಿದ್ದು, ಕಾಂಗ್ರೆಸ್ನ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ಎಸ್.ಬಿ.ಮುದ್ದಹನುಮೇಗೌಡ ಇಂದು ಬೆಳಿಗ್ಗೆ ತಮ್ಮನ್ನು ಸೌಜನ್ಯ ಭೇಟಿ ಮಾಡಿದರು.
ಅವರನ್ನು ಕಾಂಗ್ರೆಸ್ಗೆ ಕರೆತರುವ ಬಗ್ಗೆ ತಾವು ಯಾವುದೇ ಪ್ರಯತ್ನ ಮಾಡಿಲ್ಲ. ಸದ್ಯಕ್ಕೆ ಅವರು ಬಿಜೆಪಿಯಲ್ಲಿದ್ದಾರೆ. ಅವರ ರಾಜಕೀಯ ನಿರ್ಧಾರಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಅವರು ಕಾಂಗ್ರೆಸ್ಗೆ ಬರುತ್ತಾರೆ. ಪಕ್ಷ ಟಿಕೆಟ್ ಕೊಡುತ್ತದೆ ಎಂಬೆಲ್ಲಾ ಊಹೆಗಳಿಗೆ ನಾನು ಉತ್ತರ ಕೊಡಲಾಗುವುದಿಲ್ಲ. ಒಂದು ವೇಳೆ ಅವರು ಕಾಂಗ್ರೆಸ್ಗೆ ಬಂದರೆ ಸ್ವಾಗತಿಸುತ್ತೇನೆ ಎಂದರು.