ಬಳ್ಳಾರಿ,ಜ.10- ಇಲ್ಲಿನ ಮಹಾನಗರ ಪಾಲಿಕೆಗೆ ಕಾಂಗ್ರೆಸ್ ಸದಸ್ಯೆ ಬಿ.ಶ್ವೇತಾ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.ಬಳ್ಳಾರಿ ಜಿಲ್ಲಾ ಕಾಂಗ್ರೆಸ್ನಲ್ಲಿದ ಒಡಕುಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಿದ್ದರಿಂದಾಗಿ ಕೈ ಅಭ್ಯರ್ಥಿ ಗೆಲುವು ಸುಲಭವಾಗಿದೆ.
ಮೇಯರ್ ಚುನಾವಣೆಯಲ್ಲಿ 5 ಮಂದಿ ಪಕ್ಷೇತರ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಪಕ್ಷದಲ್ಲಿ ಪಾಲಿಕೆ ಸದಸ್ಯರಾದ ಕುಬೇರ, ಮಿಂಚು ಶ್ರೀನಿವಾಸ್ ಅವರು ಮೇಯರ್ ಹುದ್ದೆಯ ಆಕಾಂಕ್ಷಿಗಳಾಗಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಬಿ.ನಾಗೇಂದ್ರ ಅವರ ಪ್ರಭಾವದಿಂದಾಗಿ ಬಿ.ಶ್ವೇತಾ ಹೈಕಮಾಂಡ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 29 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ.ನಾಗೇಂದ್ರ, ಮೇಯರ್ ಆಯ್ಕೆ ಹೈಕಮಾಂಡ್ ನಿರ್ಧಾರದಂತೇ ನಡೆದಿದೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿದ್ದೇವೆ ಎಂದರು.ಬಳ್ಳಾರಿ ಶಾಸಕ ಭರತ್ ರೆಡ್ಡಿ ಮತ್ತು ತಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಅವರು ನನ್ನ ಸಹೋದರನಿದ್ದಂತೆ. ಪಕ್ಷದ ಸಿದ್ಧಾಂತದ ಮೇಲೆ ನಮ್ಮ ನಿಲುವುಗಳಿವೆ. ಬಿಜೆಪಿಯವರು ನಮ್ಮ ನಡುವೆ ಒಡಕು ಮೂಡಲಿದೆ ಎಂದು ಕಾಯುತ್ತಿದ್ದಾರೆ. ಆದರೆ ನಮ್ಮ ಮುಂದೆ ಅವರ ಆಟ ನಡೆಯುವುದಿಲ್ಲ ಎಂದು ತಿಳಿಸಿದರು.
ನಮ್ಮಲ್ಲಿ ಸಣ್ಣ ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ಒಡಕುಗಳಾಗಲೀ, ಗುಂಪುಗಳಾಗಲೀ ಇಲ್ಲ. ಅಭ್ಯರ್ಥಿಗಳ ಆಯ್ಕೆ ವಿಷಯವಾಗಿ ಬೇರೆ ಅಭಿಪ್ರಾಯಗಳು ಸಹಜ. ಇದು ಶಾಸಕರ ಅಥವಾ ಸಚಿವರ ಪ್ರತಿಷ್ಠೆಯ ವಿಷಯವಲ್ಲ. ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ವಿಚಾರ. ನಮ್ಮ ಒಡಕು ವಿರೋಧ ಪಕ್ಷದವರಿಗೆ ತೀರಾ ಹಿನ್ನಡೆಯುಂಟು ಮಾಡಿದೆ ಎಂದು ಹೇಳಿದರು. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.