ಬೆಂಗಳೂರು,ಮೇ 28- ಒಂದು ರಾಜ್ಯದ ಮುಖ್ಯಮಂತ್ರಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ವೇಳೆ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಖುದ್ದು ಹಾಜರಿರಬೇಕೇ? ಇಲ್ಲವೇ ಅವರ ಗೈರು ಹಾಜರಿಯಲ್ಲಿ ರಾಜೀನಾಮೆ ನೀಡಬಹುದೇ?.
ಸಾಂವಿಧಾನಿಕ ನಿಯಮಗಳ ಪ್ರಕಾರ, ಮುಖ್ಯಮಂತ್ರಿ ರಾಜೀನಾಮೆ ನೀಡಲು ರಾಜ್ಯಪಾಲರು ಭೌತಿಕವಾಗಿ ಎದುರಲ್ಲೇ ಇರಬೇಕು ಎಂಬ ಯಾವುದೇ ಕಡ್ಡಾಯ ನಿಯಮ ಇಲ್ಲ. ಮುಖ್ಯಮಂತ್ರಿ ತಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರನ್ನು ಉದ್ದೇಶಿಸಿ ಬರೆದು ಅಧಿಕೃತ ಸರ್ಕಾರಿ ಚಾನೆಲ್‌ಗಳ ಮೂಲಕ ಕಳುಹಿಸಬಹುದು. ಸಾಮಾನ್ಯವಾಗಿ ಮುಖ್ಯಮಂತ್ರಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ನೇರವಾಗಿ ಭೇಟಿಯಾಗಿ ರಾಜೀನಾಮೆ ಪತ್ರ ಹಸ್ತಾಂತರಿಸುವುದು ರಾಜಕೀಯ ಸಂಪ್ರದಾಯವಾಗಿದೆ.
ಆದರೆ, ಅದು ಕಾನೂನುಬದ್ಧ ಕಡ್ಡಾಯವಲ್ಲ. ಭಾರತೀಯ ಸಂವಿಧಾನದ ವಿಧಿ 164(1) ಪ್ರಕಾರ, ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ ಹಾಗೂ ಸಚಿವ ಸಂಪುಟ ರಾಜ್ಯಪಾಲರ ಇಚ್ಛೆಯ ಮೇರೆಗೆ ಅಧಿಕಾರದಲ್ಲಿ ಮುಂದುವರಿಯುತ್ತದೆ. ಹೀಗಾಗಿ ಮುಖ್ಯಮಂತ್ರಿ ಕಳುಹಿಸುವ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ಅಧಿಕೃತವಾಗಿ ಅಂಗೀಕರಿಸಿದ ಬಳಿಕವೇ ರಾಜೀನಾಮೆ ಜಾರಿಗೆ ಬಂದಂತೆ ಪರಿಗಣಿಸಲಾಗುತ್ತದೆ.
ಸಾಂವಿಧಾನಿಕ ನಿಯಮಗಳ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರವನ್ನು ವಿಶೇಷ ಕಾರ್ಯದರ್ಶಿಗೆ ಸಲ್ಲಿಸಿದರೆ, ಅವರು ರಾಜ್ಯಪಾಲರು ಇಂದೋರ್ ಪ್ರವಾಸ ಮುಗಿಸಿ ವಾಪಸ್ ಬಂದ ತಕ್ಷಣ ಅದನ್ನು ಅವರ ವಿವೇಚನೆಗೆ ಕಳುಹಿಸಿಕೊಡಲಿದ್ದಾರೆ.
ಆದರೆ, ಕೇವಲ ಪತ್ರ ತಲುಪಿದ ತಕ್ಷಣ ರಾಜೀನಾಮೆ ಅಂಗೀಕಾರವಾಗುವುದಿಲ್ಲ. ರಾಜೀನಾಮೆ ಅಂಗೀಕರಿಸುವ ಮುನ್ನ ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಖುದ್ದಾಗಿ ಲೋಕಭವನಕ್ಕೆ ಕರೆಸಿ, ಮುಖಾಮುಖಿ ಮಾತುಕತೆ ನಡೆಸಿದ ಬಳಿಕವಷ್ಟೇ ಅದಕ್ಕೆ ಅಧಿಕೃತ ಮುದ್ರೆ ಒತ್ತಲಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರು ಮತ್ತೊಮೆ ಲೋಕಭವನಕ್ಕೆ ಭೇಟಿ ನೀಡಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ ಸ್ಥಾನಕ್ಕೆ ಯಾವುದೇ ಸಂದರ್ಭದಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕಾದರೆ ನೇರವಾಗಿ ಲೋಕಭವನಕ್ಕೆ ತೆರಳಿ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ನೀಡಬೇಕು. ಅದನ್ನು ಪರಿಶೀಲಿಸಿ ಸ್ಪಷ್ಟನೆ ಕೇಳಿದ ನಂತರ ಅಂಗೀಕರಿಸಬೇಕು ಎಂದು ನಿಯಮ ಹೇಳುತ್ತದೆ. ತೀರ ಕ್ಲಿಷ್ಟಕರ ಸಂದರ್ಭದಲ್ಲಿ ಮಾತ್ರ ಗೈರು ಹಾಜರಾದಾಗ ರಾಜ್ಯಪಾಲರ ವಿಶೇಷ ಕರ್ತವ್ಯ ಅಧಿಕಾರಿ ಇಲ್ಲವೇ ಅವರ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳಿಗೆ ರಾಜೀನಾಮೆ ಪತ್ರವನ್ನು ಮಾತ್ರ ನೀಡಬೇಕು. ನಂತರ ರಾಜ್ಯಪಾಲರು ವಾಪಸ್ ರಾಜ್ಯಕ್ಕೆ ಬಂದ ವೇಳೆ ಅದನ್ನು ಪರಿಶೀಲಿಸಿ ಅಂಗೀಕರಿಸಬಹುದು. ಇಲ್ಲವೇ ಮತ್ತೊಮೆ ಸ್ಪಷ್ಟನೆಗಾಗಿ ಲೋಕಭವನಕ್ಕೆ ಬರುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ಕೊಡಬಹುದು.
ಇಲ್ಲಿ ಈ ಪ್ರಶ್ನೆ ಉದ್ಭವಿಸಲು ಕಾರಣವೇನೆಂದರೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಲು ಮುಂದಾಗಿರುವಾಗಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಅನ್ಯ ಕಾರಣಗಳಿಂದ ಮಧ್ಯಪ್ರದೇಶದ ರಾಜಧಾನಿ ಇಂದೋರ್‌ಗೆ ತೆರಳಿದ್ದಾರೆ.
ಮೂಲಗಳ ಪ್ರಕಾರ, ರಾಜ್ಯಪಾಲರ ಪತ್ನಿ ಆರೋಗ್ಯ ಸ್ಥಿತಿ ಗಂಭೀರದಲ್ಲಿರುವ ಕಾರಣ ನಿನ್ನೆ ರಾತ್ರಿ ಮುಂಬೈನಿಂದ ಇಂದೋರ್ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಾಳೆ ಬೆಳಗ್ಗೆ ಬೆಂಗಳೂರಿಗೆ ಕಾರ್ಯಕ್ರಮ ನಿಮಿತ್ತ ಉಪರಾಷ್ಟ್ರಪತಿ ರಾಧಾಕೃಷ್ಣನ್ ಆಗಮಿಸಲಿದ್ದು, ಶಿಷ್ಟಾಚಾರದ ಪ್ರಕಾರ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರು ಬರಬೇಕು. ಮೂಲಗಳ ಪ್ರಕಾರ, ರಾಜ್ಯಪಾಲರು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುವ ಸಂಭವವಿದೆ. ಹಾಗಾದರೆ ಸಿದ್ದರಾಮಯ್ಯನವರು ಇಂದು ರಾಜ್ಯಪಾಲರ ವಿಶೇಷ ಕರ್ತವ್ಯ ಅಧಿಕಾರಿಗೆ ರಾಜಿನಾಮೆ ಪತ್ರ ಕೊಡಬಹುದೇ ಎಂಬ ಮೂಲ ಪ್ರಶ್ನೆ ಎದುರಾಗಿದೆ.
