Friday, November 22, 2024
Homeರಾಜ್ಯಲೋಕಸಭೆ ಚುನಾವಣೆ ಕಸರತ್ತು, ದೆಹಲಿಗೆ ದೌಡಾಯಿಸಿದ ಸಚಿವರು

ಲೋಕಸಭೆ ಚುನಾವಣೆ ಕಸರತ್ತು, ದೆಹಲಿಗೆ ದೌಡಾಯಿಸಿದ ಸಚಿವರು

ಬೆಂಗಳೂರು,ಜ.11-ಲೋಕಸಭೆ ಚುನಾವಣೆಯ ತಯಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಂದು ದೇಶಾದ್ಯಂತ ನೇಮಕವಾಗಿರುವ ಕ್ಷೇತ್ರವಾರು ವೀಕ್ಷಕರ ಜೊತೆ ಸಮಾಲೋಚನೆ ನಡೆಸಿದೆ. ರಾಜ್ಯ ಕಾಂಗ್ರೆಸ್‍ನ 28 ಸಚಿವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕಳೆದ ಮೂರು ದಿನಗಳಿಂದಲೂ ಬೆಂಗಳೂರಿನಲ್ಲಿ ಸಭೆ ನಡೆಸಿ ವಿವಿಧ ಹಂತಗಳಲ್ಲಿ ಚರ್ಚೆ ನಡೆಸಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಪ್ರಮುಖ ಶಾಸಕರು, ಜಿಲ್ಲಾಧ್ಯಕ್ಷರು, ಕೆಪಿಸಿಸಿ ಪ್ರಧಾಧಿಕಾರಿಗಳು ಸೇರಿದಂತೆ ಹಲವರ ಜೊತೆ ಸಮಾಲೋಚನೆ ನಡೆಸಿದ ಬಳಿಕ ದೆಹಲಿಗೆ ತೆರಳಿದ್ದಾರೆ. ಅದರ ಬೆನ್ನಲ್ಲೇ ಚುನಾವಣೆ ವೀಕ್ಷಕರಾಗಿರುವ ಎಲ್ಲರೂ ದೆಹಲಿಗೆ ಬರಬೇಕೆಂದು ಹೈಕಮಾಂಡ್ ಸೂಚಿಸಿತ್ತು. ಅದರ ಪ್ರಕಾರ 28 ಲೋಕಸಭಾ ಕ್ಷೇತ್ರಗಳ ವೀಕ್ಷಕರಾಗಿ ನಿಯೋಜನೆಗೊಂಡಿರುವ ಸಚಿವರು ಇಂದು ಬೆಳಿಗ್ಗೆ ದೆಹಲಿಗೆ ತೆರಳಿದ್ದಾರೆ.

28 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ : ಸಚಿವ ಮುನಿಯಪ್ಪ

ದೇಶಾದ್ಯಂತ ವಿವಿಧ ರಾಜ್ಯಗಳ ವೀಕ್ಷಕರೊಂದಿಗೆ ಸಭೆ ಆಯೋಜನೆಗೊಂಡಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಮುಖ ನಾಯಕ ರಾಹುಲ್‍ಗಾಂಧಿ ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ವೀಕ್ಷಕರೊಂದಿಗೆ ಚರ್ಚೆ ನಡೆಸಿದ್ದಾರೆ. ಪ್ರತಿಯೊಂದೂ ರಾಜ್ಯಗಳಿಗೂ ಸಂಬಂಧಪಟ್ಟಂತೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಲಾಗಿದೆ. ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಈ ಬಾರಿ ಲೋಕಸಭೆ ಚುನಾವಣೆಯನ್ನು ಎದುರಿಸಲು ಮುಂದಾಗಿದ್ದು, ಇದಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಅಭಿವೃದ್ಧಿಯ ಅಜೆಂಡಾವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

ಈ ಬಗ್ಗೆ ಹೈಕಮಾಂಡ್ ನಾಯಕರು ಚುನಾವಣಾ ವೀಕ್ಷಕರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಲಾಗಿದೆ. ಚುನಾವಣಾ ಫಲಿತಾಂಶ ಸೋಲು, ಗೆಲುವಿಗೆ ವೀಕ್ಷಕರೇ ಹೊಣೆಗಾರರು ಎಂಬ ಸ್ಪಷ್ಟ ಸಂದೇಶ ಕಳುಹಿಸಲಾಗಿದೆ. ಕ್ಷೇತ್ರಗಳ ಮಟ್ಟದಲ್ಲಿ ಆಂತರಿಕ ಭಿನ್ನಮತಗಳನ್ನು ಸರಿದೂಗಿಸಲು ಮೊದಲ ಆದ್ಯತೆ ನೀಡಬೇಕು. ಅನಂತರ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು, ತತ್ವ ಸಿದ್ಧಾಂತಗಳನ್ನು ಮನೆಮನೆಗೆ ತಲುಪಿಸಬೇಕು.

ಕೇಂದ್ರ ಸರ್ಕಾರದ ವೈಫಲ್ಯವನ್ನು ವಿಭಜನೆಯ ರಾಜಕಾರಣ, ವಿವಿಧ ಕ್ಷೇತ್ರಗಳಲ್ಲಿ ಹಣಕಾಸು ಹಾಗೂ ಅಧಿಕಾರ ದುರುಪಯೋಗ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ವೀಕ್ಷಕರ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಇದನ್ನು ಜನರಿಗೆ ತಲುಪಿಸಲು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕೆಂದು ಹೈಕಮಾಂಡ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ ಹೈಕಮಾಂಡ್ ಸಂಪುಟದ 28 ಸಚಿವರ ಜೊತೆಗೂ ಚುನಾವಣಾ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದೆ.

RELATED ARTICLES

Latest News