Homeರಾಜ್ಯಸಿಎಂ ಸಿದ್ದರಾಮಯ್ಯ ಭಾವುಕ ನಿರ್ಗಮನ

ಸಿಎಂ ಸಿದ್ದರಾಮಯ್ಯ ಭಾವುಕ ನಿರ್ಗಮನ

CM Siddaramaiah's emotional departure

ಬೆಂಗಳೂರು, ಮೇ 28- ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಮುಂದಿನ ದಿನಗಳಲ್ಲೂ ಅದನ್ನೇ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಮಾಡಿ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಡಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಅಧಿಕಾರದಿಂದ ನಿರ್ಗಮಿಸುವ ಮುನ್ನ ತಮ ಸಂಪುಟದ ಸಚಿವರಿಗೆ ಸಿದ್ದರಾಮಯ್ಯ ಉಪಾಹಾರ ಕೂಟ ಆಯೋಜಿಸಿದ್ದರು.

ಇಂದು ಬೆಳಗ್ಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಉಪಾಹಾರ ಕೂಟಕ್ಕೆ ಸಂಪುಟದ ಎಲ್ಲಾ ಸಚಿವರು ಹಾಜರಾಗಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ನಿನ್ನೆ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಇಂದು ಬೆಳಗ್ಗೆ ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದರು. ಡಿ.ಕೆ.ಶಿವಕುಮಾರ್‌ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆತೀಯವಾಗಿ ಬರಮಾಡಿಕೊಂಡರು. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಇಬ್ಬರೂ ಪರಸ್ಪರ ಆಲಂಗಿಸಿ, ಒಗ್ಗಟ್ಟು ಹಾಗೂ ಭ್ರಾತೃತ್ವ ಪ್ರದರ್ಶಿಸಿದ್ದಾರೆ.

ಉಪಾಹಾರದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸಚಿವರನ್ನು ಉದ್ದೇಶಿಸಿ ಔಪಚಾರಿಕವಾಗಿ ಮಾತನಾಡಿದ್ದು, ಈವರೆಗೂ ಉತ್ತಮ ಆಡಳಿತ ನೀಡಲು ಸಹಕರಿಸಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ರಾಜಕಾರಣಕ್ಕೆ ಹೊಸ ಮುಖಗಳು, ಹೊಸ ಆಲೋಚನೆಗಳು ಬರಬೇಕು. ಜನ ಕಾಂಗ್ರೆಸ್‌‍ ಪಕ್ಷದ ಮೇಲೆ ಅಪಾರ ವಿಶ್ವಾಸ ಇರಿಸಿದ್ದು, ಅದನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳಬೇಕು. ಕೋಮುವಾದಿ ಹಾಗೂ ವಿಚ್ಛಿದ್ರಕಾರಿ ಶಕ್ತಿಗಳು, ಜನರ ಶಾಂತಿ, ನೆಮದಿ ಕೆಡಿಸಲು ಅವಕಾಶ ನೀಡಬಾರದು ಎಂದು ಸಲಹೆ ನೀಡಿದ್ದಾರೆ.

ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ದೈಹಿಕ ಸಾಮರ್ಥ್ಯ ಇರುವವರೆಗೂ ಜನರ ಸೇವೆ ಮಾಡುತ್ತೇನೆ. ರಾಜಕೀಯವಾಗಿ ನನಗೆ ಈವರೆಗೂ ಸಹಕಾರ, ಸಲಹೆ ನೀಡಿದ ಎಲ್ಲರನ್ನು ಸರಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌‍ ಹೈಕಮಾಂಡ್‌ನ ಎಲ್ಲಾ ನಾಯಕರು ತಮಗೆ ಉತ್ತಮ ಸಹಕಾರ ನೀಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌‍ಗೆ ಒಳ್ಳೆಯ ಭವಿಷ್ಯ ಇದೆ. ಕೇಂದ್ರ ಸರ್ಕಾರದ ಈಗಿನ ದುರಾಡಳಿತದಿಂದ ಜನ ಬೇಸತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ತಮ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಕಳಂಕರಹಿತವಾಗಿ ನಡೆದುಕೊಂಡಿದ್ದೇನೆ. ಯಾರು ಎಷ್ಟೇ ಅಪಪ್ರಚಾರ ಮಾಡಿದ್ದರೂ, ಜನ ತಮ ಮೇಲೆ ವಿಶ್ವಾಸ ಇರಿಸಿದ್ದಾರೆ ಎಂದು ಸಚಿವರ ಉಪಾಹಾರ ಕೂಟದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದು ವಿದಾಯ ಭಾಷಣದಂತಿದ್ದು, ಮುಂದಿನ ರಾಜಕೀಯ ನಿರ್ಧಾರಗಳೇನೆಂದು ಕೆಲ ಸಚಿವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್‌ ಮಾತಿಗೆ ಬದ್ಧ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಈಗಲೂ ಅದರಂತೆ ನಡೆದುಕೊಳ್ಳುತ್ತೇನೆ. ತಾವು ಲೋಕಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

ರಾಜಕಾರಣದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಇರುವ ಅವಕಾಶವನ್ನು ಬಳಸಿಕೊಂಡು ಉತ್ತಮವಾದ ಜನ ಸೇವೆ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಅತೀ ಹೆಚ್ಚು ದಾಖಲೆಯ ಬಜೆಟ್‌ಗಳನ್ನು ಮಂಡಿಸಲು ತಮಗೆ ಅವಕಾಶ ಸಿಕ್ಕಿತ್ತು. ಆರ್ಥಿಕ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ ತೃಪ್ತಿ ತಮಗಿದೆ. ಸವಾಲುಗಳ ನಡುವೆಯೂ ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಿದ್ದೇನೆ. ಮುಂದಿನ ದಿನಗಳಲ್ಲೂ ಎಲ್ಲಾ ಅರ್ಹರಿಗೂ ಗ್ಯಾರಂಟಿಗಳೂ ತಲುಪುವಂತೆ ಕಾಳಜಿವಹಿಸಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ತಮ ರಾಜೀನಾಮೆಯನ್ನು ಘೋಷಿಸುವ ಜೊತೆಗೆ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಮುಂದಿನ ಮುಖ್ಯಮಂತ್ರಿ ಎಂದು ಪ್ರಕಟಿಸಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

RELATED ARTICLES

Latest News