ಬೆಂಗಳೂರು,ಡಿ.6– ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಮಾದಕ ವಸ್ತು ಹಾಗೂ ಸಿಗರೇಟ್ ಪ್ಯಾಕ್‌ಗಳನ್ನು ಕಾರಾಗೃಹದೊಳಗೆ ತೆಗೆದುಕೊಂಡು ಹೋಗುತ್ತಿದ್ದ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಸಿಕ್ಕಿಬಿದ್ದಿದ್ದಾರೆ.ರಾಹುಲ್ ಪಾಟೀಲ್ ಬಂಧನಕ್ಕೊಳಗಾದ ಜೈಲು ವಾರ್ಡನ್. ಕಳೆದ ಜೂನ್ ತಿಂಗಳಿನಲ್ಲಿ ಬೆಳಗಾವಿಯಿಂದ ಇವರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವರ್ಗಾವಣೆಯಾಗಿದ್ದಾರೆ.
ನಿನ್ನೆ ಸಂಜೆ ಕೆಎಸ್‌ಇಎಸ್‌ಎಫ್ ಪರಪ್ಪನ ಅಗ್ರಹಾರ ಕಾರಾ ಗೃಹದ ಮುಖ್ಯದ್ವಾರದ ಬಳಿ ತಪಾಸಣೆ ಮಾಡುತ್ತಿದ್ದಾಗ ಜೈಲ್ ವಾರ್ಡನ್ ರಾಹುಲ್ ಪಾಟೀಲ್ ಕರ್ತವ್ಯಕ್ಕೆ ಬಂದಿದ್ದಾರೆ.ಆ ಸಂದರ್ಭದಲ್ಲಿ ಅವರನ್ನು ತಪಾಸಣೆ ಮಾಡಿದಾಗ ಅವರು ಒಳ ಉಡುಪಿನಲ್ಲಿ ಎರಡು ಸಿಗರೇಟ್ ಪ್ಯಾಕ್‌ಗಳು ಮತ್ತು ಮಾದಕ ವಸ್ತು ಇಟ್ಟುಕೊಂಡಿರುವುದು ಗೊತ್ತಾಗಿದೆ.
ಈ ಬಗ್ಗೆ ಅವರು ಜೈಲು ಸೂಪರಿಡೆಂಟ್ ಪರಮೇಶ್ ಅವರ ಗಮನಕ್ಕೆ ತಂದಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಿ ಅವರು ದೂರು ನೀಡಿದ್ದಾರೆ. ಈ ಆಧಾರದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿ ಅವರ ಬಳಿ ಇದ್ದ ಸಿಗರೇಟ್ ಪ್ಯಾಕ್‌ಗಳು ಹಾಗೂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮಾದಕ ವಸ್ತುವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಈ ಮಾದಕ ವಸ್ತು ಯಾವುದು ಎಂಬುವುದು ಗೊತ್ತಾಗಲಿದೆ.ಇತ್ತೀಚೆಗೆ ಪರಪ್ಪನ ಅಗ್ರಹಾರ ಕಾರಾಗೃಹದ ಬ್ಯಾರಕ್‌ಗಳನ್ನು ಜೈಲು ಅಧಿಕಾರಿಗಳು ತಪಾಸಣೆ ಮಾಡಿದ ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳು, ಸಿಮ್‌ಗಳು, ಹಣ ಪತ್ತೆಯಾಗಿತ್ತು. ಹಾಗಾಗಿ ಕಾರಾಗೃಹದಲ್ಲಿರುವ ಖೈದಿಗಳು ಹಾಗೂ ವಿಚಾರಣ ಖೈದಿಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಆದರೂ ಸಹ ಖೈದಿಗಳಿಗೆ ಕಾರಾಗೃಹ ಸಿಬ್ಬಂದಿಯೇ ನಿಷೇದಿತ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆಂಬ ಆರೋಪ ಸಹ ಕೇಳಿ ಬಂದಿದೆ.ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಜೈಲು ವಾರ್ಡನ್ ಸಿಕ್ಕಿ ಬಿದ್ದಿದ್ದಾರೆ.
