ಬೆಂಗಳೂರು, ಮೇ 30- ನೂತನ ಸರ್ಕಾರದ ಮುಖ್ಯಮಂತ್ರಿ ಆಯ್ಕೆ ಕುರಿತು ಇಂದು ಸಂಜೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೂ ಮುನ್ನಾ ಸಂಭಾವ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಅಧಿಕಾರ ಹಂಚಿಕೆಯ ಗೊಂದಲದ ಕೊನೆಯ ಹಂತದಲ್ಲಿ ಸಿದ್ದರಾಮಯ್ಯ ಅವರು ಸಚಿವರ ಉಪಹಾರ ಕೂಟ ಸಭೆ ನಡೆಸಿ, ರಾಜೀನಾಮೆ ನೀಡುವುದನ್ನು ಪ್ರಕಟಿಸಿದ್ದಲ್ಲದೆ, ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರ ನೀಡಿದ್ದರು.
ಮಧ್ಯ ಪ್ರದೇಶ ರಾಜ್ಯದ ಪ್ರವಾಸದಲ್ಲಿದ್ದ ರಾಜ್ಯಪಾಲರು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿ ಮಾರನೇ ದಿನ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಜೊತೆಗೆ ಸಚಿವ ಸಂಪುಟವನ್ನು ವಿಸರ್ಜಿಸಿರುವುದಾಗಿ ಆದೇಶಿಸಿದರು.
ಮುಖ್ಯಮಂತ್ರಿ ರಾಜೀನಾಮೆಯನ್ನು ರಾಜ್ಯಪಾಲರಿಗೆ ಖುದ್ದು ಸಲ್ಲಿಸಬೇಕು ಅಥವಾ ರಾಜೀನಾಮೆಗೆ ಕಾರಣಗಳ ಬಗ್ಗೆ ಚರ್ಚೆ ಮಾಡಬೇಕು ಎಂಬ ನಿಯಮಗಳಿವೆ. ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನೀಡಲಾದ ರಾಜೀನಾಮೆಯನ್ನು ಈಗಾಗಲೇ ಅಂಗೀಕರಿಸಲಾಗಿದೆ. ನಂತರದಲ್ಲಿ ಖುದ್ದು ಭೇಟಿ ಮಾಡಿ ವಿವರಣೆ ನೀಡುವಂತೆ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದು, ಅದರಂತೆ ಇಂದು ಸಿದ್ದರಾಮಯ್ಯ ಅವರು ಲೋಕಭವನಕ್ಕೆ ತೆರಳುವ ಸಾಧ್ಯತೆ ಇದೆ.
ಅದಕ್ಕೂ ಮುನ್ನಾ ಡಿ.ಕೆ.ಶಿವಕುಮಾರ್ ತಮ ಸಹೋದರ ಡಿ.ಕೆ.ಸುರೇಶ್ ಜೊತೆಯಲ್ಲಿ ಲೋಕಭವನಕ್ಕೆ ಭೇಟಿ ನೀಡಿದ್ದಾರೆ. ಮೂಲಗಳ ಪ್ರಕಾರ ಪ್ರಮಾಣ ವಚನ ಬೋಧನೆಗೆ ರಾಜ್ಯಪಾಲರ ಸಮಯ ಕೇಳಲು ಡಿ.ಕೆ.ಶಿವಕುಮಾರ್ ಭೇಟಿ ಮಾಡುತ್ತಿರುವುದಾಗಿ ಹೇಳಲಾಗಿದೆ.
ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ವೇಳೆ ಹೊರ ರಾಜ್ಯದಲ್ಲಿ ಪ್ರವಾಸದಲ್ಲಿದ್ದರು. ಈಗ ಪ್ರಮಾಣ ವಚನ ಸ್ವೀಕಾರ ಸಂದರ್ಭಕ್ಕೆ ಹಾಜರಿಲ್ಲದೆ ಪ್ರವಾಸ ಕೈಗೊಂಡರೆ ಮುಜುಗರವಾಗಲಿದೆ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಮುಂಜಾಗ್ರತೆ ವಹಿಸಿದ್ದಾರೆ.
ಭೋಪಾಲ್‌ನಲ್ಲಿ ರಾಜ್ಯಪಾಲರ ಸಂಬಂಧಿಯೊಬ್ಬರು ಅನಾರೋಗ್ಯದಿಂದ ಇದ್ದಾರೆ. ಅವರನ್ನು ನೋಡಲಿಕ್ಕಾಗಿಯೇ ಮೂರು ದಿನಗಳ ಹಿಂದೆ ಪ್ರವಾಸ ಕೈಗೊಂಡಿದ್ದರು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಪ್ರವಾಸದ ಸನ್ನಿವೇಶವಿದೆಯೇ ಎಂಬ ಕುರಿತು ಮಾಹಿತಿ ಪಡೆದುಕೊಳ್ಳುವ ಸಲುವಾಗಿಯೂ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಮುಂದಿನ ಎರಡು ವರ್ಷ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಸೌಹಾರ್ದ ಸಂಬಂಧ ಇರಬೇಕಾದ ಅಗತ್ಯದ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವ ಮುನ್ನವೇ ರಾಜ್ಯಪಾಲರನ್ನು ಭೇಟಿ ಮಾಡಿ ಸಹಕಾರ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮತ್ತೊಮೆ ರಾಜಭವನಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
