ಬೆಂಗಳೂರು, ಜ.13- ಜೀವನದಲ್ಲಿ ಧೈರ್ಯ ಇರಲಿ, ಆದರೆ ಭಂಡತನ ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಸಂಚಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಮ್ಮೆ ಜೀವ ಕಳೆದು ಕೊಂಡರೆ ಮತ್ತೆ ಸಿಗಲ್ಲ. ಯುವಕರು ಹೆಚ್ಚು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಅವರಲ್ಲಿ ತಿಳಿವಳಿಗೆ ಮೂಡುವುದು ಅಗತ್ಯವಿದೆ ಎಂದರು.
ನಾವು ಹೊಸ ಯುಗದಲ್ಲಿ ಇದ್ದೇವೆ. ನಮ್ಮ ಕಾಲಕ್ಕಿಂತಲೂ ಪ್ರಸಕ್ತ ಕಾಲ ಹೆಚ್ಚು ಆಧುನಿಕವಾಗಿದೆ. ಇಂದು ಬೆಳಗ್ಗೆಯಿಂದಷ್ಟೆ ಕೃತಕ ಬುದ್ದಿಮತ್ತೆಯಿಂದ ಬೆಂಗಳೂರಿನ ಸಂಚಾರ ನಿಯಮ ಪಾಲನೆ ಮಾಡುವ ಕುರಿತು ಪ್ರಾತ್ಯಕ್ಷಿತೆಯನ್ನು ಪರಿಶೀಲನೆ ಮಾಡಿದ್ದೇವು. ದ್ವಿಚಕ್ರ ವಾಹನ ಓಡಿಸುವ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಲೇಬೇಕು. ಎನ್‍ಸಿಆರ್‍ಬಿ ಅಂಕಿ ಅಂಶಗಳ ಪೈಕಿ 2023ರಲ್ಲಿ ಹೆಚ್ಚು ಜೀವ ಕಳೆದುಕೊಂಡವರಲ್ಲಿ ಬೈಕ್ ಸವಾರರೇ ಹೆಚ್ಚು, ಅದರಲ್ಲೂ ಯುವಕರ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.
ಕಳೆದ ವರ್ಷ 23 ಸಾವಿರ ಅಪಘಾತಗಳು ವರದಿಯಾಗಿವೆ. ನಿಯಮ ಉಲ್ಲಂಘಿಸಿದಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ಆರು ಸಾವಿರಕ್ಕೂ ಹೆಚ್ಚು ಲೈಸೆನ್ಸ್‍ಗಳನ್ನು ರದ್ದು ಮಾಡಲಾಗಿದೆ. ಬೆಂಗಳೂರಿನಲ್ಲಿ ಒಂದು ಕೋಟಿ 30 ಲಕ್ಷ ಜನ ಇದ್ದಾರೆ. 55 ಲಕ್ಷ ವಾಹನಗಳಿವೆ. ಸಂಚಾರದ ಸಮಸ್ಯೆ ಗಂಭಿರವಾಗಿದೆ. ಎನ ಸಂಚಾರದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುಲು ಬೆಂಗಳೂರು ನಗರಾಭಿವೃದ್ಧಿ, ಪೊಲೀಸ್, ಸಾರಿಗೆ ಇಲಾಖೆ ಜಂಟಿಯಾಗಿ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಹೇಳಿದರು.
ಅಪಘಾತಕ್ಕೆ ಒಳಗಾದವರ ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತಹ ಹರೀಶ್ ಸಾಂತ್ವಾನ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಅದರಿಂದ ಏನು ಪ್ರಯೋಜನವಾಗುವುದಿಲ್ಲ. ಅಪಘಾತವಾಗಿ ಜೀವ ಕಳೆದುಕೊಳ್ಳುವ ಮೊದಲು ಜೀವನ ಉಳಿಸುವ ನಿಟ್ಟಿನಲ್ಲಿ ನಿಯಮ ಪಾಲಿಸಿ ಮುನ್ನೆಚ್ಚರಿಕೆ ವಹಿಸುವ ಕುರಿತು ಜಾಗೃತಿ ಮೂಡಿಸಬೇಕಿದೆ. ಪ್ರತಿಯೊಬ್ಬರಿಗೂ ಧೈರ್ಯ ಇರಬೇಕು, ಆದರೆ ಭಂಡತನ ಇರಬಾರದು ಎಂದರು.
ಇದೇ ವೇಳೆ ಡಿ.ಕೆ.ಶಿವಕುಮಾರ್, ಮಕ್ಕಳಲ್ಲಿ ರಸ್ತೆ ಸುರಕ್ಷತೆ ನಿಯಮ ಪಾಲನೆಗೆ ಪ್ರೋತ್ಸಾಹಿಸು ಮೊಳಕೆಯಲ್ಲೆ ತಿದ್ದಿರಿ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಇದೇ ವೇಳೆ ಆಯೋಜಿಸಲಾಗಿದ್ದ ವಿವಿಧ ಮಳಿಗೆಗಳನ್ನು ಮುಖ್ಯಮಂತ್ರಿ ಪರಿಶೀಲನೆ ನಡೆಸಿದರು. ರಸ್ತೆ ಸುರಕ್ಷಾ ನಾಯಕರಾಗುವ ಪ್ರತಿಜ್ಞೆ ತೊಡಲು ಬಳಕೆ ಮಾಡುವ ಇ-ಪ್ಲೆಡ್ಜ್ ಕ್ಯೂರ್ ಕೋಡ್ ಅನ್ನು ಅನಾವರಣ ಮಾಡಿದರು. ದೇಶದಲ್ಲೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆ ಮೂಲಕ ಸಂಚಾರ ನಿಯಂತ್ರಿಸುವ ಬೆಂಗಳೂರು ಟ್ರಾಫಿಕ್ ಇಂಜಿನ್ ವ್ಯವಸ್ಥೆಗೆ ಚಾಲನೆ ನೀಡಿದರು.
ಇತರರ ಪ್ರಾಣ ರಕ್ಷಣೆ ಹೊಣೆ ನಿಭಾಯಿಸಿ:
ಸಂಚಾರ ವಿಭಾಗದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದ ಪೊಲೀಸ್, ಗೃಹರಕ್ಷಕ ಹಾಗೂ ಇತರ ಸಿಬ್ಬಂದಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಗರದಲ್ಲಿ ಟ್ರಾಫಿಕ್ ಸಮಸ್ಯೆಯ ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಅಗತ್ಯ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುವುದು. ದೇಶದಲ್ಲಿನ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ತೀರ ಕಡಿಮೆಯಾಗಿದೆ. ಕಮಾಂಡ್ ಸೆಂಟರ್‍ನಲ್ಲಿನ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಗರದಲ್ಲಿನ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲಾಗುತ್ತಿದೆ.
ಜನರು ಮತ್ತಷ್ಟು ಸುರಕ್ಷಿತವಾಗಿ ಸಂಚರಿಸುವ ದೃಷ್ಟಿಯಿಂದ ತಂತ್ರಜ್ಞಾನ ಬಳಸಲಾಗುವುದು ಎಂದರು.
ವಾಹನ ಚಾಲನೆ ವೇಳೆ ನಮ್ಮ ಸುರಕ್ಷತೆಯ ಜೊತೆಗೆ ಬೇರೆಯವರ ಪ್ರಾಣ ರಕ್ಷಣೆಯ ಹೊಣೆ ನಮ್ಮ ಮೇಲಿದೆ. ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಅನಾಹುತಗಳನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 1 ಕೋಟಿಗೂ ಹೆಚ್ಚು ವಾಹನಗಳಿವೆ. 2023ರಲ್ಲಿ 900 ಜನ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣದ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ, ಜನರಿಗೆ ಟ್ರಾಫಿಕ್ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸದಾಶಿವನಗರದ ಸಂಚಾರಿ ಪೊಲೀಸ್‍ಠಾಣೆಯ ಇನ್ಸ್‍ಪೆಕ್ಟ್ ಆರ್.ಪಿ.ಅಶೋಕ್ ಸೇರಿದಂತೆ ಅನೇಕ ಸಿಬ್ಬಂದಿಗಳು ಪ್ರಶಸ್ತಿ ಸ್ವೀಕರಿಸಿದರು. ರಸ್ತೆ ಸುರಕ್ಷತೆ ಜಾಗೃತಿಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಸೆಂಟ್ ಮಾರ್ಕ್ ಇಂಗ್ಲಿಷ್ ಶಾಲೆ, ಎಸ್‍ಜೆಆರ್ ಸ್ಕೂಲ್, ಲಿಟ್ಲಫ್ಲವರ್, ಗ್ರಿನ್ ವ್ಯಾಲಿ ಸ್ಕೂಲ್ ಸೇರಿ ಮತ್ತಿತರ ಶಾಲೆಗಳಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ರಿಜ್ವಾನ್ ಅರ್ಹದ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಸುಧಾಮ್‍ದಾಸ್, ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಸಂಚಾರ ವಿಭಾಗದ ಜಂಟಿ ಆಯುಕ್ತ ಅನುಚೇತ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.