ಪಣಜಿ, ಡಿ.7- ಉತ್ತರ ಗೋವಾದ ಅರ್ಪೋರಾ ಬಳಿಯ ನೈಟ್ ಕ್ಲಬ್‌ನಲ್ಲಿ ಮಧ್ಯರಾತ್ರಿ ಭೀಕರ ಬೆಂಕಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದಾರೆ.ಮೃತರಲ್ಲಿ ಹೆಚ್ಚಿನವರು ಬಾಣಸಿಗರು ಹಾಗು ಸಿಬ್ಬಂದಿಯಾಗಿದ್ದು, ಅದರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.
ಮೂರರಿಂದ ನಾಲ್ವರು ಪ್ರವಾಸಿಗರು ಕೂಡ ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ,ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಉಸ್ತುವಾರಿ ವಹಿಸಿದ್ದ ಸಿಎಂ ಕಂಬನಿ ಮಿಡಿದಿದ್ದಾರೆ. ದುರಂತದಲ್ಲಿ 25 ಜನರಲ್ಲಿ ಮೂವರು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರೆ, ಇತರರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದರು ಎಂದು ಮಾಧ್ಯಮಕ್ಕೆ ತಿಳಿಸಿದರು.
ಆರಂಭಿಕ ಮಾಹಿತಿಯ ಪ್ರಕಾರ, ನೈಟ್ ಕ್ಲಬ್ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಿರಲಿಲ್ಲ.ರಾಜ್ಯ ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್‌ನಲ್ಲಿ ಈ ದುರಂತ ಘಟಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕ್ಲಬ್ ನಿರ್ವಹಣೆ ಮತ್ತು ಕಾರ್ಯನಿರ್ವಹಿಸಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸಾವಂತ್ ಹೇಳಿದರು. ಗೋವಾದಲ್ಲಿ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದ ಸಂದರ್ಭದಲ್ಲಿ ಇದು ದುರದೃಷ್ಟಕರ ಘಟನೆಯಾಗಿದೆ ಎಂದು ಅವರು ನುಡಿದರು.
ಘಟನೆಯ ಬಗ್ಗೆ ನಾವು ವಿವರವಾದ ತನಿಖೆ ನಡೆಸುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.ಗೋವಾ ಪೊಲೀಸ್ ಮುಖ್ಯಸ್ಥ ಅಲೋಕ್ ಕುಮಾರ್ ಅನಿಲ ಸೋರಿಕೆ ನಂತರ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿಸಿದರು.
ಒಟ್ಟಾರೆ 23 ಶವಗಳನ್ನು ಆವರಣದಿಂದ ಹೊರತೆಗೆದು ಬಂಬೋಲಿಮ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ .ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಮುಂಜಾನೆವರೆಗೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವು .ಇಲ್ಲಿ ಪಾರ್ಟಿ ನಡೆಯುತ್ತಿತ್ತು.
ನೂರಾರು ಜನರು ಭಾಗಿಯಾಗಿದ್ದರು. ಆದರೆ, ಬೆಂಕಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಆತಂಕದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಜೀವ ಉಳಿಸಿಕೊಳ್ಳಲು ಅಲ್ಲಿಂದ ಪಲಾಯನ ಮಾಡಿದ್ದಾರೆ. ಕ್ಲಬ್ ಮಾಲೀಕನ ಮೇಲೆ ಪ್ರಕರಣ ದಾಖಲಾಗಿದೆ. ಕಳೆದ ಒಂದುವರ್ಷದ ಹಿಂದೆಯಷ್ಟೇ ಪ್ರಾರಂಭವಾಗಿದ್ದ ಈ ಐಷಾರಾಮಿ ತಾಣ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು.
