ಬೆಂಗಳೂರು,ಜೂ.5- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸರ್ಕಾರದ ಆಂತರಿಕ ಕಚ್ಚಾಟವನ್ನು ಬದಿಗೊತ್ತಿ ರಾಜ್ಯದ ರೈತರ, ಕೃಷಿ ಕಾರ್ಮಿಕರ, ಬಡವರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯದೆ ರಾಜೀನಾಮೆ ಕೊಟ್ಟು ಮತ್ತೊಮೆ ಜನಾದೇಶ ಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಅಧಿಕಾರ ದಾಹವೇ ಕಾಂಗ್ರೆಸ್ ನ ಪರಮೋಚ್ಛ ಉದ್ದೇಶ, ಜನರ ಕಲ್ಯಾಣವಲ್ಲ. ಮೊದಲು ಸಿಎಂ ಖುರ್ಚಿಗಾಗಿ ಕಿತ್ತಾಡುತ್ತಿದ್ದರು, ಈಗ ಸಚಿವ ಸ್ಥಾನಕ್ಕಾಗಿ, ಖಾತೆಗಾಗಿ ಕಿತ್ತಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಭ್ರಷ್ಟಾಚಾರ ಅಧಿಕಾರ ಲಾಲಸೆ ಹಾಗೂ ಲಾಭದಾಯಕ ಹುದ್ದೆಗಳಿಗಾಗಿ ಕಿತ್ತಾಡುತ್ತಿರುವ ಸರ್ಕಾರ ಅತಿ ಶೀಘ್ರದಲ್ಲಿ ಪತನಗೊಳ್ಳಲಿದೆ ಎಂಬ ಬಿಜೆಪಿ ನಿರೀಕ್ಷೆ ನಿಜವಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದು ಹಿರಿಯ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವುದು ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದಾರೆ.
ಮುಂಗಾರು ಹಂಗಾಮು ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಬೀಜ ರಸಗೊಬ್ಬರ ಮುಂತಾದ ನೆರವು ನೀಡ ಬೇಕಾದ ರಾಜ್ಯ ಸರ್ಕಾರ ಹೀಗೆ ಅಧಿಕಾರದ ಕಿತ್ತಾಟದಲ್ಲಿ ತೊಡಗಿರುವುದು ಕರ್ನಾಟಕದ ದುರಂತವೇ ಸರಿ ಎಂದು ವಿಜಯೇಂದ್ರ ದೂರಿದ್ದಾರೆ.
