ಬೆಂಗಳೂರು,ಡಿ.7- ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ಇಂದು ಚುರುಕಿನಿಂದ ನಡೆದಿದೆ.ಡಿಸಿಎಂ ಡಿ.ಕೆ.ಶಿವಕುಮಾರ್, ಅನಿಲ್ಕುಂಬ್ಳೆ, ಜಿ.ಆರ್.ವಿಶ್ವನಾಥ್, ಚಂದ್ರಶೇಖರ್, ರೋಜರ್ ಬಿನ್ನಿ, ನಟ ಜೈಜಗದೀಶ್, ಬ್ರಿಜೇಶ್ ಪಟೇಲ್ ಸೇರಿದಂತೆ ಹಲವು ಪ್ರತಿಷ್ಠಿತ ಗಣ್ಯರು ಕೆಎಸ್ಸಿಎ ಸದಸ್ಯರಾಗಿದ್ದು, ಇಂದು ಬೆಳಗ್ಗೆಯೇ ಮತದಾನ ದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಬ್ರಿಜೇಶ್ಪಟೇಲ್ ಗುಂಪಿನಿಂದ ಪತ್ರಿಕೋದ್ಯಮಿ ಶಾಂತಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವುದು ಭಾರೀ ಗಮನ ಸೆಳೆದಿದೆ.
ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ಕಾನೂನು ಹೋರಾಟಗಳ ನಡುವೆಯೂ ಇಂದು ಕೆಎಸ್ಸಿಎ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ರಿಕೆಟ್ ಪಟುಗಳು ಸೇರಿದಂತೆ ಕ್ರಿಕೆಟ್ ಕ್ಲಬ್, ರಾಜಕಾರಣಿಗಳು, ಉದ್ಯಮಿಗಳು ಇದರ ಸದಸ್ಯತ್ವ ಹೊಂದಿದ್ದು, ಮುಂದಿನ ಕೆಎಸ್ಸಿಎ ಸಾರಥ್ಯ ಯಾರು ಹಿಡಿಯುತ್ತಾರೆ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಐಪಿಎಲ್ನಲ್ಲಿ ಆರ್ಸಿಬಿ ಗೆಲುವಿನ ನಂತರ ನಡೆದಿದ್ದ ಕಾಲ್ತುಳಿತ ದುರಂತದ ನಂತರ ಕೆಎಸ್ಸಿಎ ಪದಾಧಿಕಾರಿಗಳ ವಿರುದ್ಧ ಆರೋಪಗಳ ಸುರಿಮಳೆ ಸೇರಿದಂತೆ ವಾಗ್ದಾಳಿ ನಡೆಸಲಾಗಿತ್ತು. ಇದರ ನಡುವೆ ಖ್ಯಾತ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕ್ಲೀನ್ ಇಮೇಜ್ ಆಟಗಾರರಿಗೆ ಆದ್ಯತೆ ಹೆಸರಿನಲ್ಲಿ ಚುನಾವಣಾ ಅಖಾಡಕ್ಕಿಳಿದಿದ್ದಾರೆ.
ಇದಕ್ಕೆ ಪ್ರತಿಯಾಗಿ ಶಾಂತಕುಮಾರ್ ಅವರು ಕೂಡ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ, ಪ್ರತಿಭಾನ್ವಿತರಿಗೆ ಮನ್ನಣೆ ಮತ್ತು ಕ್ರಿಕೆಟ್ ಉತ್ತೇಜನಕ್ಕೆ ಹಲವಾರು ಯೋಜನೆಗಳನ್ನು ಘೋಷಿಸಿ ಮತ ಯಾಚಿಸಿದ್ದಾರೆ. ಬಿಗಿಭದ್ರತೆ ನಡುವೆ ಚುನಾವಣೆ ನಡೆಯುತ್ತಿದ್ದು, ಸಂಜೆ 7 ಗಂಟೆವರೆಗೂ ಮತದಾನ ನಡೆಯಲಿದ್ದು, ರಾತ್ರಿ 10 ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.
