ಬೆಳಗಾವಿ,ಜ.18- ಅಪ್ಪ, ಅಮ್ಮನ ಹೆಸರು ಗೊತ್ತಿಲ್ಲದವರು ಜಾತ್ಯಾತೀತ ಹೆಸರು ಹೇಳುತ್ತಾರೆ ಎಂದು ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ. ಜಿಲ್ಲೆಯ ಖಾನಾಪುರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿರುವ ಅವರು, ಅಪ್ಪ, ಅಮ್ಮನ ಹೆಸರೇ ಗೊತ್ತಿಲ್ಲದವರು ಸದಾ ಜಾತ್ಯಾತೀತತೆ ಪಠಿಸುತ್ತಾರೆ. ನಾವು ಹಿಂದೂಗಳು ಎಂದು ಹೇಳಲು ಹಿಂದೆಮುಂದೆ ನೋಡುತ್ತಿದ್ದವರೆಲ್ಲಾ ಈಗ ರಾಮನ ಸ್ಮರಣೆ ಮಾಡುತ್ತಾರೆಂದು ಪರೋಕ್ಷವಾಗ ಸಿಎಂ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಮಾತಿನುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಗುರಿಯಾಗಿಟ್ಟುಕೊಂಡು ಮಾತನಾಡಿದ ಅವರು, ಬಹಳಷ್ಟು ವರ್ಷಗಳ ಕಾಲ ಹಿಂದೂ ಎಂಬ ಹೆಸರೇ ಮರೆತುಹೋಗಿತ್ತು. ಈಗ ಯಾರಾದರೂ ನಿಮ್ಮ ಹೆಸರೇನೆಂದರೆ ಜಾತಿ ನೆನಪು ಮಾಡಿಕೊಂಡು ಹೇಳುವ ದುಃಸ್ಥಿತಿ ಬಂದಿತ್ತು. ಈಗ ಪ್ರತಿಯೊಬ್ಬರೂ ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳುವ ಕಾಲ ಬಂದಿದೆ.
ಆರಾಧನಾ ಸ್ಥಳಗಳ ಕಾಯ್ದೆ ರಕ್ಷಣೆಗೆ ಓವೈಸಿ ಮನವಿ
ಈಗಾಗಲೇ ರಾಮ ಮಂದಿರ ಉದ್ಘಾಟನೆ ಅಕ್ಷತೆ ಮನೆ ಮನೆಗೆ ಹೋಗಿದೆ. ಐನೂರು ವರ್ಷದ ನಂತರ ನಮಗೆ ಜಯ ಸಿಕ್ಕಿದೆ. ರಾಮ ಮಂದಿರವನ್ನು ಯಾರೋ ಉದ್ಯಮಿ, ಕೈಗಾರಿಕೋದ್ಯಮಿಗಳು ಕಟ್ಟಿಲ್ಲ. ಹಳ್ಳಿ ಹಳ್ಳಿಯಿಂದ ಇಟ್ಟಿಗೆ ಕಳಿಸಿದ್ದೇವೆ, ಇಡೀ ದೇಶದ ಜನ ಜಾಗೃತರಾಗಿ ಕಟ್ಟಿದ್ದು. ಅಯೋಧ್ಯ ಹಿಂದೂಗಳ ಪ್ರತೀಕ, ಸೌರಾಷ್ಟ್ರದ ಸೋಮನಾಥ ದೇವಾಲಯ ಸರ್ಕಾರ ಕಟ್ಟಿದ್ದು. ರಾಮ ಮಂದಿರ ಸರ್ಕಾರ ಕಟ್ಟಿಲ್ಲ, ಹಿಂದೂಗಳು ಕಟ್ಟಿದ್ದಾರೆ. ಅಪಮಾನವನ್ನ ತೊಳೆದು ರಾಮ ಮಂದಿರ ಕಟ್ಟಲಾಗಿದೆ ಎಂದು ಹೇಳಿದರು.
ಜಾತಿ ಹೆಸರಲ್ಲಿ, ಭಾಷೆ ಹೆಸರಲ್ಲಿ ನಮ್ಮನ್ನು ಒಡೆದಾಡುವ ನೀತಿ ಅನುಸರಿಸಿದ್ದರಿಂದಲೇ ನಮ್ಮನಮ್ಮಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ. ಮರಾಠಿ, ಕನ್ನಡ ಒಂದಾಗುತ್ತ್ತಾರೆ ಎಂದರೆ ಕತ್ತಿ ತೆಗೆದುಕೊಂಡು ಬರುತ್ತಾರೆ. ಈ ರೀತಿ ಒಡೆದಾಡಿದರೆ ಅವರ ರಾಜಕಾರಣ ನಡೆಯುವುದು. ಸ್ವಾತಂತ್ರ್ಯದ ನಂತರ ಮರಾಠಿ-ಕನ್ನಡ ಜಗಳ ಶುರುವಾಯಿತು. ಇದರ ಹೊರತಾಗಿ ಒಟ್ಟಾಗಿ ಹಿಂದೂ ಹೆಸರಲ್ಲಿ ಎದ್ದು ನಿಂತೆವು. ರಣ ಭೈರವ ರೀತಿಯಲ್ಲಿ ನಾವು ಈಗ ಏಳುತ್ತಿದ್ದೇವೆ. ನಾವು ಎದ್ದಿದ್ದೇವೆ ಎಂದ ತಕ್ಷಣ ಇಡೀ ಜಗತ್ತು ಅಲ್ಲಾಡಿದೆ ಎಂದರೆ ಹೇಗಿರಬಹುದು ಎಂದು ಪ್ರಶ್ನಿಸಿದರು.
ಐನೂರು ವರ್ಷದ ಪಾಪವನ್ನು ಇಂದು ತೊಳೆದುಕೊಂಡು ರಾಮ ಮಂದಿರ ಕಟ್ಟುತ್ತಿದ್ದೇವೆ. ಇನ್ನೂ ಕಾಶಿ ಇದೆ, ಮಥುರಾ ಇದೆ ಹಳ್ಳಿ ಹಳ್ಳಿಗಳಲ್ಲಿ ಅಪಮಾನ ಆದ ತುಂಬಾ ದೇವಸ್ಥಾನ ಇವೆ. ಹಳ್ಳಿ ಹಳ್ಳಿಯಲ್ಲಿ ಆಗಿರುವ ಅಪಮಾನ ಸೇಡು ತೀರಿಸಿಕೊಳ್ಳಬೇಕು ಎಂದರು.