ಬೆಂಗಳೂರು,ಸೆ.3-ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿ ಬೆಂಕಿ ಹೊತ್ತಿ ಉರಿದ ಪರಿಣಾಮ ತಾಯಿ ಹಾಗೂ ಎರಡು ವರ್ಷದ ಮಗು ಸಜೀವ ದಹನವಾಗಿರುವ ಘಟನೆ ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ರಾಮಮೂರ್ತಿ ನಗರ ಸಮೀಪದ ವಿಜಿನಾಪುರದ ನಿವಾಸಿ ಸಿಂಧು ಹಾಗೂ ಕುಶಾವಿ(2) ಮೃತಪಟ್ಟ ದುರ್ದೈವಿಗಳು. ಕಾರು ಚಾಲನೆ ಮಾಡುತ್ತಿದ್ದ ಮಹೇಂದ್ರ ಹಾಗೂ ಮತ್ತೊಂದು ಮಗು ಪ್ರಣವಿ (6) ಗಂಭೀರವಾಗಿ ಗಾಯಗೊಂಡಿದ್ದು, ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಮೂಲತಃ ತಮಿಳುನಾಡಿನ ಸೇಲಂನ ಅಲಮಾಡು ಕುಡು ಗ್ರಾಮದವರಾದ ಮಹೇಂದ್ರ ಅವರು ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ.
ಇಬ್ಬರು ಮಕ್ಕಳು ಹಾಗೂ ಪತ್ನಿ ಸಿಂಧು ಅವರೊಂದಿಗೆ ಮಹೇಂದ್ರ ಅವರು ಟಾಟಾ ನೆಕ್ಸಾನ್ ಕಾರಿನಲ್ಲಿ ಇಂದು ಮುಂಜಾನೆ 2.50ರ ಸುಮಾರಿನಲ್ಲಿ ಮೈಸೂರು ರಸ್ತೆ ಕಡೆಯಿಂದ ನೈಸ್‍ರಸ್ತೆಯಲ್ಲಿ ಕನಕಪುರ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮೊದಲು ಲಾರಿಗೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ಗೋಡೆಗೆ ಅಪ್ಪಳಿಸಿದ್ದರಿಂದ ಕಾರು ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ.
ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ
ಕಾರಿನೊಳಗೆ ಸಿಲುಕಿಕೊಂಡಿದ್ದ ಪತ್ನಿ ಸಿಂಧು ಹಾಗೂ ಕುಶಾವಿ ಸಜೀವವಾಗಿ ದಹನವಾಗಿದ್ದಾರೆ. ಮಹೇಂದ್ರ ಹಾಗೂ ಪ್ರಣವಿ ಗಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ತರ್ತು ಕರೆ ಮಾಡಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ಸ್ಥಳಕ್ಕೆ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತಾಯಿ-ಮಗುವಿನ ಮೃತ ದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಹಿಂದಿನಿಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮುಂದೆ ಸಂಚರಿಸುತ್ತಿದ್ದ ಲಾರಿ ಸಹ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಈ ಬಗ್ಗೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.