ಬೆಳಗಾವಿ,ಡಿ.8- ಇತ್ತೀಚೆಗೆ ಅಗಲಿದ ಶಾಸಕ ಎಚ್.ವೈ.ಮೇಟಿ, ಖ್ಯಾತ ಪರಿಸರ ಪ್ರೇಮಿ ಸಾಲುಮರದ ತಿಮಕ್ಕ, ಚಿತ್ರನಟರಾದ ಧರ್ಮೇಂದ್ರ, ಉಮೇಶ್, ವಿಧಾನಪರಿಷತ್‌ನ ಮಾಜಿ ಸದಸ್ಯ ಕೆ.ನರಹರಿ ಸೇರಿದಂತೆ ಹಲವು ಗಣ್ಯರಿಗೆ ವಿಧಾನಪರಿಷತ್‌ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿಯವರು ಅಗಲಿದ ಗಣ್ಯರಿಗೆ ಗೌರವ ಸೂಚಿಸುವ ಸಂತಾಪ ನಿರ್ಣಯವನ್ನು ಮಂಡಿಸಿದರು. ಸಂತಾಪ ನಿರ್ಣಯದ ಮೇಲೆ ಆಡಳಿತ ಪಕ್ಷದ ನಾಯಕ ಎನ್.ಎಸ್.ಬೋಸರಾಜ್, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಮಾತನಾಡಿ, ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಹೊರಟ್ಟಿಯವರು ಅಗಲಿದ ಗಣ್ಯರ ಸೇವೆಯನ್ನು ಸರಿಸಿದರು.
ಪದಶ್ರೀ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತೆ ಶತಾಯುಷಿ ಸಾಲುಮರದ ತಿಮಕ್ಕ ಅವರು ರಸ್ತೆಬದಿ ಆಲದ ಮರಗಳನ್ನು ಬೆಳೆಸಿ ಅವುಗಳನ್ನು ಮಕ್ಕಳಂತೆ ಸಾಕಿ ಪೋಷಣೆ ಮಾಡಿ ಸುಮಾರು 4000ಕ್ಕಿಂತಲೂ ಹೆಚ್ಚಿನ ಮರಗಳನ್ನು ಬೆಳೆಸುವ ಮೂಲಕ ಸಾಲುಮರದ ತಿಮಕ್ಕ ಎಂದೇ ಖ್ಯಾತಿಯಾಗಿದ್ದರು.
ಇವರ ಸ್ಪೂರ್ತಿಯನ್ನು ಮನಗಂಡು ತಿಮಕ್ಕ ಮಾತು 284 ಮಕ್ಕಳು ಸಾಕ್ಷ್ಯ ಚಿತ್ರವನ್ನು ನಿರ್ಮಿಸಲಾಗಿತ್ತು. ಇದು 2000ನೇ ಇಸವಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡಿತ್ತು ಎಂದು ಸರಿಸಿದರು.
ಶಿಕ್ಷಣವನ್ನೂ ಪಡೆಯದಿದ್ದ ಅವರು ಪರಿಸರ ಸಂರಕ್ಷಣೆಗೆ ನೀಡಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ಪದಶ್ರೀ ಪ್ರಶಸ್ತಿ ನೀಡಲಾಗಿತ್ತು. ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯವು 2024 ಗೌರವ ಡಾಕ್ಟರೇಟ್, ಇಂದಿರಾ ಪ್ರಿಯದರ್ಶಿನಿ, ವೃಕ್ಷಮಿತ್ರ, ಕಲ್ಪವಲ್ಲಿ, ಮಹಿಳಾ ರತ್ನ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿದ್ದವು ಎಂದು ನೆನಪಿಸಿಕೊಂಡರು.
ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಸಭಾನಾಯಕ ಬೋಸ್‌ರಾಜ್ ಅವರು, ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ.ಮೇಟಿ ಅವರು ಮಂಡಳ ಪಂಚಾಯ್ತಿ ಅಧ್ಯಕ್ಷರಾಗಿ ತಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಪಿಎಲ್‌ಡಿ ಬ್ಯಾಂಕ್, ಎಪಿಎಂಸಿ ಅಧ್ಯಕ್ಷರಾಗಿ ವಿವಿಧ ಹಂತಗಳಲ್ಲಿ ಬೆಳೆದು, ನಂತರ ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಕೆಲಸ ಮಾಡಿದ್ದರು ಎಂದು ನೆನಪಿಸಿಕೊಂಡರು.
ಬಳಿಕ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಅಗಲಿದ ಗಣ್ಯರ ಸೇವೆಯನ್ನು ಸರಿಸಿದರು. ಮೃತರ ಗೌರವಾರ್ಥವಾಗಿ ಸದನದಲ್ಲಿ ಎಲ್ಲಾ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಸಲ್ಲಿಸಿದರು.
