ಬೆಳಗಾವಿ,ಡಿ.8- ಕರ್ನಾಟಕ ಸರಕಾರದ ವಿರುದ್ಧ ಮಹಾಮೇಳಾವ ನಡೆಸಲು ಯತ್ನಿಸಿದ ಎಂಇಎಸ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು, ಮರಾಠಾ ಏಕೀಕರಣ ಸಮಿತಿಯ ಎಲ್ಲ ಚಟುವಟಿಕೆಗಳನ್ನು ಜಿಲ್ಲಾಡಳಿತ ಹತ್ತಿಕ್ಕಬೇಕು.
ಎಂಇಎಸ್ ಮುಖಂಡರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಸರಕಾರಕ್ಕೆಆಗ್ರಹಿಸಿದರು. ಎಂಇಎಸ್ ರ್ಯಾಲಿ ನಡೆಸಲು ಉದ್ದೇಶಿಸಿದ್ದ ಠೀಲಕವಾಡಿ ಪ್ರದೇಶದತ್ತ ಹೋಗಲು ಯತ್ನಿಸಿದ ಕರವೇ ಕಾರ್ಯಕರನ್ನು ನಗರ ಪೊಲೀಸರು ಬಂಧಿಸಿ ಎಪಿಎಂಸಿ ಠಾಣೆಯತ್ತ ಕರೆದೊಯ್ದರು.
ಬೆಳಗಾವಿ ನಗರದಲ್ಲಿ ದಶಕಗಳಿಂದ ಕಿತಾಪತಿ ಹಾಗೂ ಅಶಾಂತಿ ಉಂಟು ಮಾಡಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಇಲ್ಲದ ದ್ವೇಷ ಉಂಟು ಮಾಡುವ ಸೀಮಿತ ಪುಂಡರ ಹಾವಳಿ ಬೆಳಗವಾಗಿಯಲ್ಲಿ ಹೆಚ್ಚಾಗಿದ್ದು, ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ದೀಪಕ್ ಗುಡಗನಟ್ಟಿ, ವಾಜೀದ್ ಹಿರೇಕೋಡಿ ಹಾಗೂ ಇತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
