Monday, November 25, 2024
Homeರಾಜ್ಯರಾಜ್ಯದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆಗೆ ತೀವ್ರಗೊಂಡ ಒತ್ತಡ

ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆಗೆ ತೀವ್ರಗೊಂಡ ಒತ್ತಡ

ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಲಿದೆ ಎಂದೇ ಹೇಳಲಾಗುತ್ತಿರುವ ಜಾತಿ ಜನಗಣತಿ ವರದಿ ಬಿಡುಗಡೆಗೆ ಒತ್ತಡ ಕೇಳಿಬರುತ್ತಿದೆ. ಜಾತಿ ಜನಗಣತಿ ವರದಿಗೆ ಆದಷ್ಟು ಬೇಗ ಸಮ್ಮತಿ ಸೂಚಿಸಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರೂ ಕೂಡಾ ಈ ಪ್ರಕ್ರಿಯೆ ಕೊಂಚ ತಡವಾಗುವ ಸಾಧ್ಯತೆಗಳಿವೆ. ಕಾಂತರಾಜ್ ಆಯೋಗ ಸಿದ್ದಪಡಿಸಿದ್ದ ಸಾಮಾಜಿಕ ಹಾಗೂ ಆರ್ಥಿಕ ಜಾತಿ ಸರ್ವೆ ವರದಿ ಸಿದ್ದಗೊಂಡು ಈಗಾಗಲೇ 5 ವರ್ಷದ ಮೇಲಾಗಿದೆ. ಸದ್ಯ ಈ ವರದಿ ಇನ್ನೂ ಬಹಿರಂಗವಾಗದೆ ಕಡತಗಳು ಧೂಳು ತಿನ್ನುತ್ತಿವೆ.

ಪ್ರಬಲ ಸಮುದಾಯಗಳು ಈ ವರದಿ ಬಿಡುಗಡೆಗೆ ತೀವ್ರವಾಗಿ ವಿರೋಧವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿರುವುದರಿಂದ ಜೇನುಗೂಡಿನಂತಿರುವ ಜಾತಿ ಜನಗಣತಿ ವರದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈ ಹಾಕಲಿದ್ದಾರೆಯೇ ಎಂಬ ಯಕ್ಷಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಅತ್ತ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ಧಪಡಿಸಿದ್ದ ವರದಿ ಬಿಡುಗಡೆಗೆ ಸಿದ್ಧವಾಗಿ ಹಲವಾರು ವರ್ಷಗಳೇ ಆಗಿದ್ದರೂ ರಾಜಕೀಯ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿದೆ.

ವಾಸ್ತವವಾಗಿ ಈ ವರದಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ 2013 ರಲ್ಲಿ ವಿಶೇಷ ಆಸಕ್ತಿ ವಹಿಸಿ ಅಂದಾಜು 162 ಕೋಟಿ ರೂ.ಗಳ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕಾಂತರಾಜು ನೇತೃತ್ವದಲ್ಲಿ ಸಮೀಕ್ಷೆಯನ್ನು ನಡೆಸಿದ್ದರು.

2016 ರ ವೇಳೆಗೆ ಬಹುತೇಕ ವರದಿ ಪೂರ್ಣಗೊಂಡು ಅಂದು ಸರ್ಕಾರ ಜನರ ನಾಡಿಮಿಡಿತವನ್ನು ಅರಿಯಲು ವರದಿಯನ್ನು ಸೋರಿಕೆ ಮಾಡಿತ್ತು. ಅದೇ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ಮುನ್ನಲೆಗೆ ಬಂದಿತ್ತು.ಇಂತಹ ಸಂದರ್ಭದಲ್ಲಿ ವರದಿಯನ್ನು ಬಿಡುಗಡೆ ಮಾಡಿದರೆ ಸರ್ಕಾರಕ್ಕೆ ತಿರುಗುಬಾಣವಾಗಬಹುದು ಎಂಬ ಆತಂಕದಿಂದ ಸಿದ್ದರಾಮಯ್ಯನವರು ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ತದನಂತರ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕೂಡ ವರದಿಯನ್ನು ಕಣ್ಣೆತ್ತಿಯೂ ನೋಡದೆ ಅಕಾರ ಮುಗಿಸಿದ್ದು ಇತಿಹಾಸ.

ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ

ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯನವರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ಕಾಂಗ್ರೆಸ್ ಅಭೂತಪೂರ್ವ ಬಹುಮತವನ್ನು ಪಡೆದು ಅಧಿಕಾರಕ್ಕೆ ಬಂದಿದ್ದೂ ಆಗಿದೆ, ಸಿದ್ದರಾಮಯ್ಯನವರು ಸಿಎಂ ಆಗಿದ್ದೂ ಆಗಿದೆ. ಹಿಂದುಳಿದ ವರ್ಗಗಳ ಆಯೋಗ ಸಿದ್ದಪಡಿಸಿರುವ ಈ ವರದಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿ ತದನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂಗೀಕರಿಸುವುದಷ್ಟೇ ಬಾಕಿ ಉಳಿದಿದೆ.

ತಲೆಕೆಳಗಾದ ಲೆಕ್ಕಾಚಾರ : ಇದುವರೆಗೂ ರಾಜ್ಯದಲ್ಲಿ ಲಿಂಗಾಯಿತರು, ತದನಂತರ ಒಕ್ಕಲಿಗರು, ಕುರುಬರು, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು, ಪರಿಶಿಷ್ಟ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ಭಾವಿಸಲಾಗಿತ್ತು.

ಆದರೆ ಸರ್ಕಾರ ನಡೆಸಿರುವ ಅಧಿಕೃತ ವರದಿ ಪ್ರಕಾರ, ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದು, ಕುರುಬ ಜನಾಂಗವೇ ಅತಿ ಹಿಂದುಳಿದ ಸಮುದಾಯವಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ಮತ್ತು ಜಾತಿ ಮರುವಿಂಗಡಣೆ ವರದಿ ಸಿದ್ಧವಾಗಿದ್ದು. ಇನ್ನೇನು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಈ ವರದಿಗೆ ಸರ್ಕಾರ ಸಮ್ಮತಿ ಸೂಚಿಸದೆ ಇರಲು ಹಲವಾರು ಕಾರಣಗಳಿವೆ. ವಿಳಂಬ ಧೋರಣೆ ಅನುಸರಿಸಲು ಕಾನೂನಾತ್ಮಕ ಹಾಗೂ ರಾಜಕೀಯ ಕಾರಣಗಳೂ ಇವೆ. 2024ರ ಲೋಕಸಭಾ ಚುನಾವಣೆವರೆಗೂ ಈ ವರದಿಗೆ ಸಮ್ಮತಿ ಸೂಚಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ತಡೆ ಹಿಡಿಯುವ ಸಾಧ್ಯತೆಗಳಿವೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಲಿದೆ. ಮುಂದಿನ ವರ್ಷ ಏಪ್ರಿಲ್ – ಮೇ ವೇಳೆಗೆ ಚುನಾಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ವರದಿ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ನಿಜ್ಜರ್ ಹತ್ಯೆ ತನಿಖೆಗೆ ಸಹಕರಿಸುವಂತೆ ಭಾರತಕ್ಕೆ ಅಮೆರಿಕ ಮನವಿ

ಕಾಂತರಾಜ್ ಸಮಿತಿಯು ಜಾತ್ಯಾಧಾರಿತ ಜನ ಗಣತಿ ರೂಪಿಸುವಾಗ ತಪ್ಪು ಲೆಕ್ಕ ಹಾಕಿದೆ ಎನ್ನುವ ಕೆಲವು ಸಮುದಾಯಗಳ ವಾದವಾಗಿತ್ತು. ಈ ಜಾತಿ ಗಣತಿ ವರದಿ ಮಾಧ್ಯಮಗಳಿಗೆ ಸೋರಿಕೆ ಕೂಡಾ ಆಗಿತ್ತು. ಈ ವರದಿಗಳ ಪ್ರಕಾರ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಲಿಂಗಾಯತ ಸಮುದಾಯ ಕೇವಲ ಶೇ. 14 ಹಾಗೂ ಒಕ್ಕಲಿಗ ಸಮುದಾಯ ಕೇವಲ ಶೇ. 11ರಷ್ಟು ಪ್ರತಿನಿಸುತ್ತದೆ ಎಂಬ ಮಾಹಿತಿ ಇದೆ ಎನ್ನಲಾಗಿದೆ.

ಇದೇ ವಿಚಾರವಾಗಿ ಕೆಲವು ಸಮುದಾಯಗಳ ನಾಯಕರು ಹೈಕೋರ್ಟ್ ಮೊರೆ ಹೋಗಿದ್ದರು. ಜಾತಿ ಗಣತಿ ನಡೆಸೋದು ಕೇಂದ್ರ ಸರ್ಕಾರದ ವಿಶೇಷಾಕಾರ. ಈ ಅಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದವು. ಇನ್ನೊಂದೆಡೆ ಒಬಿಸಿ ಸಮುದಾಯಗಳ ಕಾರ್ಯಕರ್ತರೂ ನ್ಯಾಯಾಲಯದ ಮೊರೆ ಹೋಗಿದ್ದರು. ಸರ್ಕಾರವು ವರದಿಯನ್ನು ಒಪ್ಪಿ ಅದರ ಶಿಫಾರಸ್ಸುಗಳನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದ್ದರು. ಸದ್ಯ ಎರಡೂ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ.

ಜಾತಿವಾರು ಜನಸಂಖ್ಯೆ

  • ಪರಿಶಿಷ್ಟ ಜಾತಿ(ಎಸ್ಸಿ)ಯವರ ಸಂಖ್ಯೆ 1.08 ಕೋಟಿ
  • ಪರಿಶಿಷ್ಟ ಪಂಗಡ(ಎಸ್ಟಿ)ದವರ ಪ್ರಮಾಣ 40.45 ಲಕ್ಷ
  • ಮುಸ್ಲಿಮರು- 70 ಲಕ್ಷ
  • ಲಿಂಗಾಯತ- 65 ಲಕ್ಷ
  • ಒಕ್ಕಲಿಗ- 60 ಲಕ್ಷ
  • ಕುರುಬರು- 45 ಲಕ್ಷ
  • ಈಡಿಗ- 15 ಲಕ್ಷ
  • ವಿಶ್ವಕರ್ಮ- 15
  • ಬೆಸ್ತ- 15 ಲಕ್ಷ
  • ಬ್ರಾಹ್ಮಣ- 14 ಲಕ್ಷ
  • ಗೊಲ್ಲ(ಯಾದವ) -10 ಲಕ್ಷ
  • ಮಡಿವಾಳ ಸಮಾಜ- 6
  • ಅರೆ ಅಲೆಮಾರಿ -6 ಲಕ್ಷ
  • ಕುಂಬಾರ -5 ಲಕ್ಷ
  • ಸವಿತಾ ಸಮಾಜ-5 ಲಕ್ಷ
RELATED ARTICLES

Latest News