ಬೆಂಗಳೂರು,ಜ.23- ಅಯೋಧ್ಯೆಯ ಶ್ರೀರಾಮಮಂದಿರ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಅದಕ್ಕೆ ನಮ್ಮ ವಿರೋಧ ಇದ್ದೇ ಇರುತ್ತದೆ. ನಾವು ದಶರಥ ರಾಮನನ್ನು ಪ್ರೀತಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3 ತಿಂಗಳಿನಲ್ಲಿ 3 ಕೋಟಿ ಜನರನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವ ಬಿಜೆಪಿಯ ಯೋಜನೆ ಕುರಿತಂತೆ ಪ್ರತಿಕ್ರಿಯಿಸಿದರು.
ರಾಜ್ಯದ ಹಳ್ಳಿಹಳ್ಳಿಯಲ್ಲಿರುವ ದೇವಸ್ಥಾನಗಳು ರಾಮಮಂದಿರಗಳಲ್ಲವೇ? ಅಲ್ಲಿರುವ ಮೂರ್ತಿ ಶ್ರೀರಾಮನದಲ್ಲವೇ? ಸೀತೆ, ಲಕ್ಷ್ಮಣ, ಆಂಜನೇಯ ಅವರ ಮೂರ್ತಿಗಳು ಪೂಜ್ಯನೀಯವಲ್ಲವೇ? ಎಂದು ಪ್ರಶ್ನಿಸಿದರು. ಬಿಜೆಪಿಯವರು ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಅದನ್ನು ವಿರೋಧಿಸುತ್ತೇವೆ. ನಾವು ಮಹಾತ್ಮಗಾಂಧೀಜಿ ಹೇಳಿದ ರಾಮನನ್ನು, ರಾಮಾಯಣದ ರಾಮನನ್ನು ದಶರಥ ಪುತ್ರ ಶ್ರೀರಾಮಚಂದ್ರನನ್ನು ಪೂಜಿಸುತ್ತೇವೆ, ಬಿಜೆಪಿಯ ರಾಮನನ್ನಲ್ಲ ಎಂದು ಹೇಳಿದರು.
ನಿಗಮಮಂಡಳಿಯ ನೇಮಕಾತಿ ಪಟ್ಟಿಗೆ ರಾಜ್ಯದ ಮಟ್ಟಿಗೆ ಅಂಗೀಕಾರ ನೀಡಲಾಗಿದೆ. ಈಗಾಗಲೇ ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಚರ್ಚೆ ಮಾಡಿ ಅನುಮೋದನೆ ನೀಡಿದ್ದೇವೆ. ನಮ್ಮ ಪಾತ್ರ ಮುಗಿದಿದೆ. ಶಾಸಕರ ಹೆಸರಿನ ಪಟ್ಟಿಗೆ ಅನುಮೋದನೆ ದೊರೆತಿದೆ. ಕಾರ್ಯಕರ್ತರ ಹೆಸರಿನ ಪಟ್ಟಿಯ ಕುರಿತಂತೆಯೂ ನಾವಿಬ್ಬರೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲರೊಂದಿಗೆ ಚರ್ಚಿಸಿ ಸಹಮತ ನೀಡಿದ್ದೇವೆ. ಆ ಪಟ್ಟಿಯನ್ನು ಸುರ್ಜೆವಾಲ ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‍ರಿಂದ ಸಹಿಯಾಗಿ ಬರಬೇಕಿದೆ ಎಂದರು.
ನಿಗಮಮಂಡಳಿ ನೇಮಕಾತಿಯಲ್ಲಿ ತಮ್ಮ ಸಲಹೆ ಪಡೆದುಕೊಂಡಿಲ್ಲ ಎಂದು ಗೃಹಸಚಿವ ಪರಮೇಶ್ವರ್‍ರವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರು, ಎಲ್ಲರ ಸಲಹೆ ಪಡೆಯುವುದು ಕಷ್ಟವಾಗುತ್ತದೆ. ನಾನು ಅವರೊಂದಿಗೆ ಈ ಬಗ್ಗೆಯ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್‍ಗಾಂಯವರ ಯಾತ್ರೆಗೆ ಅಡ್ಡಿಪಡಿಸುವ ಮೂಲಕ ಬಿಜೆಪಿಯವರು ವ್ಯಕ್ತಿಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನ ನಡೆಸಿದ್ದಾರೆ ಎಂದರು.
ಅಸ್ಸಾಂನಲ್ಲಿ ಪಾದಯಾತ್ರೆಗೆ ಅಡ್ಡ ಹಾಕಲಾಗಿದೆ. ರಾಹುಲ್‍ಗಾಂಯವರು ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯ ಕೆಲ ಪುಂಡರು ಇದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಿದೆ ಎಂದು ಹೇಳಿದರು.