ನವದೆಹಲಿ,ಜ.25- ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಲಿ ವಿಧಾನಪರಿಷತ್ ಸದಸ್ಯ ಬಣಿಜಿಗ ಸಮುದಾಯದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಪುನಃ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಸಮೀಪ ಇರುವ ಸಂದರ್ಭದಲ್ಲೇ ಬಿಜೆಪಿ ನಡೆಸಿದ ಗೌಪ್ಯ ಆಪರೇಷನ್ ಕಮಲ ಯಶಸ್ವಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರಿಂದ ಸಿಡಿದೆದ್ದಿದ್ದ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಇದೀಗ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಮಲವನ್ನು ಮುಡಿಗೇರಿಸಿಕೊಂಡಿದ್ದಾರೆ. ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗ್‍ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ರಾಜೀವ್ ಚಂದ್ರಶೇಖರ್ , ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರುಗಳು ಶೆಟ್ಟರ್‍ಗೆ ಕೇಸರಿ ಶಾಲು ಹಾಕಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಜಗದೀಶ್ ಶೆಟ್ಟರ್ ಪಕ್ಷ ಸೇರ್ಪಡೆಗೆ ವೇದಿಕೆಯಲ್ಲಿದ್ದ ಎಲ್ಲ ನಾಯಕರು ಹರ್ಷ ವ್ಯಕ್ತಪಡಿಸಿ ಅವರ ಹಿರಿತನಕ್ಕೆ ತಕ್ಕಂತೆ ಸ್ಥಾನಮಾನ ನೀಡುವ ಭರವಸೆಯನ್ನೂ ಸಹ ನೀಡಲಾಯಿತು. ಕಳೆದ ಎರಡು ದಿನಗಳಿಂದ ಮಿಂಚಿನ ರಾಜಕೀಯ ಬೆಳವಣಿಗೆಯಲ್ಲಿ ಯಾರಿಗೂ ಕೂಡ ಗುಟ್ಟು ಬಿಟ್ಟು ಕೊಡದೆ ಗೌಪ್ಯವಾಗಿ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಶಂಕರ್ ಪಟೇಲ್ ಮುನೇನಕೊಪ್ಪ ಅವರುಗಳು ಶೆಟ್ಟರ್ ಅವರನ್ನು ದೆಹಲಿಗೆ ಕರೆದೊಯ್ದಿದ್ದರು.
ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ ಶೆಟ್ಟರ್ ಪಕ್ಷ ಸೇರ್ಪಡೆ ಕುರಿತಂತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಶೆಟ್ಟರ್ ಅವರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಅಮಿತ್ ಷಾ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಬಿಜೆಪಿ ಸೇರ್ಪಡೆಗೆ ಹಸಿರು ನಿಶಾನೆ ಸಿಕ್ಕಿತು.
ಶೆಟ್ಟರ್ ಅವರ ಹಿರಿತನಕ್ಕೆ ತಕ್ಕಂತೆ ನಡೆಸಿಕೊಳ್ಳುವುದು ನಮ್ಮ ಜವಾಬ್ದಾರಿ. ಅವರ ಬೇಡಿಕೆಗಳನ್ನು ಪಕ್ಷದ ಪ್ರಮುಖರ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಅಮಿತ್ ಷಾ ಮುಂದೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಭರವಸೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಾನು ನಿವೃತ್ತಿ ಘೋಷಿಸಿಲ್ಲ : ಮೇರಿ ಕೋಮ್
ಅಮಿತ್ ಷಾ ನಿವಾಸದಲ್ಲಿ ಮಾತುಕತೆ ಯಶಸ್ವಿಯಾದ ಬೆನಲ್ಲೇ ಶೆಟ್ಟರ್ ಅವರು ದೆಹಲಿಯಲ್ಲಿರುವ ಬಿಜೆಪಿ ಕಚೇರಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಜೊತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿದ್ದು, ಬಿಜೆಪಿಗೆ ವಾಪಸ್ ಬರುವಂತೆ ಜಗದೀಶ್ ಶೆಟ್ಟರ್‍ಗೆ ಯಡಿಯೂರಪ್ಪ ಆಹ್ವಾನ ಕೊಟ್ಟಿದ್ದರು. ವರಿಷ್ಠರನ್ನು ಒಪ್ಪಿಸುತ್ತೇವೆ, ಎಂದು ಹೇಳಿದ್ದರು. ನಾನು ಮುಕ್ತವಾಗಿದ್ದೇನೆ. ಆದರೆ ಬಿಜೆಪಿಯ ಪ್ರಮುಖರ ನಾಯಕರು ಒಪ್ಪಿಗೆ ನೀಡಬೇಕು. ಅಲ್ಲದೆ ದೆಹಲಿಯಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಕಸರತ್ತು ನಡೆಸಿ ಮಾತುಕತೆಗೆ ಒಪ್ಪಿಸಿದ್ದರು.
ಬಿಜೆಪಿ ಸೇರ್ಪಡೆಗೂ ಮುನ್ನ ಜಗದೀಶ್ ಶೆಟ್ಟರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ. ರಾಜೀನಾಮೆಗೂ ಮುನ್ನ ಶೆಟ್ಟರ್ ಅವರು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಕರೆ ಮಾಡಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರು. ಈ ವೇಳೆ ಪತ್ರದ ಮೂಲಕ ಬೇಡ, ನೇರವಾಗಿ ಬಂದು ರಾಜೀನಾಮೆ ನೀಡುವಂತೆ ಅವರು ಸೂಚಿಸಿದ್ದರು ಎನ್ನಲಾಗಿದೆ.
ಸಮರ್ಥನೆ: ಇನ್ನು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ತಮ್ಮ ರಾಜಕೀಯ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಅಪ್ಪಿತಪ್ಪಿಯೂ ಕಾಂಗ್ರೆಸ್ ಬಗ್ಗೆ ಅವರು ಎಲ್ಲಿಯೂ ಟೀಕೆ ಮಾಡದೆ ನನ್ನನ್ನು ಆ ಪಕ್ಷವು ಗೌರವಯುತವಾಗಿ ನಡೆಸಿಕೊಂಡಿದೆ ಎಂದು ಹೇಳಿದರು. ಕಾಂಗ್ರೆಸ್ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‍ಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಲಾಲ್‍ಭಾಗ್‍ಗೆ ತೆರಳಲು ಮೆಟ್ರೋ ರೈಲಿನಲ್ಲಿ 30 ರೂ.ಗಳ ಪೇಪರ್ ಟಿಕೆಟ್
ನಾನು ಪಕ್ಷಕ್ಕೆ ವಾಪಸಾಗಬೇಕೆಂದು ನಾಯಕರ ಅಪೇಕ್ಷೆ ಇತ್ತು. ಅಮಿತ್‍ಶಾ ಅವರು ಅತ್ಯಂತ ಗೌರವದಿಂದ ಬರಮಾಡಿಕೊಂಡರು. ನಾನು ಬಿಜೆಪಿ ಮರು ಸೇರ್ಪಡೆಯಾಗಿದ್ದಕ್ಕೆ ಬಹಳ ಸಂತಸ ಆಗಿದೆ. ನಾನು ಪರಿಷತ್ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದೇನೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ. ಇ-ಮೇಲ್ ಮೂಲಕ ರಾಜೀನಾಮೆಯನ್ನು ನೀಡಿದ್ದೇನೆ. ನರೇಂದ್ರಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು. ನಾನು ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.