Monday, November 25, 2024
Homeರಾಜ್ಯಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುರಂಗ ಮಾರ್ಗ

ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸುರಂಗ ಮಾರ್ಗ

ಬೆಂಗಳೂರು,ಜ.26- ನಗರದ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಿತದೃಷ್ಟಿಯಿಂದ ಆಯ್ದ ಸ್ಥಳಗಳಲ್ಲಿ ಸುರಂಗ ರಸ್ತೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ತಿಳಿಸಿದರು. ನಗರದ ಮಾಣಿಕ್‍ಷಾ ಪೆರೇಡ್ ಮೈದಾನನಲ್ಲಿಂದು ನಡೆದ ರಾಜ್ಯಮಟ್ಟದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ರಾಜ್ಯಪಾಲರು ಪ್ರಾಯೋಗಿಕವಾಗಿ 2 ಕಿ.ಮೀ. ವಿಸ್ತೀರ್ಣದ ಸುರಂಗ ರಸ್ತೆಯ ನಿರ್ಮಾಣಕ್ಕಾಗಿ ಅಂತರರಾಷ್ಟ್ರೀಯ ಏಜೆನ್ಸಿಯ ನೆರವಿನಿಂದ ಡಿಪಿಆರ್ ತಯಾರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.

ಬೆಂಗಳೂರಿನ ಮುಖ್ಯರಸ್ತೆಗಳ ಸುಸ್ಥಿರ ಅಭಿವೃದ್ಧಿಗಾಗಿ 2 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿ ಪ್ರಮುಖ ರಸ್ತೆಗಳ ಬೈಪಾಸಿಂಗ್‍ಗಾಗಿ ಟೆಂಡರ್ ಕರೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಯುಗಯುಗಾಂತರಗಳಿಂದ ಮಾನವೀಯತೆ ನೆಲೆಸಿರುವ ರಾಷ್ಟ್ರ ನಮ್ಮ ಭಾರತ. ಇದು ವಿಭಿನ್ನ ಧರ್ಮ, ಸಮಾಜ, ಸಂಸ್ಕøತಿ ಮತ್ತು ಭಾಷೆಗಳಿಂದ ಆಶೀರ್ವದಿಸಲ್ಪಟ್ಟಿರುವ ದೇಶವಾಗಿದೆ. ಎಲ್ಲವೂ ಪರಸ್ಪರ ಸೌಹಾರ್ದತೆಯಿಂದ ಪರಸ್ಪರ ಸಂಬಂಧ ಹೊಂದಿವೆ. ಇಡೀ ಜಗತ್ತಿಗೆ ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ನೀಡುವ ಎಲ್ಲರ ನಡುವೆ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಬೇಕು ಹಾಗೂ ನಮ್ಮ ರಾಷ್ಟ್ರೀಯ ಏಕತೆಯ ಬಲವರ್ಧನೆ ಮತ್ತು ಐಕ್ಯಮತ್ಯಕ್ಕಾಗಿ ನಾವು ಶ್ರಮಿಸಬೇಕು. ಕರ್ನಾಟಕದ ಎಲ್ಲಾ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಒಳಗೊಳ್ಳುವಿಕೆಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ರಾಜ್ಯಪಾಲರು ಕರೆ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬದ್ಧ:
ರಾಜ್ಯಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬದ್ಧತೆಯನ್ನು ಹೊಂದಿದೆ. ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಶಕ್ತಿ ಯೋಜನೆಯಡಿ ಜೂನ್ 11 ರಿಂದ ಜಾರಿಗೊಳಿಸಿದ್ದು, 3.5 ಕೋಟಿ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ 134.34 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆ.ಜಿ. ಆಹಾರ ಧಾನ್ಯದೊಂದಿಗೆ ಹೆಚ್ಚುವರಿ 5 ಕೆ.ಜಿ. ಆಹಾರಧಾನ್ಯವನ್ನು ವಿತರಿಸಲು ರಾಜ್ಯಸರ್ಕಾರ ಬದ್ಧವಾಗಿದೆ. ಆಹಾರಧಾನ್ಯ ಲಭ್ಯವಾಗುವವರೆಗೂ ರಾಜ್ಯಸರ್ಕಾರ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಆಹಾರಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ 34 ರೂ. ನಂತೆ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ನವೆಂಬರ್ ಅಂತ್ಯಕ್ಕೆ 2,900.12 ಕೋಟಿ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ.

ಕಳೆದ ಜುಲೈ 1 ರಿಂದ ಜಾರಿಗೆ ತಂದ ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು 1.50 ಕೋಟಿ ಗ್ರಾಹಕರು ಪಡೆಯುತ್ತಿದ್ದು, ಸರ್ಕಾರ ಪ್ರತಿ ತಿಂಗಳು ಎಲ್ಲಾ ಎಸ್ಕಾಂಗಳಿಗೆ 700 ಕೋಟಿ ರೂ. ಮುಂಗಡ ಸಹಾಯಧನವನ್ನು ಬಿಡುಗಡೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಪ್ರತಿ ಕುಟುಂಬದ ಅರ್ಹ ಯಜಮಾನತಿಗೆ 2 ಸಾವಿರ ರೂ. ನೀಡುತ್ತಿದ್ದು, ಈ ಯೋಜನೆಯಡಿ ನೊಂದಾಯಿಸಿರುವ 1.17 ಕೋಟಿ ಫಲಾನುಭವಿಗಳಿಗೆ 8,181 ಕೋಟಿ ರೂ. ನೆರವು ವರ್ಗಾಯಿಸಲಾಗಿದೆ. ಯುವನಿಧಿ ಯೋಜನೆಯಡಿ ಡಿಫ್ಲೋಮಾದಾರರಿಗೆ 1,500 ರೂ. ಹಾಗೂ ಪದವೀಧರರಿಗೆ ನಿರುದ್ಯೋಗಿ ಭತ್ಯೆಯನ್ನು 2 ವರ್ಷದವರೆಗೆ ನೀಡಲಿದ್ದು, ಸ್ವಾಮಿ ವಿವೇಕಾನಂದ ಜಯಂತಿಯಂದು ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿ ರಾಜ್ಯಸರ್ಕಾರ ಬದ್ಧತೆ ಮೆರೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ 223 ತಾಲೂಕುಗಳು ಬರಪೀಡಿತವಾಗಿದ್ದು, ಪ್ರತಿ ರೈತರಿಗೆ 2 ಸಾವಿರ ರೂ.ವರೆಗಿನ ಮಧ್ಯಂತರ ಪರಿಹಾರವನ್ನು ಆಧಾರ್ ಲಿಂಕ್ ಮಾಡಿರುವ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಸುಮಾರು 30 ಲಕ್ಷ ರೈತರಿಗೆ 580 ಕೋಟಿ ರೂ. ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಬರಪರಿಸ್ಥಿತಿಯ ಪರಿಣಾಮಗಳನ್ನು ತಗ್ಗಿಸಲು ಹಾಗೂ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಕಿರುದಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‍ಗೆ 10 ಸಾವಿರ ರೂ.ನಂತೆ ಗರಿಷ್ಠ 2 ಹೆಕ್ಟೇರ್‍ವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದರು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ವೈಫಲ್ಯದಡಿ ಮಧ್ಯಂತರ ಬೆಳೆ ವಿಮೆ ಪರಿಹಾರದಡಿ 6.77 ಲಕ್ಷ ರೈತ ಫಲಾನುಭವಿಗಳಿಗೆ 459.59 ಕೋಟಿ ಬೆಳೆವಿಮೆ ಪರಿಹಾರವನ್ನು ವಿಮಾ ಸಂಸ್ಥೆಗಳಿಂದ ಇತ್ಯರ್ಥಪಡಿಸಲಾಗಿರುತ್ತದೆ ಎಂದು ತಿಳಿಸಿದರು.

ಎಇಡಿ ಯೋಜನೆ :
ಡಾ.ಪುನೀತ್ ರಾಜ್‍ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಹಠಾತ್ ಹೃದಯಾಘಾತದಿಂದ ಸಂಭವಿಸುವ ಮರಣಗಳನ್ನು ತಡೆಗಟ್ಟಲು ಸಾರ್ವಜನಿಕ ದಟ್ಟಣೆಯ ಸ್ಥಳ, ಬಸ್ ನಿಲ್ದಾಣ, ರೈಲು ನಿಲ್ದಾಣ, ಸರ್ಕಾರಿ ಕಚೇರಿಗಳಲ್ಲಿ ಎಇಡಿ ಸಾಧನಗಳನ್ನು ಅಳವಡಿಸಲು ಯೋಜನೆ ನಿರ್ಮಿಸಲಾಗುತ್ತಿದೆ ಎಂದು ರಾಜ್ಯಪಾಲರು ತಿಳಿಸಿದರು.

ಡಯಾಲಿಸಿಸ್ ಕೇಂದ್ರಗಳನ್ನು ರಾಜ್ಯದಲ್ಲಿ 168 ರಿಂದ 219 ಕ್ಕೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. 108 ಆರೋಗ್ಯ ಕವಚ ಯೋಜನೆಯಡಿ ತುರ್ತು ಆಂಬುಲೆನ್ಸ್ ಸೇವೆಗಳಿಗೆ ಹೊಸದಾಗಿ 262 ಆಂಬುಲೆನ್ಸ್‍ಗಳನ್ನು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2023 ರಲ್ಲಿ 37.03 ಲಕ್ಷ ಕುಟುಂಬಗಳ 63.13 ಲಕ್ಷ ಜನರಿಗೆ ಕೆಲಸ ಒದಗಿಸಲಾಗಿದೆ. ರಾಜ್ಯದಲ್ಲಿ 72.38 ಲಕ್ಷ ಮನೆಗಳಿಗೆ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ನಳ ನೀರು ಸಂಪರ್ಕ ಒದಗಿಸಲಾಗಿದೆ. 2023-24 ನೇ ಸಾಲಿನಲ್ಲಿ 17.24 ಲಕ್ಷ ರೈತರಿಗೆ 13,672.74 ಕೋಟಿ ರೂ.ಗಳ ಬೆಳೆಸಾಲ ವಿತರಿಸಲಾಗಿದೆ. 185.74 ಕೋಟಿ ರೂ.ಗಳ ವೆಚ್ಚದಲ್ಲಿ ಅನಿಮೀಯಾ ಪೌಷ್ಠಿಕ ಕರ್ನಾಟಕ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.

ಬ್ರಾಂಡ್ ಬೆಂಗಳೂರು ಅಡಿಯಲ್ಲಿ 70 ಸಾವಿರಕ್ಕೂ ಹೆಚ್ಚು ಸಲಹೆಗಳನ್ನು ಸಂಗ್ರಹಿಸಲಾಗಿದ್ದು, ತಜ್ಞರ ಸಮಿತಿಯು ಆ ಸಲಹೆಗಳನ್ನು ಪರಿಶೀಲಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶಿಫಾರಸ್ಸು ಮಾಡಲಿದೆ ಎಂದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತಂದಿದ್ದು, 4 ಚಕ್ರಗಳ ವಾಹನಗಳಿಗೆ 4 ಲಕ್ಷ ರೂ.ಗಳ ಸಹಾಯಧನ ನೀಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಗಣರಾಜ್ಯೋತ್ಸವದಲ್ಲಿ ಸ್ತ್ರೀ ಶಕ್ತಿ ಪ್ರದರ್ಶನ ಅನಾವರಣ

ರಾಜ್ಯದಲ್ಲಿ ಮೊದಲ ಬಾರಿಗೆ ಅಲ್ಪಸಂಖ್ಯಾತ ಸಮುದಾಯದ ಉದ್ಯಮಿಗಳು ಪಡೆಯುವ ಸಾಲಕ್ಕೆ ಶೇ.6 ರ ಬಡ್ಡಿದರದಲ್ಲಿ 10 ಕೋಟಿ ರೂ.ಗಳವರೆಗೆ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವರ್ಷಪೂರ್ತಿ ಆಚರಿಸಲಾಗುತ್ತಿದೆ ಎಂದರು.

ಮಾಸಾಶನ ಹೆಚ್ಚಳ :
ಸಂಕಷ್ಟದಲ್ಲಿರುವ ನಿವೃತ್ತ ಪತ್ರಕರ್ತರ ಮಾಸಾಶನ ಮೊತ್ತವನ್ನು 12 ಸಾವಿರ ರೂ.ಗಳಿಗೆ ಹಾಗೂ ಕುಟುಂಬ ಮಾಸಾಶನ ಮೊತ್ತವನ್ನು 6 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ರಾಜ್ಯದ ಶಾಲಾ-ಕಾಲೇಜುಗಳ ಆವರಣದಲ್ಲಿ 50 ಲಕ್ಷ ಸಸಿಗಳನ್ನು ನೆಡುವ ಸಸ್ಯಶ್ಯಾಮಲ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿದರು.
ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ವಿವಿಧ ಮಾದರಿಯ 1148 ಹೊಸ ಬಸ್‍ಗಳನ್ನು ಸೇರ್ಪಡೆ ಮಾಡಲಾಗಿದೆ. ತಳಮಟ್ಟದಲ್ಲಿ ಪೊಲೀಸಿಂಗ್ ವ್ಯವಸ್ಥೆ ಬಲಪಡಿಸಲು ಹಗಲು-ರಾತ್ರಿ ಗಸ್ತುಗಳನ್ನು ಈ ಬೀಟ್ ಮೂಲಕ ಕಾರ್ಯಗತಗೊಳಿಸಲಾಗಿದೆ. ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ 165 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 45,345 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಿ 42,292 ಜನರಿಗೆ ಉದ್ಯೋಗ ಲಭ್ಯವಾಗಲಿದೆ ಎಂದರು.

ದೇಶದ ಸಾಫ್ಟ್‍ವೇರ್ ರಫ್ತಿನಲ್ಲಿ ಶೇ.42 ರಷ್ಟು ಪಾಲಿತ್ತು. ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಐಟಿಬಿಟಿ ನೀತಿಗಳನ್ನು ಪರಿಷ್ಕರಿಸಲಾಗುತ್ತದೆ ಎಂದು ಹೇಳಿದರು. ಕಟ್ಟಡ ಮತ್ತು ಇತರ ನಿರ್ಮಾಣ ಕಲ್ಯಾಣ ಮಂಡಳಿಯಡಿ 3.33 ಲಕ್ಷ ಫಲಾನುಭವಿಗಳಿಗೆ 359.55 ಕೋಟಿ ರೂ. ಸಹಾಯ ಧನ ವಿತರಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ಡಿಜಟಲೀಕರಣ, ಆಕಾರ್‍ಬಂದ್, ಯುಪಿಓಆರ್ ಯೋಜನೆ ಮರುಸಮೀಕ್ಷೆ ಮುಂತಾದ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಸರ್ಕಾರದ 44 ಯೋಜನೆಗಳನ್ನು ಡಿಬಿಟಿ ವೇದಿಕೆಯಲ್ಲಿ ಸಂಯೋಜಿಸಿ 10,035 ಕೋಟಿ ರೂ.ಗಳ ಆರ್ಥಿಕ ನೆರವನ್ನು 2.54 ಕೋಟಿ ಜನರಿಗೆ ತಲುಪಿಸಿರುವುದಾಗಿ ರಾಜ್ಯಪಾಲರು ತಿಳಿಸಿದರು.

ಭಾರತಕ್ಕೆ ಗಣರಾಜ್ಯೋತ್ಸವದ ಶುಭಾಷಯ ಕೋರಿದ ಅಮೆರಿಕ

ನೋಂದಣಿ ಮತ್ತು ಮುಂದ್ರಾಂಕ ಇಲಾಖೆ 2.0 ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, 10,483 ಕೋಟಿ ರೂ.ಗಳ ಹೆಚ್ಚುವರಿ ಆದಾಯಕ್ಕೆ ಗಮನಾರ್ಹ ಕೊಡುಗೆ ನೀಡಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಪ್ರಸಕ್ತ ಸಾಲಿನಲ್ಲಿ 42 ಕಿ.ಮೀ.ವರೆಗೆ ಪ್ರಾಯೋಗಿಕವಾಗಿ ನೀರು ಹರಿಸಿ ಚಾಲನೆಗೊಳಿಸಲು ಯೋಜಿಸಲಾಗಿದೆ ಎಂದರು.

ಮೇಕೆದಾಟು ಯೋಜನೆಗೆ ಚುರುಕು :
ಮೇಕೆದಾಟು ಸಮತೋಲನಾ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ಪರಿಹಾರಕ ಅರಣ್ಯ ವೃದ್ಧಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಹಾಗೂ ಯೋಜನಾ ಕಾಮಗಾರಿಗಳನ್ನು ಮತ್ತು ಭೂಸ್ವಾೀಧಿನ ಪ್ರಕ್ರಿಯೆಗಳನ್ನು ಚುರುಕುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಾಡಿನ ಸಮಸ್ತ ಜನತೆಗೆ 75 ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ ರಾಜ್ಯಪಾಲರು, ಈ ಐತಿಹಾಸಿಕ ದಿನದಂದು ಭಾರತ ಸಂವಿಧಾನವು ಜಾರಿಗೆ ಬಂದಿದ್ದು, ಸಂವಿಧಾನವು ದೇಶದ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆಯ ಅವಕಾಶವನ್ನು ಕಲ್ಪಿಸಿದೆ. ದೇಶದ ಸಮಗ್ರತೆ, ಏಕತೆಯನ್ನು ಕಾಪಾಡುವುದರ ಜೊತೆಗೆ ಸ್ವಾಭಿಮಾನದ ಜೀವನ ಒದಗಿಸುವ ಧ್ಯೇಯವನ್ನು ಹೊಂದಿದೆ. ಆ ಮೂಲಕ ನಾಗರಿಕರು ತಮ್ಮ ಏಳಿಗೆಯೊಂದಿಗೆ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಕಲ್ಪಿಸಿದೆ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಸರ್ಕಾರ ಶ್ರಮಿಸುತ್ತಿದೆ ಎಂದರು.

RELATED ARTICLES

Latest News