ಬೆಂಗಳೂರು,ಜ.26- ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಬಿಟ್ಟು ಹೋಗಿದ್ದು ಒಳ್ಳೆಯದಾಯಿತು. ಅವರನ್ನು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಒಪ್ಪಿಕೊಂಡಿರಲಿಲ್ಲ. ಪಕ್ಷ ಸಂಘಟನೆಯ ಸಂದರ್ಭದಲ್ಲಿ ಮುಜುಗರವಾಗುತ್ತಿತ್ತು ಎಂದು ಸ್ಥಳೀಯ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಅವಮಾನವಾಗಿದೆ ಎಂದು ದೊಡ್ಡದೊಡ್ಡ ಆರೋಪಗಳನ್ನು ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ತಾಗಿ ಬಂದಿದ್ದರು. ಸ್ಥಳೀಯ ಕಾರ್ಯಕರ್ತರನ್ನು ತ್ಯಾಗ ಮಾಡಿ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದ್ದರೂ ಜಗದೀಶ್ ಶೆಟ್ಟರ್‍ರವರ ಹಿರಿತನವನ್ನು ಗಮನಿಸಿ ಟಿಕೆಟ್ ನೀಡಿದ್ದೆವು. ಚುನಾವಣೆಯಲ್ಲಿ ಶೆಟ್ಟರ್ 35 ಸಾವಿರ ಅಂತರಗಳಿಂದ ಸೋಲು ಕಂಡರು. ಆದರೂ ತಕ್ಷಣವೇ ಅವರನ್ನು ವಿಧಾನಪರಿಷತ್‍ಗೆ 5 ವರ್ಷಗಳ ಅವಧಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದರು.
ಕಳೆದ 2-3 ತಿಂಗಳಿನಿಂದಲೂ ಬಿಜೆಪಿಯವರು ಶೆಟ್ಟರ್‍ರನ್ನು ಸಂಪರ್ಕಿಸುತ್ತಿದ್ದರು. ಬಿಜೆಪಿಯಿಂದ ಕಾಂಗ್ರೆಸ್‍ಗೆ ಹಲವು ನಾಯಕರನ್ನು ಶೆಟ್ಟರ್ ಕರೆತಂದಿದ್ದರು. ಮತ್ತಷ್ಟು ಜನರ ಪಟ್ಟಿ ಕೊಟ್ಟಿದ್ದರು. ಈಗ ಏಕಾಏಕಿ ಕಾಂಗ್ರೆಸ್ ತೊರೆದು ಹೋಗಿದ್ದಾರೆ. ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಒಂದು ದಿನಕ್ಕೆ ಮುಗಿದು ಹೋದ ವಿಷಯ. ಸೂರ್ಯ ಹುಟ್ಟಿ ಮುಳುಗಿದಂತೆ ಮರೆತುಬಿಡಬೇಕು ಎಂದರು.
ಕಾಂಗ್ರೆಸ್ ಸಮುದ್ರವಿದ್ದಂತೆ ಯಾರೋ ಒಬ್ಬರು ಬಂದು ಹೋಗುವುದರಿಂದ ಏನೂ ನಷ್ಟವಾಗುವುದಿಲ್ಲ. ಪಕ್ಷ ತನ್ನ ಸಾಮಥ್ರ್ಯದಲ್ಲೇ ಮುಂದುವರೆಯಲಿದೆ. ಹುಬ್ಬಳ್ಳಿ-ಧಾರವಾಡ ಭಾಗದ ಕಾರ್ಯಕರ್ತರು ಶೆಟ್ಟರ್ ನಿರ್ಗಮನದಿಂದ ಸಂಭ್ರಮ ಪಡುತ್ತಿದ್ದಾರೆ. ಅವರಿದ್ದಾಗ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ಒಪ್ಪಿಕೊಳ್ಳುತ್ತಿರಲಿಲ್ಲ. ಮುಜುಗರವಾಗುತ್ತಿತ್ತು ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಖಾಲಿಯಾದ ವಿಧಾನಪರಿಷತ್ ಸ್ಥಾನವನ್ನು ಪಕ್ಷದ ನಿಷ್ಠಾವಂತರಿಗೆ ನೀಡಿ ಸಂಘಟನೆಯನ್ನು ಮುಂದುವರೆಸುತ್ತೇವೆ. ಕಾಂಗ್ರೆಸ್ ಸೇರಿದ ಬಳಿಕ ಶೆಟ್ಟರ್‍ರವರು ಬಿಜೆಪಿ ವಿರುದ್ಧ ಮಾಡಿದ ಟೀಕೆಗಳಿಗೆ ಅವರಾಗಿಯೇ ಸ್ಪಷ್ಟನೆ ನೀಡಬೇಕು ಎಂದರು.
BJP, RSSನಿಂದ ಸಂವಿಧಾನ ನಾಶಕ್ಕೆ ಯತ್ನ : ಮಲ್ಲಿಕಾರ್ಜುನ ಖರ್ಗೆ
ಪಕ್ಷಕ್ಕೆ ಹೊಸಬರನ್ನು ಸೇರಿಸಿಕೊಳ್ಳುವಾಗ ತತ್ವ ಸಿದ್ಧಾಂತಗಳನ್ನು ಪರಿಶೀಲಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. ಬಿಜೆಪಿಯವರನ್ನು ಅಕಾರದಿಂದ ದೂರ ಇಡಬೇಕು ಎಂದು ಜೆಡಿಎಸ್‍ನ ಕುಮಾರಸ್ವಾಮಿಯವರನ್ನು ನಾವು ಮುಖ್ಯಮಂತ್ರಿ ಮಾಡಿದ್ದೆವು. ಬಿಜೆಪಿಯವರು ಕುಮಾರಸ್ವಾಮಿಯವರನ್ನು ಅಧಿಕಾರದಿಂದ ತೆಗೆದಿದ್ದರು. ಈಗ ಅದೇ ಕುಮಾರಸ್ವಾಮಿ ಬಿಜೆಪಿಯವರನ್ನು ಅಪ್ಪಿಕೊಂಡಿದ್ದಾರೆ. ಬಿಜೆಪಿಯ ವಕ್ತಾರರಂತೆ ನಡೆದುಕೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನದ ಸಂದರ್ಭದಲ್ಲಿ ಕುಮಾರಸ್ವಾಮಿ ಮಾಡಿದ ಟೀಕೆಗಳಿಗೆ ಯಾವ ರೀತಿಯ ಸಮರ್ಥನೆ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಮುಂದಿನ ಲೋಕಸಭಾ ಚುನಾವಣೆಯನ್ನು ಇಂಡಿಯಾ ರಾಜಕೀಯ ಮೈತ್ರಿಕೂಟದ ಜೊತೆ ಕಾಂಗ್ರೆಸ್ ಒಗ್ಗಟ್ಟಿನಿಂದ ಎದುರಿಸುತ್ತದೆ. ಸ್ಥಾನಗಳ ಹಂಚಿಕೆ ಬಗ್ಗೆ ತೆರವಾದ ಕೆಲವರ ಹೇಳಿಕೆಗಳನ್ನು ಗಮನಿಸಿದ್ದೇವೆ. ಆದರೆ ಅವು ಇನ್ನೂ ಚರ್ಚೆಯ ಹಂತದಲ್ಲಿವೆ ಎಂದರು.
ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಯನ್ನು ಹೈಕಮಾಂಡ್ ಕಳುಹಿಸಿದರೆ ಅದನ್ನು ಒಪ್ಪಿಕೊಳ್ಳಲು ನಾವು ಗುಲಾಮರಲ್ಲ ಎಂದು ಹೇಳಿಕೆ ನೀಡುವ ಮೂಲಕ ಪಕ್ಷದ ವರಿಷ್ಠರ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಕುರಿತು ಮುಖ್ಯಮಂತ್ರಿಯವರು ನಿರ್ಧಾರ ತೆಗೆದುಕೊಳ್ಳುತ್ತಾರೆ.
ನಮ್ಮವರ ಕುತಂತ್ರ-ಪಿತೂರಿಯಿಂದಲೇ ಬ್ರಿಟಿಷರು 400 ವರ್ಷ ಭಾರತವನ್ನಾಳಿದರು : ಸಿದ್ದರಾಮಯ್ಯ
ರಾಜಣ್ಣ ಹೇಳಿಕೆ ಹೈಕಮಾಂಡ್‍ನ ಗಮನದಲ್ಲಿದೆ. ಶಾಸಕಾಂಗ ಪಕ್ಷದ ನಾಯಕರಾಗಿರುವ ಮುಖ್ಯಮಂತ್ರಿಯವರು ಈ ಬಗ್ಗೆ ಗಮನಿಸಬೇಕಿತ್ತು. ತಾವು ಅವರೊಂದಿಗೆ ಚರ್ಚೆ ನಡೆಸುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು. ನಿಗಮ ಮಂಡಳಿಗಳಿಗೆ ನೇಮಕಾತಿಯಾಗಿ ಇಂದಿನಿಂದಲೇ ಸರ್ಕಾರದ ಅಸೂಚನೆಗಳು ಪ್ರಕಟಗೊಳ್ಳಲಿವೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.