ನಟ ವಿಜಯ್ ರಾಘವೇಂದ್ರ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಚಿತ್ರ ಕೇಸ್ ಆಫ್ ಕೊಂಡಾಣ. ಈ ವಾರ ತೆರೆ ಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಎ ಎಸ್ ಐ ಯಾಗಿ ಹೊಸ ಸ್ಟೇಷನ್ನಿಗೆ ಬಂದ ಮೊದಲ ದಿನವೇ ರೌಡಿ ಗುಂಪಿನೊಂದಿಗೆ ಜಗಳ. ಹಿರಿಯ ಅಧಿಕಾರಿಗಳೆಲ್ಲರೂ ಸಮಾಧಾನದಿಂದ ಪುಡಿ ರೌಡಿಗಳನ್ನು ಡೀಲ್ ಮಾಡುವ ವಿಧಾನ ಬಿಸಿರಕ್ತದ ನಾಯಕನಿಗೆ ಇಷ್ಟವಾಗದೆ ಏಕಾಏಕಿ ಅವರ ಮೇಲೆ ದಾಳಿ ಮಾಡಿ ಮಾಂಜ ನೀಡುತ್ತಾನೆ. ಇದೇ ಜಿದ್ದು ಕಥೆ ಬಿಚ್ಚಿಕೊಳ್ಳಲು ಒಂದು ಮುಖ್ಯ ಕಾರಣಗಳಲ್ಲಿ ಒಂದಾಗುತ್ತದೆ .
ಇನ್ನೊಂದು ಬದಿಯಲ್ಲಿ ಎಸಿಪಿಯಾಗಿ ಜಾಕಿ ಭಾವನ ಸರಣಿ ಕೊಲೆಗಳ ಹಂತಕರನ್ನ ಹಿಡಿಯುವ ತಲೆಬಿಸಿಯಲ್ಲಿ ಮಗ್ನರಾಗಿರುತ್ತಾರೆ. ಹಾಗೆ ವಿಜಯ ರಾಘವೇಂದ್ರ ಅಂದರೆ ನಾಯಕನ ಪ್ರೇಯಸಿ ಖುಷಿ ಡಾಕ್ಟರ್. ಇವರಿಬ್ಬರ ನಡುವೆ ಪ್ರೀತಿಯ ಸಲ್ಲಾಪ. ಬೇರೆ ಧರ್ಮಗಳ ಕಾರಣ ಹುಡುಗಿಯ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಇರುವುದಿಲ್ಲ. ಆದರೂ ಪ್ರೀತಿ, ಸರಾಗವಾಗಿ ಸಾಗುತ್ತಿರುತ್ತದೆ. ಇದರ ಮಧ್ಯೆ ಸದಾ ಬಡತನದಲ್ಲಿ ಬೇಯುತ್ತಿರುವ ಪಾನಿ ಪುರಿ ಮಾರುವವನ ಮಗನ ಅನಾರೋಗ್ಯದ ತೀವ್ರತೆ, ಎಸಿಪಿಯಾದರು ತನ್ನ ಹಳೆಯ ಮನೆಯನ್ನ ಮಾರುವ ಪರಿಸ್ಥಿತಿ. ಈ ಎಲ್ಲ ವಿವಿಧ ಮಜಲುಗಳು ಕೇಸ್ ಆಫ್ ಕೊಂಡಾಣ ಚಿತ್ರವನ್ನು ಆವರಿಸಿವೆ. ಇಂಟರೆಸ್ಟಿಂಗ್ ಎನ್ನುವಂತೆ ಪ್ರೇಕ್ಷಕರನ್ನು ಸೆಳೆದು ಕೂರಿಸುತ್ತವೆ.
ಯತ್ನಾಳ್ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಮುಚ್ಚಲು ನೋಟಿಸ್
ಕೊಂಡಾಣ ಅನ್ನುವ ಕಾಲ್ಪನಿಕ ಸ್ಥಳಕ್ಕೆ ಕಥೆಯನ್ನು ತಂದು ನಿಲ್ಲಿಸಿ ಶೀರ್ಷಿಕೆಗೂ ಕಥೆಗೂ ಇರುವ ಸಂಬಂಧಕ್ಕೆ ಉತ್ತರ ಕೊಡಲಾಗಿದೆ. ಇದೊಂದು ಕ್ರೈಂ,ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು ನಟ ವಿಜಯ್ ರಾಘವೇಂದ್ರ ಮತ್ತು ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಈ ಹಿಂದೆ ಸೀತಾರಾಮ್ ಬಿನೋಯ್ ಕೂಡ ಇದೇ ರೀತಿಯ ಜಾನರ್ ನ ಚಿತ್ರ ಆಗಿತ್ತು. ಆದರೆ ಕೊಂಡಾಣದಲ್ಲಿ ವಿಜಯ ರವರ ಅಭಿನಯವನ್ನ ಬೇರೊಂದು ಆಯಾಮದಲ್ಲಿ ಕಾಣಬಹುದು.
ಪೊಲೀಸ್ ಅಧಿಕಾರಿ ವರ್ಗಾವಣೆಗೆ ಕೊಡಬೇಕಾದ ಲಂಚ, ಬಡತನದಲ್ಲಿರುವವರಿಗೆ ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ಪ್ರಾಣವನ್ನು ಕೈ ಚೆಲ್ಲುವುದು ಬಿಟ್ಟರೆ ಬೇರೇನು ಮಾಡಲಾಗದು, ಒಂದು ತಪ್ಪನ್ನು ಮುಚ್ಚಿಡಲು ಹೋಗಿ ಮತ್ತೊಂದು… ಇನ್ನೊಂದು ಹೇಗೆ ನಡೆದು ಹೋಗುತ್ತದೆ ಎಂಬ ಸೂಕ್ಷ್ಮ ವಿಷಯಗಳನ್ನು ನಿರ್ದೇಶಕರು ಸ್ಕ್ರೀನ್ ಪ್ಲೇಯಲ್ಲಿ ತರಲು ಪ್ರಯತ್ನಿಸಿದ್ದಾರೆ. ರಂಗಾಯಣ ರಘು, ಬಾಲರಾಜ ವಾಡಿ, ಪೆಟ್ರೋಲ್ ಪ್ರಸನ್ನ ಇವರೆಲ್ಲರೂ ಕೇಸ್ ಆಫ್ ಕೊಂಡಾಣಕ್ಕೆ ಕಾರಣರಾಗಿದ್ದಾರೆ.