Friday, November 22, 2024
Homeರಾಜ್ಯಹಾಲ್‍ಮಾರ್ಕ್ ಪರಿಶೀಲನೆ ನೆಪದಲ್ಲಿ ಡಕಾಯಿತಿ : 85 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಹಾಲ್‍ಮಾರ್ಕ್ ಪರಿಶೀಲನೆ ನೆಪದಲ್ಲಿ ಡಕಾಯಿತಿ : 85 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು,ಜ.29- ನಾವು ಚಿನ್ನಾಭರಣ ಗಳ ಆಲ್‍ಮಾರ್ಕ್ ಹಾಗೂ ಜಿಎಸ್‍ಟಿ ಪರಿಶೀಲನಾ ಅಧಿಕಾರಿಗಳೆಂದು ಜ್ಯುವೆಲರಿ ಅಂಗಡಿಗೆ ಹೋಗಿ ಕೆಲಸಗಾರರನ್ನು ಹೆದರಿಸಿ 85 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಡಕಾಯಿತಿ ಮಾಡಿಕೊಂಡು ಪರಾರಿಯಾಗಿದ್ದ ಅಂತರರಾಜ್ಯ ನಾಲ್ವರು ನಕಲಿ ಅಧಿಕಾರಿಗಳನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೃತ್ಯ ನಡೆದ ಎರಡು ಗಂಟೆಯ ಅವಧಿಯೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಅಂತಾರಾಜ್ಯ ಡಕಾಯಿತರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಕೆ.ಆರ್.ಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳದ ಸಂಬತ್‍ಕುಮಾರ್ ಅಲಿಯಾಸ್ ಸಂಪತ್(55), ಜೋಶಿ(54) ಮತ್ತು ಉತ್ತರಪ್ರದೇಶದ ಸಂದೀಪ್ ಶರ್ಮ(48) ಮತ್ತು ಅವಿನಾಶ್‍ಕುಮಾರ್(27) ಬಂಧಿತ ಆರೋಪಿಗಳು.

ಬಂಧಿತರಿಂದ 85 ಲಕ್ಷ ರೂ. ಬೆಲೆ ಬಾಳುವ 1 ಕೆಜಿ 248 ಗ್ರಾಂ ತೂಕದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಇನ್ನೋವಾ ಕ್ರಿಸ್ಟಾ ವಾಹನ ಹಾಗೂ ಜ್ಯುವೆಲರಿ ಅಂಗಡಿಯಿಂದ ತೆಗೆದುಕೊಂಡು ಹೋಗಿದ್ದ ಡಿವಿಆರ್‍ನ್ನು ವಶಪಡಿಸಿಕೊಳ್ಳುವಲ್ಲಿ ಕೆ.ಆರ್.ಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನನಗೆ ಸಿಎಂ ಆಗೋ ಆಸೆಯಿದೆ, ಆದರೆ ಸಿಗಬೇಕಲ್ಲ : ಎನ್.ಎ.ಹ್ಯಾರಿಸ್

ಜ.27ರಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಬಟ್ಟರಹಳ್ಳಿ ಆರ್‍ಎಂಎಸ್ ಕಾಲೋನಿಯಲ್ಲಿರುವ ಮಹಾಲಕ್ಷ್ಮಿ ಜ್ಯುವೆಲರಿ ಅಂಗಡಿಗೆ ಈ ನಾಲ್ವರು ಹೋಗಿದ್ದಾರೆ. ತಾವುಗಳು ಚಿನ್ನಾಭರಣಗಳ ಆಲ್‍ಮಾರ್ಕ್ ಹಾಗೂ ಜಿಎಸ್‍ಟಿ ಪರಿಶೀಲನಾ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ನಾವು ನಗರದ ಹಲವು ಬಂಗಾರದ ಅಂಗಡಿಗಳ ಮೇಲೆ ದಾಳಿ ಮಾಡಿದ್ದೇವೆ. ಅದರಲ್ಲಿ ನಿಮ್ಮದೂ ಒಂದು. ನೀವು ಆಲ್‍ಮಾರ್ಕ್ ಇಲ್ಲದೆ ಅಕ್ರಮವಾಗಿ ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂಬ ಮಾಹಿತಿ ಇದೆ. ಹಾಗಾಗಿ ನಾವು ಈ ದಾಳಿ ಮಾಡಿದ್ದೇವೆ ಎಂದು ಅಂಗಡಿಯಲ್ಲಿದ್ದ ಕೆಲಸಗಾರರನ್ನು ಹೆದರಿಸಿ 85 ಲಕ್ಷ ಬೆಲೆ ಬಾಳುವ ಆಭರಣಗಳನ್ನು ದರೋಡೆ ಮಾಡಿದ್ದಾರೆ.

ನಂತರ ಗುರುತು ಪತ್ತೆಯಾಗಬಾರದೆಂದು ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಜ್ಯುವೆಲರಿ ಅಂಗಡಿಯಲ್ಲಿ ಅಳವಡಿಸಿದ್ದ ಡಿವಿಆರ್ ಸಿಸ್ಟಮ್‍ನ್ನು ತೆಗೆದುಕೊಂಡು ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದ ಇನೋವಾ ಕ್ರಿಸ್ಟಾ ಕಾರಿನಲ್ಲಿ ಪರಾರಿಯಾಗುತ್ತಿದ್ದರು.

ಆ ವೇಳೆ ಅಂಗಡಿ ಕೆಲಸಗಾರರು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ನಕಲಿ ಅಕಾರಿಗಳು ಗಮನಿಸಿದ್ದಾರೆ.
ಅಂಗಡಿ ಕೆಲಸಗಾರ ಹೇಮರಾಜ್ ಎಂಬುವರ ಮೇಲೆಯೇ ಕಾರು ಹತ್ತಿಸಿ ಕೊಲೆ ಮಾಡಲು ಪ್ರಯತ್ನಿಸಿ ತಪ್ಪಿಸಿಕೊಳ್ಳುವ ಭರದಲ್ಲಿ ಟಿಸಿ ಪಾಳ್ಯದ ಬಳಿ ಬೈಕ್‍ಗಳಿಗೆ ಗುದ್ದಿದ್ದಾರೆ.

ಈ ಬಗ್ಗೆ ಜ್ಯುವೆಲರಿ ಮಾಲೀಕರಿಗೂ ಅನುಮಾನ ಬಂದು ಕೆ.ಆರ್.ಪುರಂ ಪೊಲೀಸರಿಗೆ ಐದು ಮಂದಿ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪೊಲೀಸರಿಗೆ ಸರಣಿ ಅಪಘಾತದ ಮಾಹಿತಿ ದೊರೆತಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಟಿಸಿ ಪಾಳ್ಯದ ಕಡೆಗೆ ಹೋಗಿದ್ದಾರೆ.

ಪೊಲೀಸರನ್ನು ಗಮನಿಸಿದ ನಕಲಿ ಅಕಾರಿಗಳು ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಅವರನ್ನು ಬೆನ್ನತ್ತಿ ಹಿಂಬಾಲಿಸಿಕೊಂಡು ಹೋಗಿ ಕೃತ್ಯ ನಡೆದ 2 ಗಂಟೆಯೊಳಗೆ ನಕಲಿ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ. ಡಕಾಯಿತರ ಪೈಕಿ ಮತ್ತೊಬ್ಬ ಆರೋಪಿ ರವಿ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.

ವೈಟ್‍ಫೀಲ್ಡ್ ವಿಭಾಗದ ಉಪಪೊಲೀಸ್ ಆಯುಕ್ತರಾದ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ಪ್ರಿಯದರ್ಶಿನಿ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

RELATED ARTICLES

Latest News