Homeರಾಜ್ಯಕಾಡು ಪ್ರಾಣಿ ಬೇಟೆಗೆ ಬಳಸುವ ನಾಡ ಬಾಂಬ್ ಸ್ಫೋಟಗೊಂಡು ಗಾಯಗೊಂಡ ವಕೀಲ

ಕಾಡು ಪ್ರಾಣಿ ಬೇಟೆಗೆ ಬಳಸುವ ನಾಡ ಬಾಂಬ್ ಸ್ಫೋಟಗೊಂಡು ಗಾಯಗೊಂಡ ವಕೀಲ

lawyer was injured when a land bomb used for hunting wild animals exploded

ಕನಕಪುರ, ಜೂ.26- ಕಾಡು ಪ್ರಾಣಿಗಳ ಬೇಟೆಗೆ ಬಳಸುವ ನಾಡ ಬಾಂಬು ಸ್ಫೋಟಗೊಂಡು ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುಂಡಘಟ್ಟ ಗ್ರಾಮದಲ್ಲಿ ನಡೆದಿದೆ.
ಎನ್‌ ಸಿ ಮೋಹನ್‌ (53) ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿದ್ದು, ಇವರು ತಾಲ್ಲೂಕಿನ ಕಸಬಾ ಹೋಬಳಿ ಸುಂಡಘಟ್ಟ ಗ್ರಾಮದ ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು.

ಇಂದು ಬೆಳಿಗ್ಗೆ 6 ಗಂಟೆ ಸಮಯದಲ್ಲಿ, ಬಾಗಿಲು ತೆಗೆದು ಹೊರ ಬಂದಾಗ ಕಬ್ಬಿಣದ ಬಾಗಿಲಿಗೆ ಸಿಲುಕಿ ನಾಡ ಬಾಂಬ್‌ ಸ್ಪೋಟಗೊಂಡ ಪರಿಣಾಮ, ದೇಹದ ಕುಂಡಿ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅವರ ಸ್ನೇಹಿತ ಮರಸಪ್ಪ ರವಿ ಅವರಿಗೆ ವಿಷಯ ತಿಳಿಸಿದ್ದಾರೆ.

ಕೂಡಲೇ ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಪ್ರಥಮ ಚಿಕಿತ್ಸೆಯ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ವಿಷಯ ತಿಳಿದ ಕೂಡಲೇ, ಗ್ರಾಮಾಂತರ ಆರಕ್ಷಕ ನಿರೀಕ್ಷಕ ವಿಕಾಸ್‌‍ ಎಸ್‌‍ ಗೌಡ, ಕೋಡಿಹಳ್ಳಿ ಪೊಲೀಸ್‌‍ ಠಾಣೆ ಆರಕ್ಷಕ ಉಪ ನಿರೀಕ್ಷಕ ಪ್ರದೀಪ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಡಬಾಂಬ್‌ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಹಲವು ವರ್ಷಗಳಿಂದ ಕೆಲವರು ಗೌಪ್ಯವಾಗಿ ನಾಡ ಬಾಂಬ್‌ ತಯಾರಿಸಿ ಬೇರೆ ಕಡೆ ಸರಬರಾಜು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ನಾಡಬಾಂಬ್‌ (ಅಥವಾ ಕಚ್ಚಾ ಬಾಂಬ್‌‍) ಸ್ಫೋಟಗಳು ಹೆಚ್ಚಾಗಿ ಕಾಡುಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಲು ಬಳಸಲಾಗುತ್ತದೆ.

ದುಷ್ಕರ್ಮಿಗಳು ಕಾಡುಹಂದಿ, ಜಿಂಕೆ, ಮತ್ತಿತರ ಪ್ರಾಣಿಗಳನ್ನು ಬೇಟೆಯಾಡಲು ಅಕ್ರಮವಾಗಿ ಇಡಲಾಗುತ್ತದೆ. ಕೆಲವೊಮೆ ರಾಜಕೀಯ, ದ್ವೇಷ ಅಥವಾ ಕಳ್ಳತನಕ್ಕಾಗಿ ಇವುಗಳನ್ನು ತಯಾರಿಸಿ ಸಂಗ್ರಹಿಸಲಾಗುತ್ತದೆ. ಇವು ತೀರಾ ಅಸುರಕ್ಷಿತವಾಗಿದ್ದು, ಸಣ್ಣ ಕಂಪನ ಅಥವಾ ತಾಪಮಾನದ ವ್ಯತ್ಯಾಸಕ್ಕೆ ಸುಲಭವಾಗಿ ಸ್ಪೋಟಗೊಳ್ಳುತ್ತವೆ.

ಮಾನವ ಜೀವಕ್ಕೆ ಹಾನಿಯಾಗುವುದರ ಜೊತೆಗೆ, ಮೂಕ ಪ್ರಾಣಿಗಳಿಗೂ ತೀವ್ರ ಗಾಯಗಳಾಗಿ ಸಾವನ್ನಪ್ಪಿರುವ ಘಟನೆಗಳು ರಾಜ್ಯದಲ್ಲಿ ಸಾಕಷ್ಟು ನಡೆದಿವೆ, ಇಂತಹ ಸ್ಫೋಟಕಗಳನ್ನು ತಯಾರಿಸುವುದು, ಸಂಗ್ರಹಿಸುವುದು ಅಥವಾ ಇಡುವುದು ಭಾರತೀಯ ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಘಟನೆಗಳ ಬಗ್ಗೆ ತನಿಖೆ ನಡೆಸಬೇಕು, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

RELATED ARTICLES

Latest News