ನವದೆಹಲಿ,ಫೆ.2-ಕೇಂದ್ರದ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದರಿಂದ ಪ್ರತ್ಯೇಕ ರಾಷ್ಟ್ರ ಬೇಡಿಕೆಗೆ ಹಕ್ಕು ಮಂಡಿಸಬೇಕಾಗುತ್ತದೆ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಸಂಸತ್‍ನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿದೆ. ಡಿ.ಕೆ.ಸುರೇಶ್ ವಿರುದ್ದ ಕಾಂಗ್ರೆಸ್ ಪಕ್ಷದ ನಾಯಕರು ಶಿಸ್ತು ಕ್ರಮ ಜರುಗಿಸಬೇಕೆಂದು ಸಂಸತ್‍ನ ಉಭಯ ಸದನಗಳಾದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಬಿಜೆಪಿ ಒತ್ತಾಯ ಮಾಡಿತು.
ಇದರಿಂದ ಎರಡೂ ಸದನಗಳಲ್ಲಿ ಕೆಲಕಾಲ ಗದ್ದಲ, ಕೋಲಾಹಲ, ಮಾತಿನ ಚಕಮಕಿ ನಡೆಯಿತು. ಮತ್ತೊಂದು ಕಡೆ ಡಿ.ಕೆ.ಸುರೇಶ್ ಹೇಳಿಕೆಯನ್ನು ಸ್ವತಃ ಎಐಸಿಸಿ ಅಧ್ಯಕ್ಷರಾದ ಎಂ.ಮಲ್ಲಿಕಾರ್ಜುನ ಖರ್ಗೆ ಅವರೇ ತೀವ್ರವಾಗಿ ವಿರೋಸಿರುವುದರಿಂದ ಕೈ ನಾಯಕರು ಮುಜುಗರಕ್ಕೆ ಸಿಲುಕುವಂತಾಗಿದೆ.
ಬೆಳಗ್ಗೆ ಸಂಸತ್‍ನ ಕಲಾಪ ಆರಂಭವಾಗುತ್ತಿದಂತೆ ರಾಜ್ಯಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ವಿಷಯ ಪ್ರಸ್ತಾಪಿಸಿ ಪ್ರತ್ಯೇಕ ರಾಷ್ಟ್ರ ಬೇಡಿಕೆ ಇಟ್ಟಿರುವ ನಿಮ್ಮ ಸಂಸದರ ಬಗ್ಗೆ ಕ್ರಮ ಕೈಗೊಳ್ಳುತ್ತೀರ ಎಂದು ರಾಜಸಭೆಯ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿದರು.
ಭಾರತವನ್ನು ಅನೇಕರು ತ್ಯಾಗ, ಬಲಿದಾನ ಮೂಲಕ ಕಟ್ಟಿದ್ದಾರೆ. ಎಲ್ಲಾ ರಾಜ್ಯಗಳಿಗೂ ಅನುದಾನ ಕೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದರೆ ಅದನ್ನೇ ನೆಪವಾಗಿಟ್ಟುಕೊಂಡು ದೇಶ ವಿಭಜನೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಡಿ.ಕೆ.ಸುರೇಶ್ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಬೆಂಬಲವಿದೆಯೇ? ನೀವು ದೇಶ ವಿಭಜನೆ ಹೇಳಿಕೆಯನ್ನು ಬೆಂಬಲಿಸುತ್ತೀರಾ? ಇಲ್ಲವಾದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದರ ಜೊತೆಗೆ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಪಿಯೂಷ್ ಗೋಯಲ್ ಹೇಳಿಕೆಗೆ ಕಾಂಗ್ರೆಸ್‍ನ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ,ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಒಗ್ಗಟ್ಟಾಗಿದ್ದೇವೆ. ಭಾರತಕ್ಕಾಗಿ ಕಾಂಗ್ರೆಸ್ ನಾಯಕಿ ಇಂದಿರಾ ಗಾಂ ಮತ್ತು ರಾಜೀವ್ ಗಾಂ ತ್ಯಾಗ ಬಲಿದಾನ ಮಾಡಿದ್ದಾರೆ. ಆದಾಗ್ಯೂ, ಲೋಕಸಭಾ ಸಂಸದ (ಡಿ.ಕೆ.ಸುರೇಶ್) ಹಾಗೆ ಹೇಳಿಲ್ಲ ಎಂದು ಹೇಳಿದ್ದು, ಅದನ್ನು ಚರ್ಚಿಸಬಾರದು ಎಂದು ಮನವಿ ಮಾಡಿದರು.
ಅಖಂಡ ಭಾರತವೇ ನಮ್ಮ ಪರಿಕಲ್ಪನೆ : ಗೃಹಸಚಿವ ಪರಮೇಶ್ವರ್
ದೇಶ ಒಡೆಯುವ ಬಗ್ಗೆ ಯಾರೇ ಮಾತನಾಡಿದರೂ ಸಹಿಸಲ್ಲ. ಯಾವುದೇ ಪಕ್ಷದವರಾಗಿರಲಿ ನಾವು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಕೋಲಾಹಲ:
ಇನ್ನೊಂದೆಡೆ ಸಂಸತ್‍ನ ಕೆಳಮನೆಯಾದ ಲೋಕಸಭೆಯಲ್ಲೂ ಡಿ.ಕೆ.ಸುರೇಶ್ ಹೇಳಿಕೆ ಕೋಲಾಹಲ ಸೃಷ್ಟಿಸಿತು. ಕಲಾಪ ಆರಂಭವಾಗುತ್ತಿದ್ದಂತೆ ಡಿ.ಕೆ.ಸುರೇಶ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ ಸೇರಿದಂತೆ ಮತ್ತಿತರರು ತಕ್ಷಣವೇ ದೇಶದ ಜನತೆಯ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ವಿಷಯ ಪ್ರಸ್ತಾಪಿಸಿದ ಸಚಿವ ಪ್ರಲ್ಹಾದ್ ಜೋಶಿ, ದೇಶವಿಭಜನೆ ಬಗ್ಗೆ ಮಾತನಾಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಅನುದಾನ ನೀಡುತ್ತಿಲ್ಲ ಎಂಬ ಸುಳ್ಳು ಆರೋಪ ಮಾಡಿ ವಿಭಜನೆ ಬಗ್ಗೆ ಮಾತನಾಡಿದ್ದಾರೆ. ದೇಶ ವಿಭಜನೆ ಮಾಡುವ ಕಾಂಗ್ರೆಸ್ನ ಪ್ರಯತ್ನ ಇನ್ನೂ ಮುಂದುವರೆದಿದೆ. ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಹಾಗೂ ಕ್ಷಮೆ ಕೇಳಬೇಕು. ಇದು ಸಂವಿಧಾನಕ್ಕೆ ಮಾಡಿದ ಘೋರ ಅಪಮಾನ. ಅಷ್ಟೆ ಅಲ್ಲದೆ ತನಿಖೆಯನ್ನು ನೈತಿಕ ಸಮಿತಿಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡಿ.ಕೆ.ಸುರೇಶ್ ಹೇಳಿಕೆಯನ್ನು ಖಂಡಿಸಿ, ದೇಶದ ಏಕತೆ, ಸಾರ್ವಭೌಮತ್ವದ ಬಗ್ಗೆ ಯಾರೂ ಮಾತನಾಡಬಾರದು. ಸಂಸದ ಡಿ.ಕೆ.ಸುರೇಶ್ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ತರಾಟೆಗೆ ತೆಗೆದುಕೊಂಡರು.
ಕಲ್ಲು ಹೊಡೆದುಕೊಂಡು ಇದ್ದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತದೆ. ಇಲ್ಲಿ ಬಡ ಜನರ ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂಥವರನ್ನು ತೆಗೆದುಕೊಂಡು ಹೋಗಿ ದೇಶ ಕಟ್ಟು ಎಂದು ಕಳುಹಿಸಿದ್ರೆ ಕಟ್ತಾರಾ? ಅವರ ಸಾಮ್ರಾಜ್ಯ ಕಟ್ಟುಕೊಳ್ಳುತ್ತಾರೆರೆ ಅಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಲೇವಡಿ ಮಾಡಿದ್ದಾರೆ.
ಏನಿದು ವಿವಾದ:
ಕೇಂದ್ರ ಬಜೆಟ್ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ಡಿ.ಕೆ.ಸುರೇಶ್, ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಹೊಸತೇನನ್ನೂ ಕೊಟ್ಟಿಲ್ಲ. ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆಯೇ ಅನ್ಯಾಯ ಆಗುತ್ತಿದ್ದರೆ ನಾವು ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ. ದಕ್ಷಿಣ ಭಾರತದವರು ಧ್ವನಿ ಎತ್ತಬೇಕಾಗುತ್ತದೆ ಎಂದು ಹೇಳಿದ್ದರು.
ಬಜೆಟ್‍ನಲ್ಲಿ ಹೊಸತೇನು ಇಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇಂದು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಬಿಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ಪ್ರತ್ಯೇಕ ದೇಶ ಕೇಳಬೇಕಾಗುತ್ತದೆ ಎಂದಿದ್ದರು.