Friday, May 17, 2024
Homeರಾಜ್ಯಮಂಡ್ಯ ಬಂದ್ ನಡೆಸಲು ಮುಂದಾದ ಪ್ರತಿಪಕ್ಷಗಳ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಕಿಡಿ

ಮಂಡ್ಯ ಬಂದ್ ನಡೆಸಲು ಮುಂದಾದ ಪ್ರತಿಪಕ್ಷಗಳ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಕಿಡಿ

ಮೈಸೂರು,ಫೆ.2- ಕೆರೆಗೋಡಿನ ಧ್ವಜ ವಿವಾದವನ್ನು ಕೆಣಕುತ್ತಿರುವ ಜೆಡಿಎಸ್-ಬಿಜೆಪಿ ನಾಯಕರು ರಾಷ್ಟ್ರಧ್ವಜ ಹಾಗೂ ಸಂವಿಧಾನದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೂ ಆಡಳಿತದ ಅನುಭವ, ಕಾನೂನಿನ ಅರಿವಿದೆ. ಅದರ ಹೊರತಾಗಿಯೂ ಕೆರಗೋಡಿನಲ್ಲಿ ರಾಷ್ಟ್ರಧ್ವಜ ತೆಗೆಯಬೇಕು ಎಂದು ಬಂದ್‍ಗೆ ಕರೆ ನೀಡುತ್ತಿದ್ದಾರೆ. ಅವರ ಅಜೆಂಡಾ ಏನು ಎಂದು ಪ್ರಶ್ನಿಸಿದರು.

ಇವರ ಪ್ರತಿಭಟನೆ ಮೂಲ ಉದ್ದೇಶಗಳೇನು? ಕಾವೇರಿ ನದಿಯ ನೀರಿನ ಹಂಚಿಕೆ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧವೇ? ಬರ ಪರಿಸ್ಥಿತಿಗೆ ಕೇಂದ್ರ ಅನುದಾನ ನೀಡಿಲ್ಲ ಎಂಬುದಕ್ಕಾಗಿ ಬಂದ್ ಮಾಡುತ್ತಿದ್ದಾರೆಯೇ? ಅಥವಾ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಕಾರಣಕ್ಕೆ ಪ್ರತಿಭಟನೆಯೇ? ಯಾವ ಪುರುಷಾರ್ಥಕ್ಕೆ ಹೋರಾಟ ಮಾಡುತ್ತಿದ್ದಾರೆ. ಇವರಿಂದಾಗಿ ರಾಜ್ಯಕ್ಕೆ ಯಾವ ರೀತಿಯ ಅನುಕೂಲವಾಗುತ್ತಿದೆ ಎಂದು ಪ್ರಶ್ನಿಸಿದರು.

ಎನ್‍ಡಿಆರ್‍ಎಫ್ ನಿಯಮಾವಳಿಗಳು ಜಾರಿಗೆ ಬಂದ ಬಳಿಕ ಬರ ಹಾಗೂ ನೆರೆ ಪರಿಸ್ಥಿತಿಯ ನಷ್ಟ ಪರಿಹಾರಕ್ಕೆ ಒಂದು ತಿಂಗಳ ಒಳಗಾಗಿ ಹಣ ಬಿಡುಗಡೆಯಾಗುತ್ತಿತ್ತು. ಪ್ರಸ್ತುತ ರಾಜ್ಯದ 223 ತಾಲೂಕುಗಳಲ್ಲಿ ಬರವಿದೆ. ಆರ್ಥಿಕ ನೆರವು ನೀಡಿ ಎಂದು ಸೆ.22 ರಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ನಾಲ್ಕು ತಿಂಗಳು ಕಳೆದರೂ ಇಲ್ಲಿವರೆಗೂ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ 50 ಲಕ್ಷ ಹೆಕ್ಟೇರ್‍ನಲ್ಲಿ ಬೆಳೆ ನಷ್ಟವಾಗಿದೆ. 37 ಲಕ್ಷ ರೈತರಿಗೆ ರಾಜ್ಯಸರ್ಕಾರವೇ ತನ್ನ ಬೊಕ್ಕಸದಿಂದ ಮೊದಲ ಕಂತಿನ ಪರಿಹಾರ ಪಾವತಿಸಿದೆ. ಕೇಂದ್ರಸರ್ಕಾರ ಹಣವನ್ನೇ ನೀಡುತ್ತಿಲ್ಲ. ಈ ಬಗ್ಗೆ ಬಿಜೆಪಿಯವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಕಿಡಿಕಾರಿದರು.

ರಾಜ್ಯದ ಜನರ ಹಿತಾಸಕ್ತಿಗಾಗಿ ಹೋರಾಟ ಮಾಡಲಿ, ನಾವು ಅವರ ಜೊತೆ ಕೈ ಜೋಡಿಸುತ್ತೇವೆ, ಅಭಿನಂದನೆ ಸಲ್ಲಿಸುತ್ತೇವೆ. ಚುನಾವಣೆಯ ಕಾರಣಕ್ಕಾಗಿ ಹಿಂದುತ್ವವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಸಹಿಸಲಾಗುವುದಿಲ್ಲ. ಬಿಜೆಪಿಯವರಿಗಿಂತಲೂ ನಾವು ಹೆಚ್ಚಿನ ಹಿಂದೂಗಳು. ನಿರಂತರವಾಗಿ ಪೂಜೆ ಮಾಡುತ್ತೇವೆ. ಧಾರ್ಮಿಕ ನಂಬಿಕೆಗಳಿವೆ. ಜನರ ನಡುವೆ ಅಶಾಂತಿ ಸೃಷ್ಟಿಸಲು, ಮತ ಗಳಿಸಲು ಹಿಂದುತ್ವ ಬಳಸಿಕೊಳ್ಳಲು ಹೊರಟರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ತಮ್ಮದು ಅತೀ ವಿನಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ತಿರುಗಿಸಿ ಮಾತನಾಡಲು ನನಗೆ ಅವರಿಗಿಂತಲೂ ಚೆನ್ನಾಗಿ ಬರುತ್ತದೆ. ಆದರೆ ನಾವು ದೇವೇಗೌಡರ ಮೇಲಿನ ಅಪಾರ ಗೌರವದಿಂದ ಸಹನೆಯಿಂದಿದ್ದೇವೆ. ನಾನೇನು ಕುಮಾರಸ್ವಾಮಿಯವರಿಂದ ಬೆಳೆದು ಬಂದವನಲ್ಲ. ಮಾತಿನ ಮೇಲೆ ನಿಗಾ ಇರಲಿ, ಮಾಜಿ ಮುಖ್ಯಮಂತ್ರಿ ಎಂದು ಗೌರವ ಕೊಡುತ್ತೇವೆ. ಅದೂ ಬೇಡ, ನನ್ನಂತೆಯೇ ಮಾತನಾಡಲಿ ಎಂದಾದರೆ ಅದಕ್ಕೂ ನಾನು ಸಿದ್ಧ ಎಂದು ಸವಾಲು ಹಾಕಿದರು.

ರಾಷ್ಟ್ರಧ್ವಜದ ವಿರುದ್ಧ ಕುಮಾರಸ್ವಾಮಿ, ಪುಟ್ಟರಾಜು, ಆರ್.ಅಶೋಕ್ ಸೇರಿದಂತೆ ಯಾರೇ ಹೋರಾಟ ಮಾಡುವುದನ್ನು ಮುಂದುವರೆಸಿದರೆ ಜನ ಸಹಿಸುವುದಿಲ್ಲ. ಈಗಾಗಲೇ ನಿಜವಾದ ದೇಶಪ್ರೇಮಿಗಳು, ಪ್ರಗತಿಪರರು, ಜಾತ್ಯತೀತ ತತ್ವದ ಮೇಲೆ ನಂಬಿಕೆಯಿಟ್ಟವರು ತಿರುಗಿ ಬಿದ್ದಿದ್ದಾರೆ. ಇವರು ರಾಜಕೀಯಕ್ಕಾಗಿ ತಮ್ಮ ಗುಪ್ತ ಕಾರ್ಯಸೂಚಿಗಳನ್ನು ಬಳಕೆ ಮಾಡಿಕೊಂಡು ಶಾಂತಿ ಕದಡಲು ಯತ್ನಿಸಿದರೆ ಜನ ತಿರುಗಿ ಬೀಳಲಿದ್ದಾರೆ ಎಂದು ಹೇಳಿದರು.

ಮಂಡ್ಯದ ಅಭಿವೃದ್ಧಿಯಲ್ಲಿ ಕುಮಾರಸ್ವಾಮಿಯವರ ಪಾತ್ರ ಏನು ಎಂದು ಪ್ರಶ್ನಿಸಿದ ಚೆಲುವರಾಯಸ್ವಾಮಿ, 2 ವರ್ಷ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯಲ್ಲಿ ಒಂದು ಅಂಗನವಾಡಿಯನ್ನೂ ಕಟ್ಟಲಿಲ್ಲ. ಅವರ ಜೊತೆಗೆ ಅಭಿವೃದ್ಧಿ ವಿಷಯವಾಗಿ ಏನು ಚರ್ಚೆ ಮಾಡಬೇಕು ಎಂದು ಪ್ರಶ್ನಿಸಿದರು.

ಇದೇ 12 ರಿಂದ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಅಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಚರ್ಚೆಗೆ ಅವರೇ ಪ್ರತ್ಯೇಕ ಸೂಚನೆ ನೀಡಲಿ. ನಾನು ಬೆಂಬಲ ನೀಡುತ್ತೇನೆ. ಇವರು ಅಭಿವೃದ್ಧಿ ಮಾಡಿದ್ದೇ ಆಗಿದ್ದರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಏಕೆ ಸೋಲುತ್ತಿತ್ತು ಎಂದು ಪ್ರಶ್ನಿಸಿದರು.

RELATED ARTICLES

Latest News