ಬೆಳಗಾವಿ,ಡಿ.10-ಶ್ರೀಕ್ಷೇತ್ರ ಧರ್ಮಸ್ಥಳದ ಖ್ಯಾತಿಗೆ ಮಸಿ ಬಳಿಯಲು ಷಡ್ಯಂತ್ರ ರೂಪಿಸಿದ ಆರು ಮಂದಿ ಆರೋಪಿಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಬಂಧಿಸಿ ಜೈಲಿಗೆ ಅಟ್ಟಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ದಳ(ಎಸ್‌ಐಟಿ) ಇದೀಗ ನ್ಯಾಯಾಲಯಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಇದರಲ್ಲಿ ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್, ವಿಠಲ್ ಗೌಡ ಹಾಗೂ ಸುಜಾತ ಭಟ್ ಅವರುಗಳೇ ಪ್ರಕರಣದ ಸೂತ್ರಧಾರಿಗಳೆಂದು ಎಸ್‌ಐಟಿ ಹೇಳಿರುವುದರಿಂದ ಕೂಡಲೇ ಎಲ್ಲರನ್ನು ಬಂಧಿಸಿ ಜೈಲಿಗೆ ಹಾಕಬೇಕೆಂದು ಆಗ್ರಹಿಸಿದರು.
ಇದು ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ಎಂಬುದು ತನಿಖೆಯಿಂದ ಸಾಬೀತಾಗಿದೆ. ಹಣದ ಆಸೆಗಾಗಿ ಸುಕ್ಷೇತ್ರದ ಹೆಸರು ಬಳಸಿಕೊಂಡು ಸುಳ್ಳು ಆರೋಪ ಮಾಡಿದ್ದಾರೆ. ಹಾಗಾಗಿ ವಿಳಂಬ ಮಾಡದೇ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಆರೋಪಿಗಳು ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಎಸ್‌ಐಟಿ ಅವರೇ ಹೇಳಿದ್ದಾರೆ. ಹಣದ ಆಸೆಗಾಗಿ ನಡೆಸಿರುವ ವ್ಯವಸ್ಥಿತ ಹಾಗೂ ಪೂರ್ವ ನಿಯೋಜಿತ ಷಡ್ಯಂತ್ರ ಎಂಬುದು ಸಾಬೀತಾಗಿರುವುದರಿಂದ ಸರ್ಕಾರ ಅವರ ಬಂಧಿಸಲು ಏಕೆ ವಿಳಂಬ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ನಾವು ಪ್ರಾರಂಭದಿಂದಲೂ ಇದು ವ್ಯವಸ್ಥಿತ ಹುನ್ನಾರ ಮತ್ತು ಷಡ್ಯಂತರ ಎಂದು ಪ್ರತಿಪಾದಿಸುತ್ತಲೇ ಬಂದಿದ್ದೇವೆ. ಇದರ ಹಿಂದೆ ದೊಡ್ಡ ದೊಡ್ಡ ಕಾಣದ ಕೈಗಳಿವೆ. ಇವರಿಗೆ ಎಲ್ಲಿಂದ ಹಣ ಬಂತು? ಇದರ ಹಿಂದಿನ ರೂವಾರಿಗಳಾರು? ಯಾವ ಕಾರಣಕ್ಕಾಗಿ ಈ ಷಡ್ಯಂತ್ರ ರೂಪಿಸಿದ್ದರು? ಎಲ್ಲವೂ ಕೂಡ ಬಟಾಬಯಲಾಗಬೇಕು. ಸರ್ಕಾರ ವಿಳಂಬ ಮಾಡಿದರೆ ನಾವು ಸುಮನಿರುವುದಿಲ್ಲ ಎಂದು ಎಚ್ಚರಿಸಿದರು.
ಸದನದಲ್ಲೂ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ. ಗೃಹಸಚಿವರು ಇಲ್ಲವೇ ಸರ್ಕಾರ ಏನೇನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಉತ್ತರ ಬೇಕು? ಅಲ್ಲಿಯ ತನಕ ನಮ ಹೋರಾಟ ನಿಲ್ಲುವುದಿಲ್ಲ ಎಂದು ಅಶೋಕ್ ಎಚ್ಚರಿಸಿದರು. ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇದು ವ್ಯವಸ್ಥಿತ ಪಿತೂರಿ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಧರ್ಮಸ್ಥಳದ ಏಳಿಗೆಯನ್ನು ಸಹಿಸಿದವರು ಈ ರೀತಿ ಷಡ್ಯಂತರ ರೂಪಿಸಿದ್ದಾರೆ. ಸರ್ಕಾರ ಸ್ವಲ್ಪವೂ ವಿಳಂಬ ಮಾಡದೇ ಆರೋಪಿಗಳನ್ನು ಬಂಧಿಸಬೇಕು.
ಇದೊಂದು ಅಂತಾರಾಷ್ಟ್ರೀಯ ಮಟ್ಟದ ಪಿತೂರಿಯಾಗಿರುವುದರಿಂದ ಧರ್ಮಸ್ಥಳದ ಹೆಸರಿಗೆ ಕೆಲವು ದುಷ್ಟಶಕ್ತಿಗಳು ಹಣದ ಆಮಿಷವೊಡ್ಡಿ ಷಡ್ಯಂತರ ನಡೆಸಿದ್ದಾರೆ. ಹಾಗಾಗಿ ಆರೋಪಿಗಳನ್ನು ವಿಳಂಬ ಮಾಡದೆ ಬಂಧಿಸಬೇಕೆಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಮ ನಿಲುವು ಏನಿತ್ತೋ ಅದು ತನಿಖೆಯಲ್ಲೇ ಕಂಡುಬಂದಿದೆ. ಇದು ಪೂರ್ವ ನಿಯೋಜಿತ ಎಂಬುದರಲ್ಲಿ ಎರಡು ಮಾತಿಲ್ಲ. ಧರ್ಮಸ್ಥಳದ ಹೆಸರಿಗೆ ಈ ಕೃತ್ಯ ಎಸಗಲು ಕೆಲವರು ನಡೆಸಿರುವ ಪಿತೂರಿಯ ಭಾಗವಾಗಿದೆ. ಸರ್ಕಾರ ಇನ್ನು ಬಂಧಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಪ್ರಶ್ನೆ ಮಾಡಿದರು.
