ಬೆಂಗಳೂರು,ಫೆ.3- ರಾಜಕೀಯ ಪ್ರವೇಶ ಮಾಡುವ ಆಲೋಚನೆ ಮಾಡಿಲ್ಲ ಎಂದು ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಯಲ್ಲಿ ಮುಂದುವರೆಯುವುದಾಗಿ ಹೇಳಿದರು.
ರಾಜಕೀಯ ಪ್ರವೇಶ ಅಥವಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಊಹಾಪೋಹವನ್ನು ಅವರು ಅಲ್ಲೆಗೆಳೆದರು. ಕೆಂಪೇಗೌಡ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡುವ ಉದ್ದೇಶವನ್ನು ಒಕ್ಕಲಿಗರ ಸಂಘ ಹೊಂದಿದ್ದು, ಅದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಒಕ್ಕಲಿಗರ ಸಂಘದ ಕೋರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಹೃದಯ ಭಾಗದಲ್ಲಿ ಕೆಂಪೇಗೌಡ ಆಸ್ಪತ್ರೆ ಇದೆ. ಅದರ ಅಭಿವೃದ್ಧಿಗೆ ಉಪಯುಕ್ತ ಸಲಹೆ ಕೊಡಲು ಸಂತೋಷವಾಗುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಬೇಕು. ಸಲಹೆಗಳೇ ಅತ್ಯಂತ ಬದಲಾವಣೆ ತರುತ್ತವೆ ಎಂದು ಮಂಜುನಾಥ್ ತಿಳಿಸಿದರು.
ಜಯದೇವ ಆಸ್ಪತ್ರೆಯ ನಿರ್ದೇಶಕ ಸ್ಥಾನದಿಂದ ನಿವೃತ್ತಿಯಾದ ನಂತರ ಹಲವು ಸಂಘಸಂಸ್ಥೆಗಳು ಪ್ರೀತಿ, ಅಭಿಮಾನದಿಂದ ಸನ್ಮಾನಿಸುತ್ತಿವೆ. ರಾಜ್ಯ ಒಕ್ಕಲಿಗರ ಸಂಘವು ಇಂದು ದೊಡ್ಡ ಮಟ್ಟದಲ್ಲಿ ನನ್ನನ್ನು ಸನ್ಮಾನಿಸಿದೆ. ಈ ಸನ್ಮಾನದಿಂದ ಸಂತೋಷವಾಗಿದೆ ಎಂದರು.
ಕಿಮ್ಸ್ ಆಸ್ಪತ್ರೆ ಸಂಪೂರ್ಣ ಜವಾಬ್ದಾರಿಗೆ ಮನವಿ: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ ಮಾತನಾಡಿ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ, ಕೆಂಪೇಗೌಡ ಆಸ್ಪತ್ರೆ, ಸಂಘದ ಅೀಧಿನದಲ್ಲಿರುವ ವೈದ್ಯಕೀಯ ವಿದ್ಯಾಲಯಗಳು ಆಸ್ಪತ್ರೆಗಳು ಸೇರಿದಂತೆ ಮುಂದಿನ ದಿನಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಪೂರ್ಣ ಜವಾಬ್ದಾರಿ ಅಥವಾ ಮೇಲು ಉಸ್ತುವಾರಿಯನ್ನು ಡಾ.ಮಂಜುನಾಥ್ ಅವರಿಗೆ ನೀಡಲು ಜ.31ರಂದು ನಡೆದ ಸಮಿತಿ ಸಭೆಯಲ್ಲಿ ಒಮ್ಮತ ತೀರ್ಮಾನ ಮಾಡಲಾಗಿದೆ.
ವಿಶೇಷ ಅನುಭವವುಳ್ಳ ಮಂಜುನಾಥ್ ಅವರು ತುಂಬು ಮನಸ್ಸಿನಿಂದ ನಮ್ಮ ಮನವಿಯನ್ನು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ. ನಮ್ಮ ಸಂಘದ ಸಂಸ್ಥೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಹೊಸ ವೈದ್ಯಕೀಯ ಸೌಲಭ್ಯಗಳನ್ನು ಪ್ರಾರಂಭಿಸಲು ಅವರ ಅನುಭವ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ. ಅವರ ಅನುಭವದ ಸದುಪಯೋಗವನ್ನು ಪಡೆದುಕೊಳ್ಳಲು ಸಂಘದ ಆಡಳಿತ ಮಂಡಳಿಯು ಉತ್ಸುಕವಾಗಿದ್ದು, ಈ ಸಂಬಂಧ ಅವರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಈಗಷ್ಟೇ ಅವರು ನಿವೃತ್ತರಾಗಿದ್ದಾರೆ. ನಮ್ಮ ಮನವಿಗೂ ಸ್ಪಂಸಿದ್ದಾರೆ. ಜಯದೇವ ಆಸ್ಪತ್ರೆ ರೀತಿಯಂತೆ ನಮ್ಮ ಆಸ್ಪತ್ರೆಯನ್ನು ರಾಷ್ಟ್ರೀಯ , ಅಂತಾರಾಷ್ಟ್ರೀಯ ಮಟ್ಟಕ್ಕೆ ಹೆಸರು ಗಳಿಸಲು ಮಂಜುನಾಥ್ ಅವರ ಸೇವೆಯ ಅಗತ್ಯವಿದೆ ಎಂದರು.
ವೈದ್ಯಕೀಯ ಸೇವೆ ಆದರ್ಶವಾಗಿರಬೇಕು
ಬೆಂಗಳೂರು,ಫೆ.3- ಯಾವುದೇ ಫಲಾಪೇಕ್ಷೆ, ನಿರೀಕ್ಷೆ ಇಲ್ಲದೆ ಸೇವೆ ಮಾಡಬೇಕು. ಸೇವೆಯು ಪ್ರದರ್ಶನವಾಗದೆ ಆದರ್ಶವಾಗಿರಬೇಕು ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಪದ್ಮಭೂಷಣ, ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. ಕುವೆಂಪು ಕಲಾಕ್ಷೇತ್ರದಲ್ಲಿ ರಾಜ್ಯ ಒಕ್ಕಲಿಗರ ಸಂಘ ಹೂಮಳೆ ಸುರಿಸಿ ಮಾಡಿದ ಗೌರವಪೂರ್ವಕ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಸೇವೆಯು ಯಾವಾಗಲೂ ಪ್ರದರ್ಶನವಾಗಿರಬಾರದು. ಕರುಣೆ, ಮಾನವೀಯತೆ, ಬದ್ದತೆಯಿಂದ ಕೂಡಿರಬೇಕು. ಆಗ ನಿವೃತ್ತಿಯ ನಂತರವು ಸಮಾಜ ಗೌರವಿಸುತ್ತದೆ ಎಂದರು. ಪ್ರತಿಯೊಬ್ಬರಿಗೂ ಯಾವುದೇ ಪದವಿಯಿಂದ ನಿವೃತ್ತಿ ಅನಿವಾರ್ಯ. ಆದರೆ ನೆನಪುಗಳು ಮಾತ್ರ ಅಮರವಾಗಿರುತ್ತದೆ. ಆಸ್ಪತ್ರೆ ದೇವಾಲಯವಿದ್ದಂತೆ.
ಆಸ್ಪತ್ರೆಯ ಗೋಡೆಗಳಿಗೆ ದೇವಾಲಯಕ್ಕಿಂತಲೂ ಹೆಚ್ಚಿನ ಪ್ರಾರ್ಥನೆ ಸಲ್ಲಿಸಿರುತ್ತಾರೆ. ಬಡ ರೋಗಿಗಳ ಕಣ್ಣೀರು ಶೇ.1ರಷ್ಟಿದ್ದರೆ ಅದರ ಹಿಂದಿನ ನೋವು 99ರಷ್ಟು ಇರುತ್ತದೆ. ಹೀಗಾಗಿ ಕರುಣೆ, ಹೃದಯವಂತಿಕೆ, ಮಾನವೀಯತೆ, ದೂರದೃಷ್ಟಿಯಿಂದ ಕೆಲಸ ಮಾಡಬೇಕು. ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವಾತಾವರಣವಿದ್ದು, ಪರಸ್ಪರ ಉತ್ತಮ ಸಂಬಂಧವಿರಬೇಕು. ಅನುದಾನಕ್ಕಿಂತ ಅನುಷ್ಠಾನ ಮುಖ್ಯ. ಸಹಾಯ ಮಾಡುವುದೇ ಧರ್ಮ ಎಂದು ಹೇಳಿದರು.
ಇತ್ತೀಚೆಗೆ ಸಂಬಂಧಗಳು ಪೇಪರ್ ತಟ್ಟೆಯಂತೆ ಹರಿದು ಹೋಗುತ್ತಿವೆ. ಅಸೂಯೆ, ಅನುಮಾನ, ಅಹಂಕಾರ ಇರಬಾರದು. ಮಾಡುವ ಸಾಧನೆ ಸಾಮಾನ್ಯ ಜನರಿಗೆ ತಲುಪಿದಾಗ ಗೌರವ ಭಾವನೆ ತನ್ನಿಂದ ತಾನೆ ಬರುತ್ತದೆ ಎಂದು ಹೇಳಿದರು.
17-18 ವರ್ಷಗಳ ಕಾಲ ಜಯದೇವ ಆಸ್ಪತ್ರೆಯಲ್ಲಿ 75 ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ, 8 ಲಕ್ಷ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಎಷ್ಟು ಪಾರಿತೋಷಕ ಪಡೆದೆ ಎನ್ನುವುದಕ್ಕಿಂತ ಎಷ್ಟು ಜನರ ಮನೆಯಲ್ಲಿ ಬೆಳಕು, ರೋಗಿಗಳ ಮುಖದಲ್ಲಿ ನಗುವನ್ನು ತಂದಿದ್ದೇವೆ ಎಂಬುದು ಮುಖ್ಯ ಎಂದರು. ಜಯದೇವ ಆಸ್ಪತ್ರೆಯಲ್ಲಿ ಖಾಸಗಿ ಪಂಚತಾರಾ ಆಸ್ಪತ್ರೆಯಲ್ಲಿ ಶ್ರೀಮಂತರಿಗೆ ಸಿಗುವ ಚಿಕಿತ್ಸೆಯನ್ನು ಬಡವರಿಗೂ ನೀಡಲಾಗುತ್ತಿದೆ. ನಾವು ಸ್ವೀಕರಿಸುವ ಪ್ರಮಾಣ ವಚನದಂತೆ ನಡೆದುಕೊಂಡರೆ ದೇಶ ಮುಂದುವರೆಯಲಿದೆ. ರಾಷ್ಟ್ರ ಕವಿ ಕುವೆಂಪು ಹೇಳುವಂತೆ ನಾವು ಹುಟ್ಟುವಾಗಲು ವಿಶ್ವಮಾನವರು, ಹೋಗುವಾಗಲು ವಿಶ್ವಮಾನವರು. ನಡುವೆಯೂ ವಿಶ್ವಮಾನವರೆನಿಸಿಕೊಳ್ಳಬೇಕು ಎಂದು ಹೇಳಿದರು. ಒಕ್ಕಲಿಗರ ಸಂಘವು ಉತ್ತಮ ಕೆಲಸ ಮಾಡುತ್ತಿದೆ. ಬೆಂಗಳೂರಿನ ಹೃದಯ ಭಾಗದಲ್ಲಿದ್ದು, ಸಂಘ ಮತ್ತು ಸಂಸ್ಥೆಗಳು ನಮ್ಮದು ಎಂಬ ಮನೋಭಾವನೆ ಮೂಡಿಬಂದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿದೆ ಎಂದರು.
ಕೆಂಪೇಗೌಡ ಆಸ್ಪತ್ರೆಯ ಪ್ರಾಂಶುಪಾಲ ಡಾ.ಭಗವಾನ್ ಅವರು ಮಂಜುನಾಥ್ ಅವರ ಸಾಧನೆಯ ಕಿರುಪರಿಚಯ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ, ಪದಾಕಾರಿಗಳು ಹಾಗೂ ನಿರ್ದೇಶಕರು, ಕೆಂಪೇಗೌಡ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಮಂಜುನಾಥ್ ಅವರಲ್ಲಿ ಮನವಿ ಮಾಡಿದರು. ಸಂಘದ ಅಧ್ಯಕ್ಷರಾದ ಡಿ.ಹನುಮಂತಯ್ಯ, ಗೌರವಾಧ್ಯಕ್ಷರಾದ ಬಿ.ಕೆಂಚಪ್ಪಗೌಡರು, ಉಪಾಧ್ಯಕ್ಷರಾದ ಎಲ್.ಶ್ರೀನಿವಾಸ್, ಸಿ.ದೇವರಾಜು, ಪ್ರಧಾನಕಾರ್ಯದರ್ಶಿ ಹೆಚ್.ಸಿ.ಜಯಮುತ್ತು, ಸಹಾಯಕ ಕಾರ್ಯದರ್ಶಿ ವೆಂಕಟರಾಮೇಗೌಡರು, ಖಜಾಚಿ ಸಿ.ಎಂ.ಮಾರೇಗೌಡ, ಕಾರ್ಯಾಧ್ಯಕ್ಷ ಬಿ.ಪಿ.ಮಂಜೇಗೌಡರು, ನಿರ್ದೇಶಕರಾದ ಎನ್. ಬಾಲಕೃಷ್ಣ, ಟಿ.ಕೋನಪ್ಪರೆಡ್ಡಿ, ಅಶೋಕ್ ಹೆಚ್.ಎನ್. ಎಲುವಳ್ಳಿ ಎನ್. ರಮೇಶ್, ಡಾ.ಟಿ.ಹೆಚ್. ಆಂಜನಪ್ಪ, ಕೆ.ಎಸ್.ಸುರೇಶ್, ಎಂ.ಪುಟ್ಟಸ್ವಾಮಿ, ಡಾ. ವಿ.ನಾರಾಯಣಸ್ವಾಮಿ, ಗಂಗಾಧರ್ ಸಿ.ಜಿ., ರಘಗೌಡರು ಎಸ್.ಎಸ್., ಡಾ. ಡಿ.ಕೆ.ರಮೇಶ್, ಹನುಂತರಾಯಪ್ಪ ಆರ್, ಲೋಕೇಶ್ ಬಿ.ನಾಗರಾಜಯ್ಯ ಮತಿತ್ತರರು ಉಪಸ್ಥಿತರಿದ್ದರು.