Friday, November 22, 2024
Homeಬೆಂಗಳೂರುಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಎಷ್ಟು ಬೀದಿನಾಯಿಗಳಿವೆ ಗೊತ್ತೇ..?

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಎಷ್ಟು ಬೀದಿನಾಯಿಗಳಿವೆ ಗೊತ್ತೇ..?

ಬೆಂಗಳೂರು, ಅ.4-ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಭಾರೀ ಇಳಿಮುಖವಾಗುತ್ತಿದ್ದು, 2.79 ಲಕ್ಷ ಬೀದಿ ನಾಯಿಗಳ ಪೈಕಿ ಶೇ.71.85ರಷ್ಟು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ ಎಂದು ಬಿಬಿಎಂಪಿ ಅಧಿಕೃತವಾಗಿ ಪ್ರಕಟಿಸಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿಗಳ ಸಮೀಕ್ಷೆ ನಡೆಸಿರುವ ವರದಿಯನ್ನು ಪಶುಪಾಲನಾ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಬಿಡುಗಡೆಗೊಳಿಸಿದರು.

ಬಳಿಕ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಕೈಗೊಂಡಿರುವ ಸಮೀಕ್ಷೆಯಲ್ಲಿ ಪಾಲಿಕೆಯ 8 ವಲಯಗಳಲ್ಲಿ ಒಟ್ಟು 27, 9335 ಬೀದಿನಾಯಿಗಳು ಕಂಡು ಬಂದಿರುತ್ತದೆ. 2019ನೇ ಸಾಲಿನ ಬೀದಿನಾಯಿಗಳ ಸಮೀಕ್ಷೆಯಲ್ಲಿ 3.10 ಲಕ್ಷ ಬೀದಿನಾಯಿಗಳು ಇರುವುದಾಗಿ ಮತ್ತು ಶೇಕಡ 51.16ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿರುವುದಾಗಿ ಅಂದಾಜಿಸಲಾಗಿತ್ತು.

ಹಾಲಿ ಕೈಗೊಂಡಿರುವ ಸಮೀಕ್ಷೆಯಲ್ಲಿ ಒಟ್ಟು ಶೇ. 71.85 ರಷ್ಟು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿದ್ದು, ಒಟ್ಟಾರೆಯಾಗಿ ಶೇಕಡ 20 ರಷ್ಟು ಸಂತಾನಹರಣ ಶಸ್ತ್ರ ಚಿಕಿತ್ಸೆ ಪ್ರಮಾಣ ಹೆಚ್ಚಳವಾಗಿದೆ. ಬೀದಿನಾಯಿ ಮರಿಗಳ ಸಂಖ್ಯೆಯು ಕಡಿಮೆಯಾಗಿರುತ್ತದೆ. ಪ್ರಸ್ತುತ ಸಾಲಿನ ಸಮೀಕ್ಷೆಯ ವರದಿಯಂತೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡ 10 ರಷ್ಟು ಬೀದಿನಾಯಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ವಿವರಿಸಿದರು.

ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ಪ್ರತಿಪಕ್ಷದ ಹಾಲಿ, ಮಾಜಿ ಶಾಸಕರು

ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕಾರ್ಯ
ಕ್ರಮದ ಯಶಸ್ವಿ ಅನುಷ್ಠಾನದ ಬಗ್ಗೆ ವಸ್ತುನಿಷ್ಠ ಮಾಹಿತಿಯನ್ನು ಪಡೆಯಲು ಹಾಗೂ ಬೀದಿನಾಯಿಗಳ ಹಾವಳಿ ಹಾಗೂ ಅವುಗಳ ನಿಯಂತ್ರಣಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಲು ಎನ್‍ಎಪಿಆರ್ ಇ ಶಿಫಾರಸ್ಸು ಮಾಡಿರುವ ವಿಧಾನವನ್ನು ಅಳವಡಿಸಿಕೊಂಡು ಜುಲೈಯಿಂದ ಒಂದು ತಿಂಗಳ ಕಾಲ ಬೀದಿನಾಯಿಗಳ ಸಮೀಕ್ಷೆ ನಡೆಸಲಾಯಿತು ಎಂದರು.

ಬೀದಿ ನಾಯಿ ಸಮೀಕ್ಷೆಯನ್ನು ಮಿಷನ್ ರೈಬಿಸ್ ಪ್ರಿನ್ಸಿಪಾಲ್ ಸೈಂಟಿಸ್ಟ್ ಡಾ. ಕೆ.ಪಿ.ಸುರೇಶ್ ಸಂಸ್ಥೆ, ಬಿಬಿಎಂಪಿ ಪಶುಪಾಲನಾ ವಿಭಾಗದ ಅಧಿಕಾರಿಗಳು-ಸಿಬ್ಬಂದಿಯವರು, ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಅರೆತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 100 ಸಮೀಕ್ಷೆದಾರರು ಹಾಗೂ 15 ಮೇಲ್ವಿಚಾರಕರು ಸಮೀಕ್ಷೆಯನ್ನು ನಡೆಸಿದರು.

ಬಿಬಿಎಂಪಿಯ ನಾಲ್ಕು ವಿಭಾಗಗಳಾದ ವಸತಿ ಪ್ರದೇಶ, ಕೊಳಚೆ ಪ್ರದೇಶ, ವಾಣಿಜ್ಯ ಪ್ರದೇಶ ಹಾಗೂ ಕೆರೆಗಳನ್ನು 0.5 ಚ.ಕಿ.ಮೀ ವ್ಯಾಪ್ತಿಯ 6850 ಮೈಕ್ರೋಜೋನ್‍ಗಳನ್ನಾಗಿ ವಿಂಗಡಣೆ ಮಾಡಿದ್ದು, ಅದರಲ್ಲಿ ಶೇ.20ರಷ್ಟು ರ್ಯಾಂಡಂ ಸ್ಯಾಂಪಲ್‍ಗಳನ್ನು ಅಂದರೆ 1360 ಮೈಕ್ರೋಜೋನ್‍ಗಳನ್ನು ಸಮೀಕ್ಷೆ ಮಾಡಲು ಆಯ್ಕೆ ಮಾಡಲಾಗಿದೆ. ಬೀದಿ ನಾಯಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ ವ್ಯವಸ್ಥಿತವಾಗಿ ವಾರ್ಡ್‍ವಾರು 50 ತಂಡಗಳ ಸಹಯೋಗದೊಂದಿಗೆ ನಿರ್ವಹಿಸಲಾಗಿದೆ ಎಂದು ವಿವರಿಸಿದರು.

2024ರ ವೇಳೆಗೆ ಅತ್ಯಾಕರ್ಷಕ ಸ್ಲೀಪರ್ ಕೋಚ್ ವಂದೇ ಭಾರತ್

ಪಾಲಿಕೆ ವ್ಯಾಪ್ತಿಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದರಿಂದ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಿರುವುದರಿಂದ ಬೀದಿನಾಯಿಗಳ ಸಂಖ್ಯೆಯು ಇಳಿಕೆಯಾಗಿದೆ. ಈ ಬೀದಿನಾಯಿಗಳ ಸಮೀಕ್ಷೆ ಮುಂದಿನ ದಿನಗಳಲ್ಲಿ ಪಾಲಿಕೆ 8 ವಲಯಗಳಲ್ಲಿ, ವಾರ್ಡ್ ಗಳಲ್ಲಿ ಬೀದಿನಾಯಿ ನಿಯಂತ್ರಣ ಮತ್ತು ಅವುಗಳಿಗೆ ಸಂಬಂದಿತ ಸಮಸ್ಯೆಗಳನ್ನು ಸಂದರ್ಭಕ್ಕನುಗುಣವಾಗಿ ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಯೋಜನೆಗಳನ್ನು ನೀತಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಐಸಿಎಆರ್ ನಿವೇದಿಯ ನಿರ್ದೇಶಕ ಡಾ.ಬಲದೇವ್ ರಾಜ್ ಗುಲಾಟಿ, ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ. ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಲಯವಾರು ಬೀದಿ ನಾಯಿಗಳ ಸಂಖ್ಯೆ
ಪೂರ್ವ 37685,
ಪಶ್ಚಿಮ 22025,
ದಕ್ಷಿಣ 23241,
ದಾಸರಹಳ್ಳಿ 21221,
ಆರ್.ಆರ್.ನಗರ 41266,
ಬೊಮ್ಮನಹಳ್ಳಿ 39183
ಯಲಹಂಕ 36343
ಮಹದೇವಪುರ 58371
ಒಟ್ಟು 279335

RELATED ARTICLES

Latest News