ನವದೆಹಲಿ,ಫೆ.7- ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ನಿರಂತರ ಅನ್ಯಾಯವನ್ನು ಖಂಡಿಸಿ ರಾಜ್ಯಸರ್ಕಾರ ದೆಹಲಿಯ ಜಂತರ್ ಮಂತರ್‍ನಲ್ಲಿಂದು ನನ್ನ ತೆರಿಗೆ ನನ್ನ ಹಕ್ಕು ಧ್ಯೇಯದ ಹೋರಾಟ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯಸರ್ಕಾರ ಸಂಪುಟದ ಎಲ್ಲಾ ಸಚಿವರು, ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಪ್ರಮುಖರು ಭಾಗವಹಿಸಿದ್ದರು.
ಐತಿಹಾಸಿಕವಾಗಿ ನಡೆದ ಈ ಪ್ರತಿಭಟನೆಯಲ್ಲಿ ಕೇಂದ್ರಸರ್ಕಾರ ಅನುಸರಿಸುತ್ತಿರುವ ತಾರತಮ್ಯವನ್ನು ಎಳೆಎಳೆಯಾಗಿ ವಿವರಿಸಿದರು. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಮೊದಲ ಬಾರಿಗೆ ಕರ್ನಾಟಕ ಕೇಂದ್ರದ ವಿರುದ್ಧ ಸಿಡಿದೆದ್ದಿದೆ. ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಣಕಹಳೆ ಊದಿರುವ ಕಾಂಗ್ರೆಸ್ ನಾಯಕರು ನಮ್ಮ ತೆರಿಗೆಯ ಹಕ್ಕನ್ನು ನಮಗೆ ಕೊಡಲೇಬೇಕೆಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೊಡಿಸಿ, ಬೇಕೇ ಬೇಕು ನ್ಯಾಯ ಬೇಕು ಎಂಬ ಘೋಷಣೆಗಳ ಮೂಲಕ ಕೇಂದ್ರಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಯಾದಿಯಾಗಿ ಎಲ್ಲಾ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿಯ ತಾರತಮ್ಯಖಂಡನೀಯ. ದೇಶದಲ್ಲೇ ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ತೆರಿಗೆ ಹಂಚಿಕೆಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರ ವಿತಂಡವಾದಗಳ ಮೂಲಕ ತನ್ನ ಮಲತಾಯಿ ಧೋರಣೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ನಾಯಕರು ವಾಗ್ದಾಳಿ ನಡೆಸಿದರು.
ಕರ್ನಾಟಕದಿಂದ 4.30 ಲಕ್ಷ ಕೋಟಿ ರೂ. ತೆರಿಗೆ ಹಾಗೂ ಸೆಸ್‍ಗಳನ್ನು ಸಂಗ್ರಹಿಸುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಮರಳಿ 50 ಸಾವಿರ ಕೋಟಿ ರೂ.ಗಳನ್ನು ಮಾತ್ರ ನೀಡುತ್ತಿದೆ. ನಮ್ಮ ಸಂಪನ್ಮೂಲವನ್ನೆಲ್ಲಾ ಉತ್ತರ ಭಾರತದ ರಾಜ್ಯಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಜೆಟ್ ಗಾತ್ರಕ್ಕನುಗುಣವಾಗಿ ತೆರಿಗೆ ಪಾಲು ಏರಿಕೆಯಾಗಿಲ್ಲ. 14, 15 ನೇ ಹಣಕಾಸು ಆಯೋಗದಿಂದ ಭಾರೀ ತಾರತಮ್ಯವಾಗಿದೆ. 11 ಸಾವಿರ ಕೋಟಿ ರೂ. ವಿಶೇಷ ಅನುದಾನವನ್ನು ರದ್ದುಪಡಿಸಲಾಗಿದೆ ಎಂದು ಟೀಕಿಸಿದರು.ಪ್ರತಿಭಟನೆ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಹಣಕಾಸು, ಗೃಹ ಸಚಿವರ ಭೇಟಿಗೆ ಸಮಯ ಕೇಳಲಾಗಿತ್ತು. ಪ್ರತಿಭಟನೆ ಪಕ್ಷಾತೀತವಾಗಿದ್ದು, ಜೆಡಿಎಸ್-ಬಿಜೆಪಿಯ ಸಂಸದರೂ ಭಾಗವಹಿಸಬೇಕೆಂದು ಮುಖ್ಯಮಂತ್ರಿ ಪತ್ರ ಬರೆದಿದ್ದರು. ಆದರೆ ವಿಪಕ್ಷಗಳ ಯಾವ ನಾಯಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ.
ರಾಜ್ಯದ ಪರ ಧ್ವನಿ ಎತ್ತದೇ ಬಿಜೆಪಿ ನಾಯಕರು ನೈತಿಕತೆ ಕಳೆದುಕೊಂಡಿದ್ದಾರೆ : ಡಿಕೆಶಿ
ಕೇಂದ್ರದ ತಾರತಮ್ಯದ ವಿರುದ್ಧ ಕರ್ನಾಟಕದ ಬಳಿಕ ಕೇರಳ ಹಾಗೂ ತಮಿಳುನಾಡು ಸರ್ಕಾರಗಳೂ ಕೂಡ ಪ್ರತಿಭಟನೆಗೆ ಮುಂದಾಗಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತೆರಿಗೆ ಹಾಗೂ ಆರ್ಥಿಕ ಅನುದಾನ ಹಂಚಿಕೆ, ಹಣಕಾಸು ಆಯೋಗದ ಜವಾಬ್ದಾರಿ ಇದರಲ್ಲಿ ರಾಜ್ಯಸರ್ಕಾರದ ಪಾತ್ರ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.
ಈ ಹೇಳಿಕೆ ಮೂಲಕ ಆರ್ಥಿಕ ಇಲಾಖೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಪ್ರತಿ ತಿಂಗಳು ಅನುದಾನ ಹಂಚಿಕೆ ಹಾಗೂ ತೆರಿಗೆ ಸಂಗ್ರಹದ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ಬಹಿರಂಗಪಡಿಸುತ್ತದೆ. ಆದರೂ ಹಂಚಿಕೆಯಲ್ಲಿ ತಮ್ಮ ಪಾತ್ರ ಇಲ್ಲ ಎಂದು ಹೇಳುತ್ತಿರುವುದು ನಂಬಲರ್ಹವಲ್ಲ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದಾಗ ಇದಕ್ಕೂ, ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ.
ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ ಎಂದು ನುಣುಚಿಕೊಳ್ಳುತ್ತದೆ. ಅದೇ 2 ರೂ. ದರ ಕಡಿಮೆ ಮಾಡಿದರೆ ಖುದ್ದು ಪ್ರಧಾನಿಯವರೇ ಹೇಳಿಕೆ ನೀಡಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಾರೆ. ಜನರಿಗೆ ಅನ್ಯಾಯವಾದಾಗ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಜಾರಿಕೊಳ್ಳುವುದು. ಅದೇ ಸಣ್ಣಪುಟ್ಟ ಲಾಭವಾಗುವುದಾದರೆ ಅದನ್ನು ದೊಡ್ಡದಾಗಿ ಬಿಂಬಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.