ಬೆಂಗಳೂರು,ಫೆ.7- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರಮಾಪ್ತ ಹಾಗೂ ಗುತ್ತಿಗೆದಾರ ವಿ.ಆರ್.ಪಾಟೀಲ್ ಅವರ ಕಚೇರಿ ಮತ್ತು ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಾ ಹಾಗೂ ಹುಬ್ಬಳ್ಳಿಯಿಂದ ನಾಲ್ಕು ವಾಹನಗಳಲ್ಲಿ ಬಂದ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಳಗ್ಗೆಯೇ ಕೊಪ್ಪಳ ಜಿಲ್ಲೆ ಹೊಸ ಲಿಂಗಾಪುರ ಗ್ರಾಮದಲ್ಲಿರುವ ವಿ.ಆರ್.ಪಾಟೀಲ್ ಒಡೆತನಕ್ಕೆ ಸೇರಿದ ನಿವಾಸ, ಕಚೇರಿ, ಖಾಸಗಿ ಶಾಲೆಗಳು, ನಿವಾಸ ಸೇರಿದಂತೆ ಹಲವು ಕಡೆ ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿರುವ ಶಾರದಾ ಇಂಟನ್ರ್ಯಾಷನಲ್ ಸ್ಕೂಲ್ ಮಾಲೀಕರಾದ ವಿ.ಆರ್ ಪಾಟೀಲ್ ಅವರ ಮನೆ ಹಾಗೂ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವನ್ನು ಪಡೆಯಲಾಗಿತ್ತು. ಮೂಲತಃ ಗುತ್ತಿಗೆದಾರರಾಗಿರುವ ವಿ.ಆರ್.ಪಾಟೀಲ್ ಬೃಹತ್ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.
ಲೋಕೋಪಯೋಗಿ, ನೀರಾವರಿ ಸೇರಿದಂತೆ ವಿವಿಧ ಇಲಾಖೆಯಡಿ ಬರುವ ಕಾಮಗಾರಿಗಳನ್ನು ಹಲವಾರು ವರ್ಷಗಳಿಂದ ನಡೆಸುತ್ತಿದ್ದಾರೆ. ಕಳೆದ ವಾರ ಕೊಪ್ಪಳಕ್ಕೆ ಭೇಟಿ ಕೊಟ್ಟಿದ್ದ ಡಿ.ಕೆ.ಶಿವಕುಮಾರ್, ತಮ್ಮ ಆಪ್ತರಾಗಿರುವ ವಿ.ಆರ್.ಪಾಟೀಲ್ ಮನೆಗೂ ಭೇಟಿ ನೀಡಿದ್ದರು. ಇದರ ಜಾಡು ಹಿಡಿದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕದ ಇತಿಹಾಸದಲ್ಲಿ ಇಷ್ಟು ದೊಡ್ಡ ನಾಟಕ ಮಾಡುವ ಸರ್ಕಾರ ಇನ್ನೊಂದಿಲ್ಲ : ಬೊಮ್ಮಾಯಿ
ಮತ್ತೊಂದೆಡೆ ಬೆಂಗಳೂರಿನ ಹಲವು ಕಡೆಯೂ ಕೆಲವು ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ. ತೆರಿಗೆ ವಂಚನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಪ್ರತಿಷ್ಠಿತ ನಾಲ್ಕಕ್ಕೂ ಹೆಚ್ಚು ಐಟಿ ಕಂಪನಿಗಳ ಮೇಲೆ ಜಂಟಿ ದಾಳಿ ನಡೆಸಲಾಗಿದೆ. ಸುಮಾರು ಎಂಟಕ್ಕೂ ಹೆಚ್ಚು ಸ್ಥಳಗಳಲ್ಲಿ ಗೋವಾ ಮತ್ತು ಬೆಂಗಳೂರಿನ ಐಟಿ ತಂಡ ಮುಂಜಾನೆಯೇ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.