ಬೆಂಗಳೂರು, ಜು.8- ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವರದಿಯನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿಯೇ ಮಂಡಿಸಬೇಕು ಎಂದು ಬಿಜೆಪಿ ರಾಜ್ಯಸರ್ಕಾರವನ್ನು ಆಗ್ರಹಿಸಿದೆ.
ಶಾಸಕ ವಿ. ಸುನಿಲ್ ಕುಮಾರ್, ಸಂಸದ ಪಿ.ಸಿ.ಮೋಹನ್ ಮತ್ತು ಮಾಜಿ ಸಚಿವ ಬೈರತಿ ಬಸವರಾಜ್ ಅವರುಗಳು ಬಿಜೆಪಿ ಕಚೇರಿಯಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.
ಸುನಿಲ್ ಕುಮಾರ್ ಮಾತನಾಡಿ, 450 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿ ಸಿದ್ಧಪಡಿಸಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಬೇಕು. ಇದರ ಬಗ್ಗೆ ಸದನದಲ್ಲಿ ಪ್ರತ್ಯೇಕ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಈ ಸರ್ಕಾರಕ್ಕೆ ವರದಿಗಳ ಅನುಷ್ಠಾನದ ಬಗ್ಗೆ ಬದ್ಧತೆ ಇಲ್ಲ. ಈ ವರದಿಗಳು ಕೇವಲ ಕೋಲ್ಡ್ ಸ್ಟೋರೇಜ್ ಅಥವಾ ಕಸದ ಬುಟ್ಟಿ ಸೇರಲಿವೆ. ಜಾತಿಗಣತಿ ವರದಿಯನ್ನು ಮರೆಮಾಚುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಅಧಿವೇಶನದಲ್ಲೇ ವರದಿಯನ್ನು ಮಂಡಿಸಲಿ, ನಾವು ಚರ್ಚೆಗೆ ಸಿದ್ಧವಿದ್ದೇವೆ. ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಜಾತಿಗಣತಿ ವರದಿಯನ್ನು ಸೇರಿಸಿಲ್ಲ, ರಾಜ್ಯಪಾಲರ ಭಾಷಣದಲ್ಲೂ ಇದರ ಉಲ್ಲೇಖವಿಲ್ಲ. ಘೋಷಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯ ಸರ್ಕಾರದ ಬಳಿ ಡೇಟಾವೇ ಇಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ವರದಿ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ, ಸಿದ್ದರಾಮಯ್ಯ ಸರ್ಕಾರದ ವರದಿ ಅವರ ಕಾಲಕ್ಕೆ ಮುಗಿಯಿತು ಎಂದು ನೇರವಾಗಿ ಒಪ್ಪಿಕೊಳ್ಳಲಿ ಎಂದು ಲೇವಡಿ ಮಾಡಿದರು.
ಈ ಹಿಂದೆ ಕಾಂತರಾಜು ವರದಿಯನ್ನು ಸ್ವೀಕರಿಸಲಿಲ್ಲ, ಜಯಪ್ರಕಾಶ್ ಹೆಗ್ಡೆ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಕೈಬಿಡಲಾಯಿತು. ಕೆಂಪಣ್ಣ, ಸದಾಶಿವ ಆಯೋಗ, ನ್ಯಾ. ನಾಗಮೋಹನ್ ದಾಸ್ ವರದಿಗಳಂತೆ ಈ ವರದಿಯೂ ಕಸದ ಬುಟ್ಟಿಗೆ ಸೇರಬಾರದು. ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯುವ ಹಿಂದಿನ ದಿನವೇ ವರದಿ ಕೈ ಸೇರಿದ್ದು ಹೇಗೆ? ಕಷ್ಣ ಕಚೇರಿಯಲ್ಲಿ ವರದಿ ಸಿದ್ಧವಾಯಿತೇ? ತರಾತುರಿಯಲ್ಲಿ ವರದಿ ಸ್ವೀಕರಿಸಿದ ಹಿಂದಿನ ಒಳ ರಾಜಕಾರಣವೇನು? ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ವಾಸ್ತವದಲ್ಲಿ ಆ ವರ್ಗದ ಜನರಿಗೆ ಅನ್ಯಾಯ ಮಾಡುತ್ತಿದೆ. ಕಾಂತರಾಜ್, ಜಯಪ್ರಕಾಶ್ ಹೆಗ್ಡೆ ಮತ್ತು ಮಧುಸೂದನ್ ನಾಯಕ್ ನೇತತ್ವದ ಸಮಿತಿಗಳ ವರದಿಗಳನ್ನು ಸ್ವೀಕರಿಸಿದ್ದರೂ ಅವುಗಳನ್ನು ಕಾರ್ಯಗತಗೊಳಿಸುವ ಸ್ಪಷ್ಟತೆ ಸರ್ಕಾರಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆಶಿ ಅವರು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ನೆಪದಲ್ಲಿ ಗ್ಯಾರಂಟಿಗಳಿಗೆ ಕತ್ತರಿ ಹಾಕುತ್ತಿದ್ದಾರೆ. ಅದೇ ರೀತಿ ಜಾತಿಗಣತಿ ವರದಿಯನ್ನೂ ಕೋಲ್ಡ್ ಸ್ಟೋರೇಜ್ಗೆ ಹಾಕುವ ಹುನ್ನಾರ ನಡೆಸಿದ್ದಾರೆ. ಕಾಂತರಾಜ್ ವರದಿ, ಜಯಪ್ರಕಾಶ್ ಹೆಗ್ಡೆ ವರದಿ ಮತ್ತು ಇದೀಗ ಮಧುಸೂದನ್ ನಾಯಕ್ ಅವರ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಆದರೆ, ಈ ವರದಿಗಳನ್ನು ಜಾರಿಗೆ ತರುವ ಅಥವಾ ಸಾರ್ವಜನಿಕವಾಗಿ ಚರ್ಚಿಸುವ ಬದ್ಧತೆಯನ್ನು ಸರ್ಕಾರ ತೋರುತ್ತಿಲ್ಲ ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳ ಟೀಕೆ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಚುನಾವಣಾ ಲಕ್ಷಿ ಎಂದು ಜರೆದ ಅವರು, ಪ್ರಧಾನ ಮಂತ್ರಿ ಕಿಸಾನ್ ಸವಾನ್ ಯೋಜನೆಯಂತೆ ಪ್ರತಿ ತಿಂಗಳು ಹಣ ತಲುಪುತ್ತಿಲ್ಲ, ಕೇವಲ ಚುನಾವಣೆ ಬಂದಾಗ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತಿದೆ. ಗ್ಯಾರಂಟಿ ಪರಿಷ್ಕರಣೆಯ ಹೆಸರಿನಲ್ಲಿ ಯೋಜನೆಗಳಿಗೆ ಕತ್ತರಿ ಹಾಕುತ್ತಿರುವ ಸರ್ಕಾರ, ರಾಜ್ಯದ ಜನರ ಗಮನಕ್ಕೆ ತರುವ ಮುನ್ನವೇ ವರದಿಗಳನ್ನು ಕಸದ ಬುಟ್ಟಿಗೆ ಹಾಕುವ ಸಂಚು ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯು ಗ್ಯಾರಂಟಿ ಯೋಜನೆಗಳ ವಿರೋಧಿಯಲ್ಲ, ಬದಲಾಗಿ ಅವುಗಳ ಅವೈಜ್ಞಾನಿಕ ಅನುಷ್ಠಾನವನ್ನು ಮಾತ್ರ ವಿರೋಧಿಸುತ್ತಿದ್ದೇವೆ ಎಂದು ಅವರು ಪುನರುಚ್ಚರಿಸಿದರು.
ಜಾತಿಗಣತಿ ವರದಿಯು ರಾಜ್ಯದ ಭವಿಷ್ಯದ ಯೋಜನೆಗಳು ಮತ್ತು ಅವಕಾಶಗಳ ಹಂಚಿಕೆಗೆ ನಿರ್ಣಾಯಕವಾಗಿರುವುದರಿಂದ, ಅದನ್ನು ತಕ್ಷಣವೇ ಸಾರ್ವಜನಿಕಗೊಳಿಸಬೇಕು ಎಂಬುದು ಬಿಜೆಪಿ ನಾಯಕರ ಪ್ರಮುಖ ಬೇಡಿಕೆಯಾಗಿದೆ.
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ತಮ ಹೆಸರು ಕೇಳಿಬರುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸುನಿಲ್ ಕುಮಾರ್, ನಮ ಪಕ್ಷವು ಜಾತಿ ಆಧಾರಿತವಾಗಿ ಹ್ದುೆಗಳನ್ನು ಹಂಚಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ, ಹಿಂದುಳಿದ ವರ್ಗದ ನಾಯಕರನ್ನು ಕೆಳಗಿಳಿಸಿ, ಆ ವರ್ಗದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದು ತಿರುಗೇಟು ಮಾಡಿದರು.
