Saturday, November 23, 2024
Homeರಾಜ್ಯಜನತಾದರ್ಶನಕ್ಕೆ ಹರಿದುಬಂದ ಜನಸಾಗರ

ಜನತಾದರ್ಶನಕ್ಕೆ ಹರಿದುಬಂದ ಜನಸಾಗರ

ಬೆಂಗಳೂರು,ಫೆ.8- ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಜನತಾದರ್ಶನಕ್ಕೆ ಜನಸಾಗರವೇ ಹರಿದುಬಂದಿತ್ತು. ಇದೇ ಮೊದಲ ಬಾರಿಗೆ ವಿಧಾನಸೌಧದಲ್ಲಿ ಅತ್ಯಂತ ಅಚ್ಚುಕಟ್ಟು ಹಾಗೂ ವ್ಯವಸ್ಥಿತವಾಗಿ ಜನಸ್ಪಂದನವನ್ನು ಆಯೋಜಿಸಲಾಗಿತ್ತು.

ಈ ಮೊದಲೆಲ್ಲಾ ಮುಖ್ಯಮಂತ್ರಿಯವರು ಗೃಹಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಆಯೋಜಿಸುತ್ತಿದ್ದರು. ಅಲ್ಲಿ ಇಕ್ಕಟ್ಟಾದ ಜಾಗ, ವಾಹನ ನಿಲುಗಡೆ ಸಮಸ್ಯೆ, ಮೂಲಸೌಲಭ್ಯಗಳ ಕೊರತೆ ತೀವ್ರವಾಗಿರುತ್ತಿತ್ತುಮತ್ತು ದೂರದೂರಿನಿಂದ ಬರುವ ಜನಸಾಮಾನ್ಯರ ಸಂಚಾರಕ್ಕೂ ಸಮಸ್ಯೆಯಾಗುತ್ತಿತ್ತು. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂಬಂತೆ ವಿಧಾನಸೌಧದಲ್ಲಿ ನಡೆಯುತ್ತಿರುವ ಜನತಾದರ್ಶನಕ್ಕೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ.

ಮೆಜೆಸ್ಟಿಕ್ ಮತ್ತು ರೈಲ್ವೆ ನಿಲ್ದಾಣ, ಕೆ.ಆರ್.ಮಾರುಕಟ್ಟೆಯಿಂದ ವಿಧಾನಸೌಧದವರೆಗೂ ಜನತಾದರ್ಶನಕ್ಕೆ ಬರುವವರಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ವಿಧಾನಸೌಧದಲ್ಲಿ ಸುಮಾರು 40 ಕ್ಕೂ ಹೆಚ್ಚು ಇಲಾಖೆಗಳು ಪ್ರತ್ಯೇಕ ಕೌಂಟರ್‍ಗಳನ್ನು ಸ್ಥಾಪಿಸಿ ಜನರ ಅರ್ಜಿಗಳನ್ನು ನೋಂದಾವಣಿ ಮಾಡಿಕೊಂಡವು. ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ರವಾನಿಸಲು ಮತ್ತು ಸಣ್ಣಪುಟ್ಟ ಸಮಸ್ಯೆಗಳಿದ್ದರೆ ತಕ್ಷಣವೇ ಬಗೆಹರಿಸಲು ಅನುಕೂಲವಾಗುವಂತೆ ಸಲಹೆ ನೀಡಲು ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

ಗಂಭೀರ ಸಮಸ್ಯೆಗಳು ಮತ್ತು ಅಧಿಕಾರಿಗಳ ಕೈಮೀರಿದ ಸಮಸ್ಯೆಗಳನ್ನು ಮುಖ್ಯಮಂತ್ರಿಯವರ ಬಳಿ ಹೇಳಿಕೊಳ್ಳಲು ಅವಕಾಶ ದೊರೆತಿದ್ದರಿಂದ ಸಾವಿರಾರು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ವೈದ್ಯಕೀಯ ಚಿಕಿತ್ಸೆ, ಪಿಂಚಣಿ, ಗೃಹಲಕ್ಷ್ಮಿ ಯೋಜನೆಯ ಅಲಭ್ಯತೆ, ಮನೆ, ಉದ್ಯೋಗ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಜನತಾದರ್ಶನದಲ್ಲಿ ಕಂಡುಬಂದವು.

ಶ್ವೇತಪತ್ರಕ್ಕೆ ಪ್ರತಿಯಾಗಿ ಕಪ್ಪುಪತ್ರ ಬಿಡುಗಡೆ ಮಾಡಿದ ಖರ್ಗೆ

ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಧಾನಸೌಧದ ಗೇಟ್ ನಂ.4 ರ ಮೂಲಕ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಅಲ್ಲಿ ಸರದಿ ಸಾಲು ಕಂಡುಬಂದಿತು. ತಾತ್ಕಾಲಿಕ ಟೆಂಟ್‍ಗಳನ್ನು ಹಾಕಿ ಜನಸಾಮಾನ್ಯರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 7 ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ನಾಗರಿಕರಿಗೆ ಖಾಲಿ ಖುರ್ಚಿ ವ್ಯವಸ್ಥೆಗಳಿದ್ದವು. ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿತ್ತು.

ವಿಕಲ ಚೇತನರು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿಯವರು ಅವರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಆಲಿಸಿದರು. ಎಲ್ಲಾ ಇಲಾಖೆಗಳ ಆಯುಕ್ತರು, ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು ಸ್ಥಳದಲ್ಲೇ ಹಾಜರಿದ್ದು, ಜನರ ಸಮಸ್ಯೆ ಪರಿಹಾರಕ್ಕೆ ನೆರವಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಅವಯಲ್ಲಿ ನಡೆಸಿದ ಜನತಾದರ್ಶನವು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದವು. 2013 ರಿಂದ 2018 ರವರೆಗೂ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಮಾಸಿಕ ಜನತಾದರ್ಶನಗಳನ್ನು ನಡೆಸುತ್ತಿದ್ದರು.

ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದು 8 ತಿಂಗಳು ಕಳೆದಿದ್ದು, ಎರಡನೇ ಬಾರಿಗೆ ಜನತಾದರ್ಶನ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಸಚಿವರು, ಕ್ಷೇತ್ರಮಟ್ಟದಲ್ಲಿ ಶಾಸಕರು ಜನತಾದರ್ಶನಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪ್ರತಿ ತಿಂಗಳಿಗೊಮ್ಮೆ ವಿಶೇಷವಾಗಿ ಜನರ ಸಮಸ್ಯೆ ಆಲಿಸಲು ಸೂಚಿಸಲಾಗಿದೆ. ಅದರ ಹೊರತಾಗಿ ಇಂದು ನಡೆದ ರಾಜ್ಯಮಟ್ಟದ ಜನಸ್ಪಂದನಕ್ಕೆ ಸಾವಿರಾರು ಜನ ಬಂದಿದ್ದು ಅಚ್ಚರಿ ಮೂಡಿಸಿತ್ತು.

RELATED ARTICLES

Latest News