ಡೆವಿಲ್ ಸಿನಿಮಾ ರಿಲೀಸ್ ಗಾಗಿ ತುದಿಗಾಲಿನಲ್ಲಿ ನಿಂತಿರುವವರಿಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಬೆಳಗ್ಗೆ 6 ಗಂಟೆಯಿಂದಾನೇ ಡೆವಿಲ್ ಶೋ ಶುರುವಾಗುತ್ತಿದೆ. ಈ ಖುಷಿ ಬೆನ್ನಲ್ಲೇ ಸೆನ್ಸಾರ್ ಕಡೆಯಿಂದ ಸರ್ಟಿಫಿಕೆಟ್ ಕೂಡ ಸಿಕ್ಕಾಗಿದೆ. ಡಿಸೆಂಬರ್ 11 ರಂದು ಸಿನಿಮಾ ಬಿಡುಗಡೆ ಆಗುತ್ತಿದ್ದು, ಸೆನ್ಸಾರ್ ಪ್ರಮಾಣ ಪತ್ರ ಡಿಸೆಂಬರ್ 10ರ ಮಧ್ಯಾಹ್ನದ ಅಂದ್ರೆ ಇಂದು ಸಿಕ್ಕಿದೆ.
‘ಡೆವಿಲ್’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪ್ರಮಾಣ ಪತ್ರವನ್ನು ಸಿಕ್ಕಿದೆ. 16 ವರ್ಷದ ಮೇಲಿನವರು ಸಿನಿಮಾ ನೋಡಬಹುದಾಗಿದೆ. ಇನ್ನು ‘ಡೆವಿಲ್’ ಸಿನಿಮಾದ ಒಟ್ಟು ರನ್ಟೈಂ ಅಂದರೆ ಒಟ್ಟು ಸಿನಿಮಾದ ಅವಧಿ 2 ಗಂಟೆ 49 ನಿಮಿಷಗಳು ಇದೆ. ಕೆಲ ಮೂಲಗಳ ಪ್ರಕಾರ ‘ಡೆವಿಲ್’ ಸಿನಿಮಾ ಈಗಾಗಲೇ ಯುಎಫ್ಓಗೆ ಅಪ್ಲೋಡ್ ಆಗಿದ್ದು, ಇದೀಗ ಅದಕ್ಕೆ ಪ್ರಮಾಣ ಪತ್ರವನ್ನು ಸಹ ಅಟ್ಯಾಚ್ ಮಾಡಲಾಗುತ್ತಿದೆ. ಆ ಮೂಲಕ ಸಿನಿಮಾ ಯಾವುದೇ ಅಡ್ಡಿ-ಆತಂಕ ಇಲ್ಲದೆ ನಾಳೆ (ಡಿಸೆಂಬರ್ 11) ಬಿಡುಗಡೆ ಆಗಲಿದೆ.
ಈ ಮೊದಲು ‘ಡೆವಿಲ್’ ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಚಿತ್ರತಂಡವು ಸಿನಿಮಾದ ಬಿಡುಗಡೆಯನ್ನು ಡಿಸೆಂಬರ್ 11 ರಂದೇ ಮಾಡುವುದಾಗಿ ಘೋಷಿಸಿತು. ಅಭಿಮಾನಿಗಳ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಚಿತ್ರತಂಡ ಹೇಳಿದೆ. ‘ಡೆವಿಲ್’ ಸಿನಿಮಾನಲ್ಲಿ ದರ್ಶನ್ ಜೊತೆಗೆ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಮಿಲನ ಪ್ರಕಾಶ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾನಲ್ಲಿ ಅಚ್ಯುತ್ ಕುಮಾರ್, ವಿನಯ್ ಗೌಡ, ಗಿಲ್ಲಿ ನಟ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ.
