ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಆರ್ ಚಂದ್ರು ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಚಂದ್ರು ಅವರ ಹುಟ್ಟುಹಬ್ಬದಂದು ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘ ಆರಂಭವಾಗಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಆರ್ ಚಂದ್ರು ಕೆಲವು ವಿಷಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
22 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದವನು ನಾನು ಎಂದು ಮಾತು ಆರಂಭಿಸಿದ ಆರ್ ಚಂದ್ರು, ನಂತರ “ತಾಜ್ ಮಹಲ್” ಚಿತ್ರವನ್ನು ನಿರ್ದೇಶನ ಮಾಡಿದೆ. “ತಾಜ್ ಮಹಲ್” ಚಂದ್ರು ಅಂತಲೇ ಎಲ್ಲರೂ ಕರೆಯುವಷ್ಟು ಆ ಚಿತ್ರ ಯಶಸ್ವಿಯಾಯಿತು. ನಂತರ “ಚಾರ್ ಮಿನಾರ್”, ಆನಂತರ ” ಮೈಲಾರಿ” ಚಿತ್ರಗಳನ್ನು ನಿರ್ದೇಶಿಸಿದ್ದೆ. ಆಗಿನಿಂದ “ಮೈಲಾರಿ” ಚಂದ್ರು ಆದೆ.
ಈ ರೀತಿ ಮಾಧ್ಯಮದವರು, ಉದ್ಯಮದವರು ಹಾಗೂ ಕನ್ನಡ ಅಭಿಮಾನಿಗಳು ನನ್ನ ಮೊದಲ ಚಿತ್ರದಿಂದ ನೀಡುತ್ತಾ ಬರುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ. ಕೆಲವು ವರ್ಷಗಳ ಹಿಂದಿನಿಂದಲೇ ಅಭಿಮಾನಿಗಳ ಸಂಘ ಸ್ಥಾಪಿಸುವುದಾಗಿ ಸ್ನೇಹಿತರು ಹೇಳುತ್ತಾ ಬರುತ್ತಿದ್ದರು. ನಾನು ಬೇಡ ಎನ್ನುತ್ತಿದೆ. ಈ ಬಾರಿ ಎಲ್ಲರ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡಿದ್ದೇನೆ. ನೀವು ಯಾರು ನನ್ನ ಅಭಿಮಾನಿಗಳಲ್ಲ. ನನ್ನ ಸ್ನೇಹಿತರು ಎಂದು ಹೇಳಿದ್ದೇನೆ.
ನಾನು ಮೊದಲಿನಿಂದಲೂ ಕೆಲಸವನ್ನು ದೇವರು ಅಂದುಕೊಂಡು ಬಂದವನು. ನಿಷ್ಠೆಯಿಂದ ಮಾಡುವವನು ಕೂಡ. ಆ ಕರ್ತವ್ಯ ನಿಷ್ಠೆ ನನ್ನ ಈವರೆಗೂ ತಂದು ನಿಲ್ಲಿಸಿದೆ. “ಕಬ್ಜ” ಎಂಬ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹಾಗೆ ಮಾಡಿದೆ. ಇನ್ನು ನಾನು ಇತ್ತೀಚಿಗೆ ಆರ್ ಸಿ ಸ್ಟುಡಿಯೋಸ್ ಎಂಬ ಸಂಸ್ಥೆ ಮೂಲಕ ಐದು ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಿಸುವುದಾಗಿ ಹೇಳಿದ್ದೆ. ಅದರ ಮೊದಲ ಚಿತ್ರವಾಗಿ “ಫಾದರ್” ಚಿತ್ರ ಈ ತಿಂಗಳ ಕೊನೆಗೆ ಆರಂಭವಾಗಲಿದೆ.
ಕೋಟ್ಯಾಂತರ ಮೌಲ್ಯದ ಕಾಂಪ್ಲೆಕ್ಸ್ ವಿಚಾರಕ್ಕೆ ನಡೆದಿತ್ತೇ ಜೋಡಿ ಕೊಲೆ..?
ಡಾರ್ಲಿಂಗ್ ಕೃಷ್ಣ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ತಂದೆಯ ಪಾತ್ರದಲ್ಲಿ ಹೆಸರಾಂತ ನಟ ಪ್ರಕಾಶ್ ರೈ ಅಭಿನಯಿಸುತ್ತಿದ್ದಾರೆ. ಅಪ್ಪ – ಮಗನ ಬಾಂಧವ್ಯದ ಚಿತ್ರವಿದು. ತೆಲುಗಿನ ಸುನೀಲ್ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಒಟ್ಟಿನಲ್ಲಿ ಇದೇ ವರ್ಷ ಐದು ಚಿತ್ರಗಳಿಗೂ ಚಾಲನೆ ಸಿಗಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಆರ್ ಚಂದ್ರು ಅವರ ಸ್ನೇಹಿತರಾದ ಮಂಜುನಾಥ್, ಅಖಿಲ ಕರ್ನಾಟಕ ಆರ್ ಚಂದ್ರು ಅಭಿಮಾನಿಗಳ ಸಂಘದ ಬಗ್ಗೆ ಮಾಹಿತಿ ನೀಡಿದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆರ್ ಚಂದ್ರು ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಅವರ ನಿವಾಸಕ್ಕೆ ಬಂದಿದ್ದರು.