ಬೆಂಗಳೂರು,ಜು.13-ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಶ್ವೇತಾ (21) ಆತಹತ್ಯೆಗೆ ಶರಣಾಗಿರುವ ನವ ವಿವಾಹಿತೆ. ಇವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು.
ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಖಾಸಗಿ ಕಂಪನಿ ಉದ್ಯೋಗಿ ಮೂರ್ತಿ ಎಂಬಾತನನ್ನು ಶ್ವೇತಾ ವಿವಾಹವಾಗಿದ್ದು, ನಗರದ ಹೆಗ್ಗನಹಳ್ಳಿ ಕ್ರಾಸ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ದಂಪತಿ ವಾಸವಾಗಿದ್ದರು.ಮದುವೆ ಸಮಯದಲ್ಲಿ ಶ್ವೇತಾ ಕುಟುಂಬದವರು ವರೋಪಚಾರ ನೀಡಿ ಅದ್ಧೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು.
ದಂಪತಿ ವಾಸವಾಗಿರುವ ಮನೆ ಸಮೀಪದ ರಾಜಗೋಪಾಲ ನಗರದಲ್ಲಿ ಮೂರ್ತಿ ಅಕ್ಕ ನರಸಮ ವಾಸವಾಗಿದ್ದು ಆಗಾಗ್ಗೆ ಇವರ ಮನೆಗೆ ಅವರು ಬಂದು ವರದಕ್ಷಿಣೆ ತರುವಂತೆ ಶ್ವೇತಾಗೆ ಪೀಡಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಇದಕ್ಕೆ ಮೂರ್ತಿ ಸಹ ಕುಮಕ್ಕು ನೀಡುತ್ತಿದ್ದರಿಂದ ಮನೆಯಲ್ಲಿ ಗಲಾಟೆಯಾಗುತ್ತಿತ್ತು. ನಿನ್ನೆ ಬೆಳಗ್ಗೆ ಮತ್ತೆ ದಂಪತಿ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡ ಶ್ವೇತಾ ಪಿಜಿಗೆ ಹೋಗುವುದಾಗಿ ಹೇಳಿ ಹೊರಗೆ ಹೋಗಿದ್ದಾರೆ.ಇತ್ತ ಮೂರ್ತಿ ಮನೆಗೆ ಬೀಗ ಹಾಕಿಕೊಂಡು ಎಲ್ಲಿಗೋ ಹೋಗಿದ್ದಾನೆ. ಮನೆ ಬಿಟ್ಟು ಹೋಗಿದ್ದ ಶ್ವೇತಾಗೆ ತಾಯಿ ಬುದ್ದಿಮಾತು ಹೇಳಿದ್ದರಿಂದ ಮಧ್ಯಾಹ್ನ 2.30 ರ ಸುಮಾರಿನಲ್ಲಿ ವಾಪಸ್ ಆಕೆ ಮನೆಗೆ ಹಿಂದಿರುಗಿದ್ದಾರೆ.
ಆ ವೇಳೆ ಮನೆಗೆ ಬೀಗ ಹಾಕಿರುವುದನ್ನು ಕಂಡು ಮನೆ ಮಾಲೀಕರಾದ ಸರಸ್ವತಿ ಬಾಯಿ ಅವರಿಂದ ಮತ್ತೊಂದು ಕೀ ಪಡೆದುಕೊಂಡು ಬಾಗಿಲು ತೆಗೆದು ಶ್ವೇತಾ ಮನೆ ಒಳಗೆ ಹೋಗಿದ್ದಾರೆ. ಪ್ರತಿನಿತ್ಯ ಮನೆಯಲ್ಲಿ ಗಂಡ ಹಾಗೂ ನಾದಿನಿಯಿಂದ ಜಗಳವಾಗುತ್ತಿದ್ದರಿಂದ ಮನನೊಂದಿದ್ದ ಶ್ವೇತಾ ತಾಯಿಯ ಬುದ್ದಿ ಮಾತಿನಿಂದಲೂ ಸಮಾಧಾನಗೊಳ್ಳದೇ ಆತಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಡೆತ್‌ನೋಟ್‌ನಲ್ಲಿ ತನಗಾದ ನೋವನ್ನು ಬರೆದಿಟ್ಟು ಫ್ಯಾನಿಗೆ ನೇಣು ಹಾಕಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿಯಾದರೂ ಮೂರ್ತಿ ಮನೆಗೆ ಬಾರದಿರುವುದನ್ನು ಗಮನಿಸಿದ ಮನೆ ಮಾಲೀಕರಾದ ಸರಸ್ವತಿ ಬಾಯಿ ಅವರು ಆತನಿಗೆ ಮೊಬೈಲ್ ಕರೆ ಮಾಡಿ ನಿನ್ನ ಪತ್ನಿ ಮನೆಗೆ ಬಂದಿದ್ದಾರೆ, ನೀನು ಎಲ್ಲಿದ್ದಿಯಾ ಎಂದು ವಿಚಾರಿಸಿದ್ದಾರೆ.
ಪತ್ನಿ ಮನೆಗೆ ವಾಪಸ್ ಆಗಿರುವ ವಿಚಾರ ತಿಳಿದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ್ದಾನೆ. ಎಷ್ಟು ಸಮಯವಾದರೂ ಬಾಗಿಲು ತೆಗೆಯದಿದ್ದಾಗ ತನ್ನ ಬಳಿ ಇದ್ದ ಕೀ ಮೂಲಕ ಬಾಗಿಲು ತೆಗೆದು ಒಳಗೆ ಹೋದಾಗ ಶ್ವೇತಾ ಬೆಡ್‌ರೂಮ್‌ನಲ್ಲಿ ಆತಹತ್ಯೆ ಮಾಡಿಕೊಂಡಿರುವುದು ಕಂಡು ಕಿರುಚಿದ್ದಾನೆ.
ಕೂಗಾಟದ ಶಬ್ದ ಕೇಳಿ ಮನೆ ಮಾಲೀಕರು, ಅಕ್ಕಪಕ್ಕದ ನಿವಾಸಿಗಳು ಇವರ ಮನೆ ಬಳಿ ಹೋಗಿ ನೋಡಿದಾಗ ಶ್ವೇತಾ ಆತಹತ್ಯೆ ಮಾಡಿಕೊಂಡಿರುವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸ್ಥಳದಲ್ಲಿ ದೊರೆತ ಡೆತ್‌ನೋಟ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅವರನ್ನು ಸುಮನೆ ಬಿಡಬೇಡಿ ಅಮ್ಮ:
ನನ್ನ ಸಾವಿನ ನನ್ನ ಗಂಡ ಅವರ ಅಕ್ಕನೇ ಕಾರಣ. ಅವರಿಂದ ನನಗೆ ಹಿಂಸೆ ಆಗುತ್ತಿದೆ. ಇನುಂದೆ ನನಗೆ ಬದುಕೋಕೆ ಆಸೆನೇ ಇಲ್ಲ ಅನ್ನೋ ರೀತಿ ಮಾಡಿದ್ದಾರೆ. ನಾನು ಸತ್ತರೆ ಅವರನ್ನ ಮಾತ್ರ ಸುಮನೆ ಬಿಡಬೇಡಿ ಅಮ… ನನ್ನಿಂದ ತಪ್ಪಾಯ್ತು ಕ್ಷಮಿಸಿ ಬಿಡಿ…. ಇಂತಿ ನಿನ್ನ ಪ್ರೀತಿಯ ಮಗಳು ಎಂದು ಡೆತ್‌ನೋಟ್‌ನಲ್ಲಿ ಶ್ವೇತಾ ಬರೆದಿದ್ದಾರೆ.
ಕುಟುಂಬಸ್ಥರ ಆಕ್ರಂದನ:ಮದುವೆಯಾದ ನಾಲ್ಕೇ ತಿಂಗಳಿಗೆ ಮಗಳ ಸಾವನ್ನು ಕಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಶ್ವೇತಾ ಅಮ ಮಗಳನ್ನು ಕಳೆದುಕೊಂಡು ಗೋಳಾಡುತ್ತಿದ್ದ ದೃಶ್ಯ ಎಂತಹವರ ಮನ ಕಲಕುವಂತಿತ್ತು.
