Homeರಾಜ್ಯತಿಂಗಳಾಂತ್ಯದವರೆಗೂ ಮಳೆ ಕೊರತೆಯಾದರೆ ಬರ ಪೀಡಿತ ತಾಲ್ಲೂಕುಗಳ ಘೋಷಣೆ : ಸಚಿವ ಯತೀಂದ್ರ

ತಿಂಗಳಾಂತ್ಯದವರೆಗೂ ಮಳೆ ಕೊರತೆಯಾದರೆ ಬರ ಪೀಡಿತ ತಾಲ್ಲೂಕುಗಳ ಘೋಷಣೆ : ಸಚಿವ ಯತೀಂದ್ರ

ಬೀದರ್‌, ಜು.13- ರಾಜ್ಯದಲ್ಲಿ ಮಳೆಯ ಕೊರತೆ ಈ ತಿಂಗಳಾಂತ್ಯದವರೆಗೂ ಮುಂದುವರೆದರೆ, ಕೇಂದ್ರ ಸರ್ಕಾರದ ಮಾನದಂಡಗಳ ಆಧಾರದ ಮೇಲೆ ಬರ ಪೀಡಿತ ತಾಲ್ಲೂಕುಗಳ ಘೋಷಣೆ ಸಾಧ್ಯವಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊರತೆಯ ಬಗ್ಗೆ ಕೇಂದ್ರ ಸರ್ಕಾರ ನಿರ್ದಿಷ್ಟವಾದ ನಿಯಮಗಳನ್ನು ರೂಪಿಸಿದೆ. ಯಾವ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ, ಮಳೆ ಕೊರತೆಯ ಪ್ರಮಾಣವೆಷ್ಟು ಎಂಬೆಲ್ಲಾ ಅಂಶಗಳನ್ನು ಪರಿಶೀಲಿಸಿ ಬಳಿಕ ಬರ ಪೀಡಿತ ತಾಲ್ಲೂಕುಗಳ ಘೋಷಣೆ ಮಾಡಬೇಕು ಎಂದರು.

ಈ ತಿಂಗಳಾಂತ್ಯದವರೆಗೂ ಮಳೆ ಕೊರತೆಯ ಅಭಾವ ಮುಂದುವರೆದರೆ, ಆಗ ಕೇಂದ್ರ ಸರ್ಕಾರದ ಮಾನದಂಡಗಳು ಪೂರ್ಣಗೊಂಡಂತಾಗುತ್ತವೆ. ಬಳಿಕ ರಾಜ್ಯ ಸರ್ಕಾರ ಬರ ಪೀಡಿತ ತಾಲ್ಲೂಕುಗಳ ಘೋಷಣೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕುಡಿಯುವ ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಿರುವುದಾಗಿ ತಿಳಿಸಿದರು.

ಮುಖ್ಯಮಂತ್ರಿಯವರು ವಿಭಾಗ ಮಟ್ಟದಲ್ಲಿ ಪ್ರಗತಿ ಪರಿಶೀಲನೆ ನಡೆಸಿ, ವಾಸ್ತಾವಾಂಶಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಜಿಲ್ಲಾ ಸಚಿವರು ಆಯಾ ಭಾಗಗಳಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಎಸ್‌‍ಐಆರ್‌ನಲ್ಲಿ ಬಿಎಲ್‌ಒಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪ ಹಾಸ್ಯಾಸ್ಪದವಾಗಿದೆ. ಚುನಾವಣಾ ಆಯೋಗ ಹೊರಡಿಸಿರುವ ಮಾನ ದಂಡದ ಪ್ರಕಾರ 2002ರ ಮತದಾರರ ಪಟ್ಟಿಯಲ್ಲಿ ಮತ್ತು 2025ರ ಪಟ್ಟಿಯಲ್ಲೂ ಹೆಸರಿರಬೇಕು. ಇಲ್ಲದೇ ಹೋದರೆ ಪೂರಕ ದಾಖಲೆಗಳನ್ನು ನೀಡಬೇಕು ಎಂದರು.

ಒಂದು ವೇಳೆ ನಾವು ಅರ್ಹರಲ್ಲದ ಮತದಾರರಿಂದ ಎನ್ಯುಮರೇಷನ್‌ ಅರ್ಜಿಗಳನ್ನು ಕೊಡಿಸಿದರೂ ಅದನ್ನು ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತದೆ. ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಲು ಅವಕಾಶವೇ ಇಲ್ಲ ಎಂದರು.ಬಿಜೆಪಿಯವರು ಮತದಾರರ ಹಕ್ಕುಗಳನ್ನು ಕಸಿಯಲು ಪ್ರಯತ್ನಿಸುತ್ತಿದ್ದಾರೆ. ನಾವು ಜನರ ಹಕ್ಕು ರಕ್ಷಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

RELATED ARTICLES

Latest News