ಬೆಂಗಳೂರು,ಫೆ.11- ಯು ಟರ್ನ್ ಹೊಡೆಯುವ ಗಿರಾಕಿ ನಾನಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ. ಈ ವಿಚಾರವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದರು. ಪಕ್ಷದ ಕಾರ್ಯಕರ್ತರ ಬೇಡಿಕೆ ಹಾಗೂ ನಾಯಕರ ಸೂಚನೆಯಂತೆ ಪಕ್ಷ ಸಂಘಟಿಸುವ ಕಾರ್ಯ ಮಾಡುತ್ತಿದ್ದೇನೆ. ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ಪ್ರಚಾರದಲ್ಲೂ ಭಾಗವಹಿಸುತ್ತೇನೆ ಹೇಳಿದರು.
ಎನ್‍ಡಿಎ ಮೈತ್ರಿಕೂಟ ಸೇರಿರುವುದರಿಂದ ಕ್ಷೇತ್ರ ಹಂಚಿಕೆಗೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಬಿಜೆಪಿ ವರಿಷ್ಠರು ಚರ್ಚಿಸಿ ನಿರ್ಧಾರ ಮಾಡಲಿದ್ದಾರೆ. ಆಗ ಎಲ್ಲ ಗೊಂದಲಗಳಿಗೂ ತೆರೆ ಬೀಳಲಿದೆ ಎಂದರು. ಹಿಂದುಳಿದ ರಾಜ್ಯಗಳಿಗೆ ಅನುದಾನ ಹಂಚಿಕೆ ಬಗ್ಗೆ ಹಣಕಾಸು ಆಯೋಗ ಮಾಡುವ ಶಿಫಾರಸ್ಸು ಅನ್ವಯ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಆದರೂ ಕಾಂಗ್ರೆಸ್‍ನವರು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಈ ವಿಚಾರನ್ನು ರಾಜಕೀಯವಾಗಿ ಬಳಸಿಕೊಂಡು ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾಡಿನ ಜನರು ಬಹಳ ಪ್ರಜ್ಞಾವಂತರು, ಬುದ್ದಿವಂತರು ಆಗಿದ್ದಾರೆ ಎಂದು ಹೇಳಿದರು.
26 ವರ್ಷಗಳ ನಂತರ ಚಿನ್ನದ ಸರ ಕದ್ದಿದ್ದ ಆರೋಪಿ ಅರೆಸ್ಟ್..!
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದ್ದು ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಮೈಸೂರಿಗೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗುತ್ತಿಲ್ಲ. ಈ ವಿಚಾರವನ್ನು ದೂರವಾಣಿ ಮೂಲಕ ಅಮಿತ್ ಷಾ ಅವರಿಗೆ ಕುಮಾರಸ್ವಾಮಿ ತಿಳಿಸಿದ್ದಾರೆ. ನಾಳೆಯಿಂದ ಆರಂಭವಾಗು ವಿಧಾನಸಭೆ ಅಧಿವೇಶನದಲ್ಲಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.