Saturday, November 23, 2024
Homeರಾಜ್ಯಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಧಾನಸಭೆಯಲ್ಲಿ ಕೋಲಾಹಲ

ಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಧಾನಸಭೆಯಲ್ಲಿ ಕೋಲಾಹಲ

ಬೆಂಗಳೂರು, ಫೆ.13- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳು ಮಾಡಿದ ಆರೋಪ ವಿಧಾನಸಭೆ ಕಲಾಪದ ಆರಂಭದಲ್ಲೇ ಕೋಲಾಹಲದ ವಾತಾವಣ ನಿರ್ಮಾಣ ಮಾಡಿತ್ತು. ಬೆಳಗ್ಗೆ 9.40ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹಾವೇರಿಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಲಾಗಿದೆ.

ಶಿವಮೊಗ್ಗದಲ್ಲಿ ಮಚ್ಚು-ಲಾಂಗ್‍ಗಳ ಬ್ಯಾನರ್ ಹಾಕುತ್ತಿದ್ದಾರೆ. ಭಗವಾಧ್ವಜ ಅಳವಡಿಸಲು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಸೈಬರ್ ಕ್ರೈಮ್‍ಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ವಿಚಾರವನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಪ್ರಶ್ನೋತ್ತರವನ್ನು ಬದಿಗಿರಿಸಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಬೆಳಗಾವಿಯ ಅಧಿವೇಶನದಲ್ಲೂ ನಿಲುವಳಿ ಸೂಚನೆ ನೀಡಿದ್ದೇವು. ಆದರೆ ನೀವು ಆಡಳಿತ ಪಕ್ಷದ ಸದಸ್ಯರು ಇರುವ ಬಲಗಡೆ ಮಾತ್ರ ನೋಡುತ್ತಿದ್ದೀರಾ, ವಿರೋಧ ಪಕ್ಷಗಳ ಸದಸ್ಯರು ಇರುವ ಎಡಗಡೆಯೂ ಸ್ವಲ್ಪ ನೋಡಿ ಎಂದು ಸಲಹೆ ನೀಡಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಭಾಧ್ಯಕ್ಷರು ಎಡಗಡೆ ಅಥವಾ ಬಲಗಡೆ ನೋಡುವುದು ಬೇಡ, ನೇರವಾಗಿಯೇ ನೋಡಲಿ. ವಿರೋಧ ಪಕ್ಷಗಳ ಬೇಡಿಕೆಯಂತೆ ಚರ್ಚೆ ಮಾಡಲು ನಮ್ಮ ಅಭ್ಯಂತರ ಇಲ್ಲ. ಅವರ ಕಾಲದಲ್ಲಿ ಬೆಂಗಳೂರಿನಲ್ಲಿ ಹೇಗೆ ಕೊಲೆಗಳಾಗುತ್ತಿದ್ದವು ಎಂದು ನಾನು ಹೇಳುತ್ತೇನೆ. ಅವರು ಹೇಳಲಿ, ಆದರೆ ನಿಯಮಾವಳಿ ಪ್ರಕಾರ ಮೊದಲು ಪ್ರಶ್ನೋತ್ತರ ನಡೆಯಲಿ ಎಂದು ಸಲಹೆ ನೀಡಿದರು.

ಬಿಜೆಪಿ ಶಾಸಕರಾದ ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ ಮಧ್ಯ ಪ್ರವೇಶ ಮಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಚರ್ಚೆಗೆ ಮೊದಲು ಅವಕಾಶ ನೀಡಿ ಎಂದು ಪಟ್ಟು ಹಿಡಿದರು. ಸಚಿವ ಪ್ರಿಯಾಂಕ ಖರ್ಗೆ, ಕಾನೂನು ಸುವ್ಯವಸ್ಥೆ ಹದಗೆಡಿಸುವವರು ನೀವೆ, ಇಲ್ಲಿ ಚರ್ಚೆ ಮಾಡುವವರು ನೀವೆ. ರಾಜ್ಯದ ರೈತರನ್ನು ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ಅದರ ಬಗ್ಗೆಯೂ ಚರ್ಚೆ ಮಾಡೋಣ, ಪಿಎಸ್‍ಐ ನೇಮಕಾತಿ ಹಗರಣದ ಕುರಿತು ನ್ಯಾಯಮೂರ್ತಿ ವೀರಪ್ಪ ಅವರ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗದ ಕುರಿತು ಚರ್ಚೆಯಾಗಲಿ, ರಾಷ್ಟ್ರಧ್ವಜವನ್ನು ಕೆಳಗೆ ಇಳಿಸಿ ಭಗವಾಧ್ವಜ ಏರಿಸುವುದು ಚರ್ಚೆಯಾಗಲಿ, ಪ್ರಸ್ತಾಪ ಮಾಡಿ ಎಂದು ಸವಾಲು ಹಾಕಿದರು.

ನಾವು ಏನು ಪ್ರಸ್ತಾಪ ಮಾಡಬೇಕು ಎಂದು ನೀವು ನಿರ್ದೇಶನ ನೀಡುವ ಅಗತ್ಯ ಇಲ್ಲ ಎಂದು ಸುನೀಲ್ ಕುಮಾರ್ ತಿರುಗೇಟು ನೀಡಿದರು. ಈ ವೇಳೆ ಪ್ರಿಯಾಂಕ್ ಖರ್ಗೆ ಮತ್ತು ಸುನೀಲ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು. ನೀವು ನಮಗೆ ನಿರ್ದೇಶನ ನೀಡುವುದು ಬೇಡ. ನೀವು ಹೇಳಿದ್ದನ್ನು ನಾವು ಕೇಳಬೇಕು, ನಾವು ಹೇಳಕ್ಕೂ ನಿಮ್ಮ ವಿರೋಧ, ಹೇಗಿದೆ ನಿಮ್ಮ ಧೋರಣೆ ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು.
ಡಾ.ಜಿ.ಪರಮೇಶ್ವರ್ ಹಾಗೂ ಅರಗ ಜ್ಞಾನೇಂದ್ರ ಅವರ ನಡುವೆಯೇ ಕಾವೇರಿದ ಚರ್ಚೆಗಳಾದವು. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂದು ಅರಗ ಜ್ಞಾನೇಂದ್ರ ಆರೋಪಿಸಿದರು.

ಆರ್.ಅಶೋಕ್, ನಮಗೆ ಬುದ್ಧಿ ಹೇಳಲು ಬರಬೇಡಿ. ನಿಮ್ಮ ಇಂಡಿಯಾ ಮಿತ್ರಕೂಟಕ್ಕೆ ಹೇಳಿಕೊಳ್ಳಿ ಎಂದು ತಿರುಗೇಟು ನೀಡಿದರು. ಕೆಲಕಾಲ ಕಾವೇರಿದ ಚರ್ಚೆ ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್, ಸದಸ್ಯರು ಆರಂಭದ ಹುಮ್ಮಸ್ಸಿನಲ್ಲಿರುತ್ತಾರೆ. ಅದು ನಿಧಾನಕ್ಕೆ ಸಮಪ್ರಮಾಣಕ್ಕೆ ಬರಲಿ ಎಂದು ಸಲಹೆ ನೀಡಿದರು.

ಎನ್‍ಸಿಪಿ ಹೆಸರು, ಚಿಹ್ನೆಗಾಗಿ ಸುಪ್ರೀಂ ಮೊರೆ ಹೋದ ಶರದ್‍ಪವಾರ್

ಕೊಬ್ಬರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಬೇಕು ಎಂಬ ವಿಚಾರ ಚರ್ಚೆ ಮಾಡಲು ಜೆಡಿಎಸ್‍ನ ಹೆಚ್.ಡಿ.ರೇವಣ್ಣ, ಬಾಲಕೃಷ್ಣ ಅವರು ಮೊದಲು ನಿಲುವಳಿ ಸೂಚನೆ ನೀಡಿದ್ದಾರೆ. ಅನಂತರ ಬಿಜೆಪಿ ಸದಸ್ಯರು ಕಾನೂನು ಸುವ್ಯವಸ್ಥೆ ಕುರಿತು ಚರ್ಚೆಗೆ ಸೂಚನೆ ನೀಡಿದ್ದಾರೆ. ನಿಯಮದ ಪ್ರಕಾರ ಮೊದಲು ಸೂಚನಾ ಪತ್ರ ಕೊಟ್ಟವರಿಗೆ ಅವಕಾಶ ಮಾಡಿಕೊಡಲಾಗುವುದು. ಬಿಜೆಪಿ ಸದಸ್ಯರು ನಾಳೆ ಹೊಸದಾಗಿ ಸೂಚನಾ ಪತ್ರ ಕಳುಹಿಸಿ, ಪರಿಶೀಲಿಸುತ್ತೇನೆ ಎಂದು ಸಭಾಧ್ಯಕ್ಷರು ಹೇಳಿದರು.

ಜೆಡಿಎಸ್‍ನವರು ನಮ್ಮ ಪಾಲುದಾರರಿದ್ದಾರೆ. ಆದರೆ, ಅಧಿಕೃತ ವಿರೋಧ ಪಕ್ಷದ ನಿಲುವಳಿ ಸೂಚನೆಯನ್ನು ಮೊದಲು ಕೈಗೆತ್ತಿಕೊಳ್ಳಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು. ವಿಚಾರ ಗಂಭೀರವಾಗಿದೆ ಎಂದು ಅರಗ ಜ್ಞಾನೇಂದ್ರ ಹೇಳಿದಾಗ, ನಿಲುವಳಿ ಸೂಚನೆ ನೀಡುವಾಗ ಗಂಭೀರ ವಿಚಾರ ಎಂದು ಗೊತ್ತಿರಲಿಲ್ಲವೇ, ಮೊದಲು ಸಭಾಧ್ಯಕ್ಷರ ಕಚೇರಿಗೆ ಸೂಚನಾ ಪತ್ರ ನೀಡಬೇಕಲ್ಲವೇ ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು.
ಸಚಿವ ಪರಮೇಶ್ವರ್, ಕಾನೂನು ಸುವ್ಯವಸ್ಥೆಯನ್ನು ನಿಲುವಳಿ ಸೂಚನೆಯಡಿ ಚರ್ಚಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು.

JEE ಮೇನ್ಸ್ ಪರೀಕ್ಷಾ ಫಲಿತಾಂಶ ಪ್ರಕಟ : 100ಕ್ಕೆ 100 ಅಂಕ ಪಡೆದ 23 ವಿದ್ಯಾರ್ಥಿಗಳು

ವಿರೋಧ ಪಕ್ಷಗಳ ಸದಸ್ಯರು ಧ್ವನಿ ಏರಿಸಿದಾಗ ಆಡಳಿತ ಪಕ್ಷದ ಶಾಸಕರಿಂದಲೂ ಪ್ರತಿ ಗದ್ದಲವಾಯಿತು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊಬ್ಬರಿ ಬೆಲೆ ಕುರಿತು ಇಂದು ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ. ಕಾನೂನು ಸುವ್ಯವಸ್ಥೆ ಕುರಿತು ಹೊಸ ಸೂಚನೆ ಕೊಟ್ಟರೆ ನಾಳೆ ಪರಿಶೀಲಿಸುತ್ತೇನೆ ಎಂದು ಸಭಾಧ್ಯಕ್ಷರು ವಿರೋಧ ಪಕ್ಷದ ನಾಯಕರ ಒತ್ತಾಯಕ್ಕೆ ಸ್ಪಷ್ಟನೆ ನೀಡಿದರು.

ಬಿಜೆಪಿ ಶಾಸಕ ಸಿದ್ದು ಸವದಿ, ಪ್ರಿಯಾಕ್ ಖರ್ಗೆ ಸಮರ್ಥರಿದ್ದಾರೆ ಅವರನ್ನು ಮುಖ್ಯಮಂತ್ರಿ ಮಾಡಿ ಬಿಡಿ ಎಂದು ಛೇಡಿಸಿದರು. ನಿಮ್ಮನ್ನು ಕೇಳಿ ನಮ್ಮಲ್ಲಿ ಅವಕಾಶ ನೀಡುವುದಿಲ್ಲ. ಇಂತಹ ಅನಗತ್ಯ ಚರ್ಚೆ ಬೇಡ ಎಂದು ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದರು.

RELATED ARTICLES

Latest News