ಬೆಂಗಳೂರು, ಫೆ.13- ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಉಳಿದಿದೆ. ಕರ್ನಾಟಕದಲ್ಲಿ ಎಂಪಿ ಎಲೆಕ್ಷನ್ ಕಾವು ಜೋರಾಗುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಮೂಲಕ ಜನತೆ ಮುಂದೆ ಹೋಗಲಿದೆ. ಈ ಹಿನ್ನೆಲೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದು, ತನ್ನ ಭದ್ರಕೋಟೆಗಳನ್ನು ಮತ್ತಷ್ಟು ಭದ್ರಗೊಳಿಸಲು ಮುಂದಾಗಿದೆ. ಹೀಗಾಗಿ ಬಹುತೇಕ ಹಾಲಿ ಸಂಸದರನ್ನೇ ಮತ್ತೊಮ್ಮೆ ಕಣಕ್ಕಿಳಿ ಸುವ ಸಾಧ್ಯತೆಯಿದೆ.
ಹಾಲಿ ಸಂಸದರು ಸ್ಪರ್ಧಿಸಲು ಸಾಧ್ಯವಾಗದ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಹಾಲಿ ಸಂಸದರನ್ನು ಕಣಕ್ಕಿಳಿಸುವ ಮೂಲಕ ನಿರಂತರತೆಯನ್ನು ಕಾಯ್ದುಕೊಳ್ಳಲು ಬಿಜೆಪಿ ಮುಂದಾಗಿದೆ. ಕಮಲ ಪಡೆಯ ಈ ಕಾರ್ಯತಂತ್ರವನ್ನು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಮಾಜಿ ಸಚಿವರೊಬ್ಬರೇ ಖಚಿತಪಡಿಸಿದ್ದಾರೆ. ಹೊಸ ಮುಖಗಳಿಗೆ ಆದ್ಯತೆ ಕೊಡಬೇಕು ಎಂದು ಬದಲಾವಣೆ ಮಾಡಿದರೆ ಪಕ್ಷಕ್ಕೆ ಹೊಡೆತ ಬೀಳಬಹುದು ಎಂಬುದನ್ನು ಬಿಜೆಪಿ ನಾಯಕರು ಅರಿತಂತೆ ಕಾಣುತ್ತಿದೆ.
ಹಾವೇರಿ ಕ್ಷೇತ್ರದಲ್ಲಿ ಸಂಸದ ಶಿವಕುಮಾರ್ ಉದಾಸಿ ಕಣದಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಮತ್ತೊಬ್ಬರನ್ನು ಹುಡುಕಬೇಕಾದ ಅನಿವಾರ್ಯತೆ ಬಿಜೆಪಿಯಲ್ಲಿದೆ. ಇನ್ನು, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ಬದಲಾಯಿಸುವ ಚಿಂತನೆಯನ್ನು ಬಿಜೆಪಿ ನಾಯಕರು ಮಾಡುತ್ತಿದ್ದು, ಹಾಲಿ ಸಂಸದೆ ಮಂಗಳಾ ಅಂಗಡಿ ಬದಲಿಗೆ ಬೇರೆಯವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಪಕ್ಷಕ್ಕೆ ವಾಪಸ್ ಆಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಆಗಬಹುದು ಎನ್ನಲಾಗಿದೆ.
ಎನ್‍ಸಿಪಿ ಹೆಸರು, ಚಿಹ್ನೆಗಾಗಿ ಸುಪ್ರೀಂ ಮೊರೆ ಹೋದ ಶರದ್‍ಪವಾರ್
ಅದು ಬಿಟ್ಟರೇ ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡದಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆಯ ಬಗ್ಗೆ ವದಂತಿಗಳು ಗಿರಕಿ ಹೊಡೆಯುತ್ತಲೇ ಇವೆ. ಆದರೆ, ಈ ಹಿಂದಿನ ಚುನಾವಣೆಗಳಲ್ಲಿ ಬದಲಾವಣೆಗೆ ಕೈ ಹಾಕಿ ಕೈ ಸುಟ್ಟುಕೊಂಡಿರುವುದನ್ನು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮುಂದೆ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ಅಭ್ಯರ್ಥಿ ಆಯ್ಕೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲು ಬಿಜೆಪಿ ಮುಂದಾಗಲ್ಲ ಎಂದು ಹೇಳಲಾಗಿದೆ.
ಬದಲಾವಣೆಗಿಂತ ಗೆಲ್ಲುವ ಕುದುರೆಗಳಿಗೆ ಒತ್ತು!
ಇನ್ನು, ಅಭ್ಯರ್ಥಿ ಆಯ್ಕೆಯಲ್ಲಿ ಗೆಲುವೇ ಪ್ರಮುಖ ಪಾತ್ರವಹಿಸುತ್ತದೆ. ಬದಲಾವಣೆಗಿಂತ ಗೆಲ್ಲುವ ಕುದುರೆಗಳಿಗೆ ಬಿಜೆಪಿ ಒತ್ತು ನೀಡಲಿದ್ದು, ಟಿಕೆಟ್ ಅನಿಶ್ಚಿತತೆ ಎದುರಿಸುತ್ತಿರುವ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಹಂಚಿಕೆ ಸಾಧ್ಯತೆಯ ಸುಳಿವನ್ನು ಬಿಜೆಪಿಯ ಕೋರ್ ಕಮಿಟಿ ಸದಸ್ಯರೊಬ್ಬರು ನೀಡಿದ್ದಾರೆ.
ವಿಭಿನ್ನ ಸಮುದಾಯಗಳನ್ನು ಪ್ರತಿನಿಸುವ ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ ಮತ್ತು ಕಲಬುರಗಿ ಸಂಸದ ಉಮೇಶ್ ಜಾಧವ್ ಅವರ ವಿಚಾರದಲ್ಲಿ ಪಕ್ಷವು ಜಾಣ ನಡೆ ಅನುಸರಿಸಲಿದ್ದು, ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಅವರನ್ನು ಬದಲಾಯಿಸುವ ಕೆಲಸಕ್ಕೆ ಕೈ ಹಾಕಲ್ಲ ಎನ್ನಲಾಗಿದೆ. ಇನ್ನು, ಬಾಗಲಕೋಟೆಯಲ್ಲಿ ಹಾಲಿ ಸಂಸದ ಪಿಸಿ ಗದ್ದಿಗೌಡರ್ ಅವರಂತಹ ನಾಯಕರು ತಮ್ಮದೇ ಪ್ರಭಾವವನ್ನು ಹೊಂದಿದ್ದಾರೆ. ಅಂತವರಿಗೆ ಟಿಕೆಟ್ ನಿರಾಕರಿಸಿದರೆ ಬಿಜೆಪಿಯ ಚುನಾವಣಾ ಭವಿಷ್ಯಕ್ಕೆ ಹೊಡೆತ ಬೀಳಬಹುದು ಎನ್ನಲಾಗಿದೆ.
JEE ಮೇನ್ಸ್ ಪರೀಕ್ಷಾ ಫಲಿತಾಂಶ ಪ್ರಕಟ : 100ಕ್ಕೆ 100 ಅಂಕ ಪಡೆದ 23 ವಿದ್ಯಾರ್ಥಿಗಳು
ಹಾವೇರಿಯಲ್ಲಿ ಶಿವಕುಮಾರ್ ಉದಾಸಿ ಬದಲಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿಸಿ ಪಾಟೀಲ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಅವರ ಪುತ್ರ ಕೆಇ ಕಾಂತೇಶ್, ಡಾ.ಮಹೇಶ್ ನಾಲ್ವಾಡ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಇನ್ನು, ಅನಂತಕುಮಾರ್ ಹೆಗಡೆಯವರು ಇತ್ತೀಚೆಗೆ ಮತ್ತೆ ಸಕ್ರಿಯರಾಗಿದ್ದು, ಉತ್ತರ ಕನ್ನಡದಲ್ಲಿ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಮುಂದುವರಿಯುವ ಸಾಧ್ಯತೆ ಇದೆ.