Thursday, December 11, 2025
Homeರಾಜ್ಯಕಳಪೆ ಔಷಧ ಪೂರೈಕೆ ಸಹಿಸುವುದಿಲ್ಲ : ಸಚಿವ ಗುಂಡೂರಾವ್‌ ಎಚ್ಚರಿಕೆ

ಕಳಪೆ ಔಷಧ ಪೂರೈಕೆ ಸಹಿಸುವುದಿಲ್ಲ : ಸಚಿವ ಗುಂಡೂರಾವ್‌ ಎಚ್ಚರಿಕೆ

Poor drug supply will not be tolerated: Minister Gundurao warns

ಬೆಳಗಾವಿ, ಡಿ.11- ಅವಧಿ ಮೀರಿದ ಮತ್ತು ಕಳಪೆ ಔಷಧಿಗಳ ಪೂರೈಕೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರದ ವೇಳೆಯಲ್ಲಿ ಮಂಗಳೂರಿನ ನಗರ ಶಾಸಕ ವೇದ ವ್ಯಾಸ ಕಾಮತ್‌, ಮಂಗಳೂರಿನ ಆಯುಷ್‌ ಸಂಯುಕ್ತ ಆಸ್ಪತ್ರೆಗೆ ಪೀಠೋಪಕರಣಗಳ ಖರೀದಿಗೆ ಸಿಎಸ್‌‍ಆರ್‌ ಅಡಿ ಒದಗಿಸಲಾಗಿದ್ದ 38.50 ಲಕ್ಷ ರೂಪಾಯಿಗಳ ಅನುದಾನವನ್ನು ನಿಯಮಬಾಹಿರವಾಗಿ ಬಳಕೆ ಮಾಡಲಾಗಿದೆ. ಆರೋಗ್ಯ ಸಮಿತಿಯ ಪೂರ್ವಾನುನುಮತಿ ಪಡೆದಿಲ್ಲ. ಇದು ಸರ್ಕಾರದ ಗಮನದಲ್ಲಿದೆ, ಹೀಗಿದ್ದರೂ ಅಧಿಕಾರಿಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ, ಪ್ರಕರಣವನ್ನು ಸಚಿವರು ಮತ್ತು ಅದಕ್ಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ತನಿಖೆಯಲ್ಲಿದೆ ಎಂದು ನುಣಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಅವಧಿ ಮೀರಿದ ಮದ್ದನ್ನು ರೋಗಿಗಳಿಗೆ ನೀಡುತ್ತಿರುವ ಬಗ್ಗೆ ವಿಡಿಯೋ ಸಾಕ್ಷ್ಯ ಇದೆ. ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದಲೂ ಅವಧಿ ಮೀರಿದ ಔಷಧಿಗಳನ್ನು ಮಂಗಳೂರಿಗೆ ತಂದು ರೋಗಿಗಳಿಗೆ ನೀಡುತ್ತಿರುವುದಾಗಿ ಆರೋಪಿಸಿದರು.

ಟೆಂಡರ್‌ ಪ್ರಕ್ರಿಯೆಗಳಲ್ಲಿ ಔಷಧಿ ಖರೀದಿಸದೆ ಸರ್ಕಾರ ಪೂರೈಸುವ ಔಷಧಿಗಳ ಜೊತೆಗೆ ಅವಧಿ ಮೀರಿದ ಔಷಧಿಗಳನ್ನು ಇರಿಸಿ ಭ್ರಷ್ಟಾಚಾರ ಮಾಡಲಾಗುತ್ತಿದೆ. ಈ ಬಗ್ಗೆ ಲೋಕಾಯುಕ್ತ ತನಿಖೆಯಾಗುತ್ತಿದೆ, ದಾಳಿಗಳು ಕೂಡ ನಡೆದಿವೆ. ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಉತ್ತರ ನೀಡಿದ ಸಚಿವ ದಿನೇಶ್‌ ಗುಂಡೂರಾವ್‌, ಈ ಪ್ರಕರಣದಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಆಯುಕ್ತರು ದೂರು ಸ್ವೀಕರಿಸುತ್ತಿದ್ದಂತೆ ತನಿಖೆ ನಡೆಸಲಾಗಿದೆ, ಇಲಾಖಾ ವಿಚಾರಣೆ ಪ್ರಗತಿಯಲ್ಲಿದೆ, ಆರೋಪಿತರಿಗೆ ಶೋಕಾಸ್‌‍ ನೋಟೀಸ್‌‍ ನೀಡಲಾಗಿದೆ ಎಂದರು.

ಸಿ ಎಸ್‌‍ ಆರ್‌ ನಿಧಿ ದುರುಪಯೋಗವಾಗಿಲ್ಲ ಆದರೆ ನಿಯಮಗಳ ಪಾಲನೆಯಲ್ಲಿ ಲೋಪಗಳಿರುವ ಆರೋಪಗಳಿವೆ. ತನಿಖೆಯಲ್ಲಿ ಇದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಅವಧಿ ಮೀರಿದ ಔಷಧಿ ಮಂಗಳೂರಿನ ಆಸ್ಪತ್ರೆಗೆ ಸರಬರಾಜಾಗಿಲ್ಲ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ಕಂಡುಬಂದಿದೆ. ಆದರೂ ವಿಚಾರಣೆ ನಡೆಸಲಾಗುವುದು. ಅವಧಿ ಮುಗಿಯಲು ಇನ್ನು ಐದಾರು ತಿಂಗಳು ಸಮಯ ಇರುವಂತಹ ಔಷಧಿಗಳನ್ನು ನೀಡಲಾಗಿದೆ. ಅವುಗಳನ್ನು ಆಯುಷ್‌ ಇಲಾಖೆಯಿಂದ ಆಂತರಿಕವಾಗಿಯೇ ಸರಬರಾಜು ಮಾಡಲಾಗಿದೆ. ಹೊರಗಿನಿಂದ ತರಿಸಿಕೊಂಡಿಲ್ಲ ಎಂದರು.

ಇದನ್ನು ಒಪ್ಪದ ಶಾಸಕ ವೇದವ್ಯಾಸ ಕಾಮತ್‌, ಅವಧಿ ಮೀರಿದ ಔಷಧಿ ನೀಡಿರುವುದಕ್ಕೆ ಸ್ಪಷ್ಟ ಸಾಕ್ಷಿ ಇದೆ. ಸಚಿವರು ಯಾವುದೇ ಲೋಪವಾಗಿಲ್ಲ ಎನ್ನುತ್ತಿರುವುದು ಸರಿಯಲ್ಲ ಎಂದಾಗ, ಲೋಪಗಳಾಗಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು.
ಬಸವನಗುಡಿ ಶಾಸಕ ರವಿ ಸುಬ್ರಹಣ್ಯ, ಆಯುಷ್‌ ಔಷಧಿ ಖರೀದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರತಿ ಮೂರು ತಿಂಗಳಿಗೊಮೆ ಹಣ ಬಿಡುಗಡೆಯಾಗುತ್ತಿದೆ.

ವರ್ಷದ ಕೊನೆಯವರೆಗೂ ಅದನ್ನು ಬಳಕೆ ಮಾಡದೆ ತರಾತುರಿಯಲ್ಲಿ ವರ್ಷದ ಕೊನೆಯಲ್ಲಿ ಔಷಧಿ ಖರೀದಿಸುವ ಪ್ರಯತ್ನಗಳಾಗುತ್ತವೆ. ಇದು ವ್ಯವಸ್ಥಿತ ಷಡ್ಯಂತ್ರ ಎಂದು ದೂರಿದರು. ಆಯುಷ್‌ ಇಲಾಖೆಯಲ್ಲಿ ಎಂಟರಿಂದ ಒಂಬತ್ತು ವರ್ಷ ಒಂದೇ ಸ್ಥಳದಲ್ಲಿ ವೈದ್ಯರು ಕೆಲಸ ಮಾಡುತ್ತಿರುವುದು ಕಂಡು ಬಂದಿದೆ ಎಂದು ವಿವರಿಸಿದರು.

RELATED ARTICLES

Latest News