Homeರಾಜ್ಯವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ನೀರು-ವಿದ್ಯುತ್‌ ಉಳಿತಾಯಕ್ಕೆ ಸೂಚನೆ

ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ನೀರು-ವಿದ್ಯುತ್‌ ಉಳಿತಾಯಕ್ಕೆ ಸೂಚನೆ

State Govt instructions to save water and electricity in government offices

ಬೆಂಗಳೂರು, ಜು.17: ಎಲ್‌ನಿನೊ ಪರಿಣಾಮ ಹಾಗೂ ಸಂಪನ್ಮೂಲಗಳ ಸಮರ್ಪಕ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸಚಿವಾಲಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್‌ ಉಳಿತಾಯಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಅವರು ಈ ಸಂಬಂಧ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಮಗ್ರ ಮಾರ್ಗಸೂಚಿ ಹೊರಡಿಸಿದ್ದು, ಅನಗತ್ಯ ವಿದ್ಯುತ್‌ ಹಾಗೂ ನೀರಿನ ಪೋಲು ತಡೆಯಲು ಹಲವು ಕಡ್ಡಾಯ ನಿಯಮಗಳನ್ನು ಜಾರಿಗೊಳಿಸಿದ್ದಾರೆ.ಮಾರ್ಗಸೂಚಿಯಂತೆ, ಕಚೇರಿ ಕೆಲಸ ಮುಗಿದ ಬಳಿಕ ಲೈಟ್‌, ಫ್ಯಾನ್‌, ಎಸಿ, ಕಂಪ್ಯೂಟರ್‌ ಸೇರಿದಂತೆ ಎಲ್ಲಾ ವಿದ್ಯುತ್‌ ಉಪಕರಣಗಳನ್ನು ಕಡ್ಡಾಯವಾಗಿ ಸ್ವಿಚ್‌ ಆಫ್‌ ಮಾಡಬೇಕು. ಸಂಜೆ 6 ಗಂಟೆಯ ಬಳಿಕ ವಿದ್ಯುತ್‌ ಬಳಕೆಯ ಮೇಲೆ ವಿಶೇಷ ನಿಗಾ ಇರಲಿದ್ದು, ಭದ್ರತಾ ಸಿಬ್ಬಂದಿಗೆ ಮೇಲ್ವಿಚಾರಣೆಯ ಜವಾಬ್ದಾರಿ ನೀಡಲಾಗಿದೆ.

ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಿಂದ ಹೊರಡುವ ಮುನ್ನ ವಿದ್ಯುತ್‌ ಉಪಕರಣಗಳು ಆಫ್‌ ಆಗಿರುವುದನ್ನು ಖಚಿತಪಡಿಸಿಕೊಂಡು ಬೀಗ ಹಾಕುವಂತೆ ಸೂಚಿಸಲಾಗಿದೆ. ಈ ಜವಾಬ್ದಾರಿಯನ್ನು ಆಪ್ತ ಕಾರ್ಯದರ್ಶಿಗಳಿಗೂ ವಹಿಸಲಾಗಿದೆ.

ಎಸಿಗಳ ತಾಪಮಾನವನ್ನು 24ರಿಂದ 26 ಡಿಗ್ರಿ ಸೆಲ್ಸಿಯಸ್‌‍ನಲ್ಲೇ ನಿರ್ವಹಿಸುವುದು ಕಡ್ಡಾಯವಾಗಿದ್ದು, ಸಾಧ್ಯವಾದಷ್ಟು ನೈಸರ್ಗಿಕ ಬೆಳಕಿನ ಬಳಕೆಗೆ ಆದ್ಯತೆ ನೀಡಬೇಕು. ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್‌ ಬಳಸುವಂತೆ ಸೂಚಿಸಲಾಗಿದೆ. ಸಚಿವಾಲಯದ ಎಲ್ಲ ಕಟ್ಟಡಗಳಲ್ಲಿ ಎಲ್‌ಇಡಿ ದೀಪಗಳ ಅಳವಡಿಕೆಗೂ ಆದೇಶಿಸಲಾಗಿದೆ.

ನೀರು ಉಳಿತಾಯದ ಭಾಗವಾಗಿ ಕಾರಿಡಾರ್‌ ಹಾಗೂ ಸಭಾಂಗಣಗಳಲ್ಲಿ ಮೋಶನ್‌ ಸೆನ್‌್ಸರ್‌ ಅಳವಡಿಸಲು ಸೂಚನೆ ನೀಡಲಾಗಿದೆ. ನೀರಿನ ಟ್ಯಾಪ್‌ಗಳನ್ನು ಬಳಕೆ ಬಳಿಕ ಕಡ್ಡಾಯವಾಗಿ ಬಂದ್‌ ಮಾಡಬೇಕು. ನೀರಿನ ಬಳಕೆಯನ್ನು ಕಡಿಮೆ ಮಾಡಲು ವಾಟರ್‌ ಏರೇಟರ್‌ಗಳನ್ನು ಅಳವಡಿಸುವುದರ ಜೊತೆಗೆ, ಯಾವುದೇ ಸೋರಿಕೆ ಕಂಡುಬಂದರೆ ತಕ್ಷಣವೇ ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ.

ಎಲ್‌ನಿನೊ ಪರಿಣಾಮದಿಂದ ನೀರು ಮತ್ತು ವಿದ್ಯುತ್‌ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ಸಂಪನ್ಮೂಲಗಳ ಸಮರ್ಥ ಬಳಕೆಗೆ ಸರ್ಕಾರ ಆದ್ಯತೆ ನೀಡಿದೆ.

RELATED ARTICLES

Latest News