ವಾಷಿಂಗ್ಟನ್, ಜು.17- ಕೊಲೆ, ಅಪಹರಣ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಭಾರತೀಯ ಮೂಲದ ಗ್ಯಾಂಗ್ಸ್ಟರ್ ನಿತೀಶ್ ಕೌಶಲ್ ನನ್ನು ಅಮೆರಿಕದ ಫೆಡರಲ್ ತನಿಖಾ ದಳ (ಎಫ್ಬಿಐ) ವರ್ಮಾಂಟ್ನಲ್ಲಿ ಬಂಧಿಸಿದೆ.
ನಿತೀಶ್ ಕೌಶಲ್ ಅವರನ್ನು ಎಫ್ಬಿಐ ತನ್ನ ಅತ್ಯಂತ ಬೇಕಾಗಿರುವ ಅಪರಾಧಿಗಳ ಪಟ್ಟಿಗೆ ಸೇರಿಸಿದ ಕೆಲವೇ ದಿನಗಳಲ್ಲೇ ಈ ಬಂಧನ ನಡೆದಿದೆ.ನಿತೀಶ್ ಕೌಶಲ್ ಅವರನ್ನು ವರ್ಮಾಂಟ್ನಲ್ಲಿ ಬಂಧಿಸಲಾಗಿದೆ ಎಂದು ಎಫ್ಬಿಐ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಕಟಿಸಿದೆ.
ಎಫ್ಬಿಐ ಪ್ರಕಾರ, ಕೌಶಲ್ ಭಾರತೀಯ ಪ್ರಜೆಯಾಗಿದ್ದು, ಜಗ್ಗು ಭಗವಾನ್ಪುರಿಯಾ ಸಂಘಟಿತ ಅಪರಾಧ ಜಾಲದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ. ಅಪಹರಣ, ಹಲ್ಲೆ ಸೇರಿದಂತೆ ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಜಗ್ಗು ಭಗವಾನ್ಪುರಿಯಾ ಸಂಘಟಿತ ಅಪರಾಧ ಜಾಲವು ಭಾರತದ ಪಂಜಾಬ್ ರಾಜ್ಯದಲ್ಲಿ ಹುಟ್ಟಿಕೊಂಡಿದ್ದು, ಅಮೆರಿಕದ ಕ್ಯಾಲಿಫೋರ್ನಿಯಾದ ಸೆಂಟ್ರಲ್ ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದೆ ಎಂದು ಎಫ್ಬಿಐ ಹೇಳಿದೆ. ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ಸೆಂಟ್ರಲ್ ಜಿಲ್ಲಾ ನ್ಯಾಯಾಲಯವು ಜೂನ್ 25ರಂದು ದಾಖಲಾಗಿದ್ದ ಪ್ರಕರಣದಲ್ಲಿ ಕೌಶಲ್ ವಿರುದ್ಧ ಫೆಡರಲ್ ಬಂಧನ ವಾರಂಟ್ ಹೊರಡಿಸಿತ್ತು.
ಎಫ್ಬಿಐನ ಈ ಕ್ರಮವು ಪರೇಷನ್ ಹಾರ್ಡ್ ಬಾಲ್ ಎಂಬ ಅಂತರರಾಷ್ಟ್ರೀಯ ಜಂಟಿ ಕಾರ್ಯಾಚರಣೆಯ ಭಾಗವಾಗಿದೆ. ಅಮೆರಿಕ, ಕೆನಡಾ ಹಾಗೂ ಯುರೋಪ್ನಲ್ಲಿ ಏಕಕಾಲದಲ್ಲಿ ದಾಳಿ ಮತ್ತು ಕಾನೂನು ಜಾರಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭಗವಾನ್ಪುರಿಯಾ ಗ್ಯಾಂಗ್ನ್ನು ಮಟ್ಟಹಾಕುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.
ಭಾರತದಲ್ಲಿ ಬೇರು ಹೊಂದಿರುವ ಅಂತರರಾಷ್ಟ್ರೀಯ ಅಪರಾಧ ಜಾಲಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಕಾನೂನು ಜಾರಿ ಸಂಸ್ಥೆಗಳು ಹೆಚ್ಚಿನ ಗಮನ ಹರಿಸುತ್ತಿರುವುದನ್ನು ಈ ಕಾರ್ಯಾಚರಣೆ ತೋರಿಸಿದೆ.
