ನವದೆಹಲಿ, ಡಿ.11-ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ಇಮ್ಯುನೋಥೆರಪಿ ಔಷಧಿಗಳ ಮೇಲಿನ ಕಸ್ಟಮ್ಸೌ ಸುಂಕ ವಿನಾಯಿತಿ ನೀಡಲು ನೀಡಿದ್ದ ತಮ ಮನವಿಗೆ ಸ್ಪಂದಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಸಂಸತ್ ಭವನದಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಅವರು, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ದೊಡ್ಡ ಮಟ್ಟದ ಪರಿಹಾರ ಒದಗಿಸಿರುವ 33 ಜೀವ ರಕ್ಷಕ ಔಷಧಿಗಳ ಮೇಲೆ ಜಿಎಸ್‌ಟಿ ವಿನಾಯಿತಿ ನೀಡಿರುವ ಕೇಂದ್ರ ಸರ್ಕಾರದ ದೂರದೃಷ್ಟಿಯುಳ್ಳ ನಿರ್ಣಯಕ್ಕೆ ತಮ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಪ್ರಸ್ತುತ ಕೆಲವೇ ಕ್ಯಾನ್ಸರ್ ಔಷಧಿಗಳಿಗೆ ಮಾತ್ರ ಕಸ್ಟಮ್ಸೌ ಸುಂಕ ವಿನಾಯಿತಿ ಲಭ್ಯವಿದ್ದು, ವಿವಿಧ ರೀತಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ಸುಮಾರು 40 ಇಮ್ಯುನೋಥೆರಪಿ ಔಷಧಿಗಳು ಇನ್ನೂ ಕಸ್ಟಮ್ಸೌಸುಂಕ ವಿನಾಯಿತಿಗೆ ಒಳಪಟ್ಟಿಲ್ಲ ಎಂಬ ವಿಚಾರವನ್ನು ಡಾ. ಮಂಜುನಾಥ್ ಅವರು ಸಚಿವರ ಗಮನಕ್ಕೆ ತಂದಿದ್ದಾರೆ.
ಬಹುತೇಕ ಈ ಔಷಧಗಳು ವಿದೇಶದಿಂದ ಆಮದು ಆಗುವುದರಿಂದ, ಕ್ಯಾನ್ಸರ್ ಚಿಕಿತ್ಸೆಯ ಒಟ್ಟು ವೆಚ್ಚ ಇನ್ನೂ ಶ್ರೀಸಾಮಾನ್ಯರಿಗೆ ಭಾರವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಉಳಿದಿರುವ ಇಮ್ಯುನೋಥೆರಪಿ ಔಷಧಿಗಳ ಮೇಲೂ ಕಸ್ಟಮ್ಸೌಸುಂಕ ವಿನಾಯಿತಿ ನೀಡುವಂತೆ ವಿನಂತಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಶ್ರೀಸಾಮಾನ್ಯರಿಗೆ ಮತ್ತಷ್ಟು ಕೈಗೆಟುಕುವಂತೆ, ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಡಾ. ಮಂಜುನಾಥ್ ಅವರು ಕೇಂದ್ರ ಹಣಕಾಸು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
