Homeಬೆಂಗಳೂರುಬೆಂಗಳೂರಲ್ಲಿ ಅನಾಥ ವಾಹನಗಳಿಗೆ ಇಂದಿನಿಂದ ಮುಕ್ತಿ

ಬೆಂಗಳೂರಲ್ಲಿ ಅನಾಥ ವಾಹನಗಳಿಗೆ ಇಂದಿನಿಂದ ಮುಕ್ತಿ

Bengaluru to get rid of abandoned vehicles from today

ಬೆಂಗಳೂರು, ಜು.18- ಅಕ್ರಮವಾಗಿ ರಸ್ತೆಬದಿಯಲ್ಲಿ ನಿಲುಗಡೆಗೊಳಿಸಿದ್ದ ಅನಾಥ ವಾಹನಗಳ ವಿರುದ್ಧ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇಂದಿನಿಂದ ಕಠಿಣ ಕಾರ್ಯಾಚರಣೆ ಆರಂಭಿಸಿದೆ.ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಂ.ಡಿ. ಬ್ಲಾಕ್‌ನ ವರಾಹಿ ದೇವಸ್ಥಾನದ ಬಳಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಾಸಕ ದಿನೇಶ್‌ ಗುಂಡೂರಾವ್‌ ಅವರುಗಳು ಸಾಂಕೇತಿಕವಾಗಿ ವಾಹನಗಳ ಟೋಯಿಂಗ್‌ ಕಾರ್ಯಕ್ಕೆ ಚಾಲನೆ ನೀಡಿದರು.

ಕಳೆದ ವಾರದಿಂದ ಜಿಬಿಎ ಮತ್ತು ಸಂಚಾರಿ ಪೊಲೀಸರು ಬಿಡಾಡಿ ವಾಹನಗಳಿಗೆ ನೋಟಿಸ್‌‍ ಹಾಗೂ ಸ್ಟಿಕ್ಕರ್‌ ಅಂಟಿಸಿ, ಏಳು ದಿನಗಳೊಳಗೆ ವಾಹನಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ, ಸೂಚನೆಯನ್ನು ಪಾಲಿಸದ ವಾಹನಗಳ ವಿರುದ್ಧ ಇದೀಗ ಟೋಯಿಂಗ್‌ ಕಾರ್ಯಾಚರಣೆ ಆರಂಭಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ರಸ್ತೆಗಳು ಸಾರ್ವಜನಿಕರ ಆಸ್ತಿ. ಕೆಲವರು ರಸ್ತೆಬದಿಯಲ್ಲಿ ವರ್ಷಗಳ ಕಾಲ ವಾಹನಗಳನ್ನು ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಸಮಸ್ಯೆಯಾಗುವುದರ ಜೊತೆಗೆ ಕೃತಕ ಟ್ರಾಫಿಕ್‌ ದಟ್ಟಣೆ ಸೃಷ್ಟಿಯಾಗುತ್ತಿದೆ. ಹೀಗಾಗಿ ಮೊದಲಿಗೆ ನೋಟಿಸ್‌‍ ನೀಡಲಾಗಿತ್ತು. ಆದರೂ ವಾಹನ ತೆರವುಗೊಳಿಸದ ಕಾರಣ ಟೋಯಿಂಗ್‌ ಕಾರ್ಯ ಆರಂಭಿಸಲಾಗಿದೆ, ಎಂದು ಹೇಳಿದರು.

ಜಿಬಿಎ ಮಾಹಿತಿ ಪ್ರಕಾರ, ಅಸ್ತ್ರಂ ತಂತ್ರಾಂಶದ ಮೂಲಕ ಸಂಚಾರಿ ಪೊಲೀಸರು 2,751 ಬಿಡಾಡಿ ವಾಹನಗಳನ್ನು ಹಾಗೂ ಸಾರ್ವಜನಿಕರು 1,498 ವಾಹನಗಳನ್ನು ಗುರುತಿಸಿದ್ದು, ಒಟ್ಟು 4,249 ಬಿಡಾಡಿ ವಾಹನಗಳ ಪಟ್ಟಿ ಸಿದ್ಧವಾಗಿದೆ.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಇದುವರೆಗೆ 1,034 ವಾಹನಗಳಿಗೆ ನೋಟಿಸ್‌‍ ಅಂಟಿಸಲಾಗಿದ್ದು, 72 ವಾಹನಗಳ ಮಾಲೀಕರು ದಂಡ ಪಾವತಿಸಿ ತಮ್ಮ ವಾಹನಗಳನ್ನು ತೆರವುಗೊಳಿಸಿದ್ದಾರೆ. ಉಳಿದ ವಾಹನಗಳ ವಿರುದ್ಧ ಹಂತ ಹಂತವಾಗಿ ಟೋಯಿಂಗ್‌ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್‌‍, ಅಪರ ಆಯುಕ್ತ ವೆಂಕಟ ಚಲಪತಿ, ಜಂಟಿ ಆಯುಕ್ತ ಹೇಮಂತ್‌ ಶರಣ್‌‍, ಮುಖ್ಯ ಅಭಿಯಂತರ ವಿಜಯ್‌ ಕುಮಾರ್‌ ಹರಿದಾಸ್‌‍ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News