ಬೆಂಗಳೂರು,ಫೆ.15- 108 ಆರೋಗ್ಯ ಕವಚ ಆಂಬುಲೆನ್ಸ್‍ಗಳ ಸೇವೆಯನ್ನು ಗಡಿ ದಾಟುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಶೀಘ್ರವೇ ಸ್ಪಷ್ಟ ನಿಯಮಾವಳಿ ರೂಪಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನಸಭೆ ಪ್ರಶ್ನೋತ್ತರದ ಅವಧಿಯಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಡಾ.ಭರತ್ ಶೆಟ್ಟಿ ಅವರು ಪ್ರಶ್ನೆ ಕೇಳಿ ಸೂರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿದರು. ಜೊತೆಗೆ 108 ಆಂಬುಲೆನ್ಸ್‍ಗಳು ಜಿಲ್ಲಾ ಗಡಿ ದಾಟಬಾರದು ಎಂದು ಹೇಳಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಶವ ಸಾಗಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಗೆ ಗಡಿ ಭಾಗದಲ್ಲಿ ಆಂಬುಲೆನ್ಸ್ ಅನ್ನು ಬದಲಾವಣೆ ಮಾಡಬೇಕಾಯಿತು ಎಂದು ವಿವರಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‍ರವರು ಆಂಬುಲೆನ್ಸ್ ಪ್ರಯಾಣ ಮಿತಿಯನ್ನು 80 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ವಿನಾಯಿತಿ ನೀಡಲು ಮಾರ್ಗಸೂಚಿಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.
BIG NEWS : ಚುನಾವಣಾ ಬಾಂಡ್ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ,. ಸುಪ್ರೀಂ ಮಹತ್ವದ ತೀರ್ಪು
ಉತ್ತರ ನೀಡಿದ ಸಚಿವ ದಿನೇಶ್ ಗುಂಡೂರಾವ್, ಆಂಬುಲೆನ್ಸ್ ಸೇವೆ ದುರುಪಯೋಗವಾಗಬಾರದು ಎಂಬ ಕಾರಣಕ್ಕಾಗಿ ಗಡಿಮಿತಿಯನ್ನು ನಿಗದಿ ಪಡಿಸಲಾಗಿದೆ. ತುರ್ತು ಸಂದರ್ಭದಲ್ಲಿ ವಿನಾಯಿತಿ ನೀಡುವ ಕುರಿತು ಚರ್ಚೆ ಮಾಡುತ್ತೇವೆ. ಸದ್ಯಕ್ಕೆ 715 ಆಂಬುಲೆನ್ಸ್‍ಗಳು ಮಾತ್ರ 108 ಆರೋಗ್ಯ ಕವಚ ಸೇವೆಯಲ್ಲಿವೆ. ಈ ಪರಿಸ್ಥಿತಿಯಲ್ಲಿ ಸೂರತ್ಕಲ್‍ಗೆ ಹೆಚ್ಚುವರಿ ಆಂಬುಲೆನ್ಸ್ ನೀಡಲು ಸಾಧ್ಯವಿಲ್ಲ. ಆರೋಗ್ಯ ಕವಚಕ್ಕಾಗಿ ಹೊಸ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ. ಆ ವೇಳೆ ಹೆಚ್ಚುವರಿ ಆಂಬುಲೆನ್ಸ್‍ಗಳ ಕಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.