ಬೆಂಗಳೂರು,ಫೆ.16- ರಾಜ್ಯದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳಿರುವ ಪ್ರವಾಸೋದ್ಯಮ ಇಲಾಖೆಗೆ ಮುಖ್ಯಮಂತ್ರಿಯವರು ತಮ್ಮ ಬಜೆಟ್‍ನಲ್ಲಿ ಹೆಚ್ಚು ಗಮನ ಹರಿಸಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಹೂಡಿಕೆದಾರರ ಹಾಗೂ ಪ್ರವಾಸಿಗರ ಸ್ನೇಹಿಯಾಗಿ 2024-29 ರ ಸಾಲಿಗೆ ಪರಿಷ್ಕøತ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.
ಕೊಪ್ಪಳದ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲ ಪ್ರವಾಸಿ ಸೌಲಭ್ಯಗಳಿಗೆ 100 ಕೋಟಿ, ಜಲಾಶಯಗಳ ಹಿನ್ನೀರು, ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಸಾಹಸ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು, ಸಾಹಸ ಪ್ರವಾಸೋದ್ಯಮ ವನ್ನು ಉತ್ತೇಜಿಸಲು 10 ಪ್ರವಾಸಿ ತಾಣಗಳಲ್ಲಿ ಕೇಬಲ್ ಕಾರ್ ಮತ್ತು ರೋಪ್ ವೇ ಸೌಲಭ್ಯ ಸೃಷ್ಟಿ ಮಾಡುವುದಾಗಿ ಘೋಷಿಸಿದ್ದಾರೆ.
ಗೋಕಾಕ್ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿ ಮಾಡುವ ಗುರಿಯನ್ನು ಪ್ರಕಟಿಸಿದ್ದು, ರಾಜ್ಯದ 530 ಸುರಕ್ಷಿತಾ ಸ್ಮಾರಕಗಳನ್ನು ತ್ರಿಡಿ ಲೇಸರ್ ಸ್ಕ್ಯಾನಿಂಗ್ ಮೂಲಕ ಡಿಜಿಟಲ್ ದಾಖಲೀಕರಣ ಮಾಡಲಾಗಿದ್ದು, ಡಿಜಿಟಲ್ ಮಾಹಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುವುದು. ರಾಷ್ಟ್ರಕೂಟರ ಕಾಲದಲ್ಲಿ ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯವನ್ನು ಕಲ್ಬುರ್ಗಿ ಜಿಲ್ಲೆಯ ಕಿತ್ತಾಪುರ ತಾಲೂಕಿನಲ್ಲಿ ನಾಗಾವಿಯಲ್ಲಿ ಸ್ಥಾಪಿಸಲಾಗಿತ್ತು ಎಂಬುದು ಸ್ಥಳೀಯರ ನಂಬಿಕೆ. ಅಲ್ಲಿನ ಪ್ರಾಚ್ಯಾವಶೇಷಗಳ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ನೆರವು ನೀಡಲು ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ
ಬೆಂಗಳೂರಿನ ಹೊರವಲಯದ ರೋರಿಚ್ ಮತ್ತು ದೇವಿಕರಾಣಿ ಎಸ್ಟೇಟ್ ಪ್ರದೇಶದಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ, ಬಾಗಲಕೋಟೆಯ ಐಹೊಳೆಯಲ್ಲಿ ಕೆಎಸ್‍ಟಿಡಿಸಿಯಿಂದ ಸುಸಜ್ಜಿತ ಹೋಟೆಲ್ ನಿರ್ಮಾಣ, ಬೀದರ್, ವಿಜಯಪುರದಲ್ಲಿ ಕರೇಚ್ ಎಂದು ಪ್ರಸಿದ್ಧವಾಗಿರುವ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು 15 ಕೋಟಿ ರೂ., ಬಂಡೀಪುರ, ದಾಂಡೇಲಿ, ಕಬಿನಿಯಲ್ಲಿ ಇಂಟರ್‍ಪ್ರಿಟೇಷನ್ ಸೆಂಟರ್‍ಗಳನ್ನು ನಿರ್ಮಾಣ ಮಾಡಲು 25 ಕೋಟಿ, ಗದಗ ಜಿಲ್ಲೆ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ, ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.