ಬೆಂಗಳೂರು, ಜು.21- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಮನೆ ಬಾಗಿಲಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ವಿತರಣೆಗೆ ಚಾಲನೆ ನೀಡಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ವಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರ ಇದನ್ನು ಆಡಳಿತ ಸುಧಾರಣೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆಯಾದರೂ, ಮೂಲತಃ ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಕ್ರಮ ಎಂಬುದನ್ನು ರಾಜ್ಯದ ಜನರು ಅರಿತಿಕೊಳ್ಳಬೇಕು. ಇಷ್ಟಕ್ಕೂ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಭಾರತದ ಸಂವಿಧಾನದ ಪ್ರಕಾರ ಪೌರತ್ವ, ವಿದೇಶಿಯರ ಗುರುತಿಸುವಿಕೆ ಹಾಗೂ ವಲಸೆ ಸಂಬಂಧಿತ ವಿಷಯಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಅಧಿಕಾರದ ಮಿತಿಯನ್ನು ಮೀರಿ ನಡೆದುಕೊಳ್ಳುತ್ತಿರುವುದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧ ಎಂದಿದ್ದಾರೆ.
ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರಮಾಣಪತ್ರಗಳನ್ನು ಮನೆ ಮನೆಗೆ ವಿತರಿಸುವ ಆತುರವೇಕೆ? ಇದರ ಹಿಂದೆ ಇರುವ ಉದ್ದೇಶವೇನು? ಅಕ್ರಮ ವಲಸಿಗರು ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲು ಈ ಸರ್ಕಾರ ಬಾಗಿಲು ತೆರೆಯುತ್ತಿದೆಯೇ ಎಂಬ ಅನುಮಾನಗಳು ಸಹಜವಾಗಿ ಮೂಡುತ್ತಿವೆ. ರಾಷ್ಟ್ರೀಯ ಭದ್ರತೆ ಮತ್ತು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಸಂವಿಧಾನ ಉಲ್ಲಂಘಿಸಲು ಯಾರಿಗೂ ಅಧಿಕಾರವಿಲ್ಲ: ಕಂದಾಯ ಇಲಾಖೆಯ ಮೂಲಕ ಈ ಪ್ರಮಾಣಪತ್ರ ವಿತರಣೆಗೆ ಮುಂದಾಗಿರುವುದು ಭ್ರಷ್ಟಾಚಾರ, ನಕಲಿ ದಾಖಲೆಗಳ ಸೃಷ್ಟಿ ಹಾಗೂ ಅಧಿಕಾರ ದುರುಪಯೋಗಕ್ಕೆ ಅವಕಾಶ ಕಲ್ಪಿಸುವ ಅಪಾಯಕಾರಿ ನಿರ್ಧಾರವಾಗಿದೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯದ ಭವಿಷ್ಯವನ್ನು ಪಣಕ್ಕಿಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ತಕ್ಷಣ ನಿಲ್ಲಿಸಬೇಕು. ಸ್ಥಳೀಯ ಕನ್ನಡಿಗರ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವನ್ನು ನಾವು ಒಪ್ಪುವುದಿಲ್ಲ. ಆಡಳಿತದ ಹೆಸರಿನಲ್ಲಿ ಸಂವಿಧಾನವನ್ನು ಉಲ್ಲಂಘಿಸಲು ಯಾರಿಗೂ ಅಧಿಕಾರವಿಲ್ಲ ಎಂದಿದ್ದಾರೆ.
ಈ ಸಂವಿಧಾನಬಾಹಿರ ಶಾಶ್ವತ ನಿವಾಸಿ ಪ್ರಮಾಣಪತ್ರ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಸರ್ಕಾರ ಹೊರಡಿಸಿರುವ ಪ್ರಸ್ತಾವನೆಯನ್ನು ಹಿಂಪಡೆಯಬೇಕು ಎಂದು ನಾನು ಮತ್ತೊಮೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ. ಸಂವಿಧಾನದ ಆಶಯಗಳು, ಕನ್ನಡಿಗರ ಹಕ್ಕುಗಳು ಮತ್ತು ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ಸಂವಿಧಾನ ಬಾಹಿರ ನಡೆ ವಿರುದ್ಧ ನಾವು ಕಾನೂನಾತಕವಾಗಿ ಮತ್ತು ರಾಜಕೀಯವಾಗಿ ಹೋರಾಡುತ್ತೇವೆ. ರಾಷ್ಟ್ರೀಯ ಭದ್ರತೆಗೆ ಮಾರಕವಾಗಿರುವ ಇದರ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಜನಾಂದೋಲನ ಕಟ್ಟುತ್ತೇವೆ ಎಂದು ಅಶೋಕ್ ತಿಳಿಸಿದ್ದಾರೆ.
ಭ್ರಷ್ಟ, ಜನವಿರೋಧಿ ಆಡಳಿತಕ್ಕೆ ರಾಜ್ಯದ ಜನತೆ ತಕ್ಕ ಉತ್ತರ :
ಅಲ್ಲದೆ, ಮತ್ತೊಂದು ಪೋಸ್ಟ್ ಮಾಡಿರುವ ಆರ್.ಅಶೋಕ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಯಾವ ಮಟ್ಟಿಗೆ ತಲುಪಿದೆ ಎನ್ನುವುದಕ್ಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರಿಂದಲೇ ಕೆಲ ಪೊಲೀಸ್ ಅಧಿಕಾರಿಗಳು ಲಂಚ ಸ್ವೀಕರಿಸಿರುವ ಆರೋಪವೇ ಸಾಕ್ಷಿಯಾಗಿದೆ. ಗಹ ಇಲಾಖೆಯ ವೈಫಲ್ಯದಿಂದ ರಾಜ್ಯದ ಭದ್ರತೆ ಹಾಗೂ ಕನ್ನಡಿಗರ ಅಸ್ತಿತ್ವ ಹಾಗೂ ಹಿತಾಸಕ್ತಿಯೇ ಪ್ರಶ್ನಾರ್ಥಕವಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಈ ಅಕ್ರಮ ಜಾಲಕ್ಕೆ ನಿಮ ಸರ್ಕಾರದ ಉತ್ತರವೇನು? ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಅಕ್ರಮ ವಲಸಿಗರಿಗೆ ರಕ್ಷಣೆ ನೀಡಲಾಗುತ್ತಿದೆಯೇ? ಕನ್ನಡಿಗರ ಸುರಕ್ಷತೆ, ರಾಜ್ಯದ ಭದ್ರತೆ ಮತ್ತು ಕಾನೂನಿನ ಗೌರವವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಭ್ರಷ್ಟ ಹಾಗೂ ಜನವಿರೋಧಿ ಆಡಳಿತಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
